ADVERTISEMENT

ರಾಷ್ಟ್ರ ಮಟ್ಟದ ಕಬಡ್ಡಿ: ಒಎನ್‌ಜಿಸಿ, ಸೌತ್ ಸೆಂಟ್ರಲ್ ರೈಲ್ವೆ ತಂಡಕ್ಕೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 1 ಮೇ 2011, 19:30 IST
Last Updated 1 ಮೇ 2011, 19:30 IST

ಸುರತ್ಕಲ್: ಆರಂಭದ ಹಿನ್ನಡೆಯಿಂದ ಚೇತರಿಸಿಕೊಂಡ ಮೇಲೆ ಹಿಡಿತ ಸಾಧಿಸಿದ ಒಎನ್‌ಜಿಸಿ ತಂಡ, ಭೋಪಾಲ್‌ನ ಇಎಂಇ ತಂಡವನ್ನು ಸೋಲಿಸಿ ಕಾರ್ಮಿಕರ ದಿನಾಚರಣೆ ಅಂಗವಾಗಿ ನಡೆದ ರಾಷ್ಟ್ರ ಮಟ್ಟದ ಹೊನಲು ಬೆಳಕಿನ ಆಹ್ವಾನ ಕಬಡ್ಡಿ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡಿತು.

ಇಂಟಕ್ ಮತ್ತು ಜಯ ಕರ್ನಾಟಕ ಸಂಘಟನೆ ಜಂಟಿ ಆಶ್ರಯದಲ್ಲಿ ನವ ಮಂಗಳೂರು ಬಂದರು ಮಂಡಳಿ ಮೈದಾನದಲ್ಲಿ ನಡೆದ ಈ ಟೂರ್ನಿಯ ಮಹಿಳೆಯರ ವಿಭಾಗದ ಪಂದ್ಯ ಏಕಪಕ್ಷೀಯವಾಗಿದ್ದು, ಸೌತ್ ಸೆಂಟ್ರಲ್ ರೈಲ್ವೆ ಚಾಂಪಿಯನ್ ಆಯಿತು. ಪಂದ್ಯದಲ್ಲಿ ‘ರೈಲು’ ಸಾಗಿದ ವೇಗಕ್ಕೆ, ಎದುರಾಳಿ ಮುಂಬೈಯ ದೇನಾ ಬ್ಯಾಂಕ್ ನಡುಗಿತು. ಫೈನಲ್ ಪಂದ್ಯ 18-4 ರಲ್ಲಿ ರೈಲ್ವೆ ಪರ ಇತ್ಯರ್ಥವಾಯಿತು. ವಿರಾಮದ ವೇಳೆ ಸ್ಕೋರ್ 12-3.
ಪುರುಷರ ವಿಭಾಗದ ಅಂತಿಮ ಪಂದ್ಯದಲ್ಲಿ ಒಎನ್‌ಜಿಸಿ 25-17 ರಲ್ಲಿ ಜಯ ಗಳಿಸಿತು. ಆರಂಭದಲ್ಲಿ ಗಮನ ಸೆಳೆದ ಸೇನೆಯ ಘಟಕವಾದ ಎಲೆಕ್ಟ್ರಿಕಲ್ ಮತ್ತು ಮೆಕ್ಯಾನಿಕಲ್ ಎಂಜಿನಿಯರಿಂಗ್(ಇಎಂಇ) ತಂಡ ಒಂದು ಹಂತದಲ್ಲಿ 8-5ರ ಮುನ್ನಡೆ ಸಾಧಿಸಿತ್ತು. ಆದರೆ ಮೂವರು ಅಂತರರಾಷ್ಟ್ರೀಯ ಆಟಗಾರರನ್ನು ಹೊಂದಿದ್ದ ಒಎನ್‌ಜಿಸಿ ಆಟಕ್ಕೆ ಕುದುರಿಕೊಂಡ ಮೇಲೆ ಹಿಡಿತ ಸಾಧಿಸಿತು.

ಪುರುಷರ ವಿಭಾಗದ ಸೆಮಿಫೈನಲ್ ಪಂದ್ಯಗಳಲ್ಲಿ ಒಎನ್‌ಜಿಸಿ ತಂಡ 40-23ರಲ್ಲಿ ದೆಹಲಿಯ ಬಿಎಸ್‌ಎಫ್ ತಂಡವನ್ನು ಮಣಿಸಿದರೆ, ಭೋಪಾಲದ ಇಎಂಇ ತಂಡ 20-18 ರಲ್ಲಿ ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್) ತಂಡವನ್ನು ಸೋಲಿಸಿತು.

ADVERTISEMENT

ಮಹಿಳೆಯರ ವಿಭಾಗದ ಸೆಮಿಫೈನಲ್ ಪಂದ್ಯಗಳಲ್ಲಿ ಸೌತ್ ಸೆಂಟ್ರಲ್ ರೈಲ್ವೆ 24-13 (ವಿರಾಮ: 13-7) ಮೂಡುಬಿದಿರೆಯ ಆಳ್ವಾಸ್ ಕ್ರೀಡಾ ಕ್ಲಬ್ ಮೇಲೆ ಜಯಗಳಿಸಿದರೆ, ದೇನಾ ಬ್ಯಾಂಕ್ 30-22ರಲ್ಲಿ ಸೆಂಟ್ರಲ್ ಬ್ಯಾಂಕ್ ತಂಡದ ಸವಾಲನ್ನು ಬದಿಗೊತ್ತಿತು.

ವೈಯಕ್ತಿಕ ಪ್ರಶಸ್ತಿ: ಐಸಿಎಫ್‌ನ ರಾಜಾ ಗುರು ಟೂರ್ನಿಯ ಉತ್ತಮ ರೈಡರ್ ಎನಿಸಿದರೆ, ಜಗದೀಶ್ ಕುಂಬ್ಳೆ ಉತ್ತಮ ಕ್ಯಾಚರ್ ಗೌರವ ಪಡೆದರು. ಒಎನ್‌ಜಿಸಿ ಯ ಮನ್‌ಪ್ರೀತ್ ಸಿಂಗ್ ಉತ್ತಮ ಆಲ್‌ರೌಂಡರ್ ಶ್ರೇಯಕ್ಕೆ ಪಾತ್ರರಾದರು.

ಮಹಿಳೆಯರ ವಿಭಾಗದಲ್ಲಿ ದೇನಾ ಬ್ಯಾಂಕ್‌ನ ಸುವರ್ಣ ಫಲ್ಕೆ ಉತ್ತಮ ರೈಡರ್ ಗೌರವ ಪಡೆದರೆ, ಉತ್ತಮ ಕ್ಯಾಚರ್ ಶ್ರೇಯಕ್ಕೆ ಆಳ್ವಾಸ್ ಕ್ರೀಡಾ ಕ್ಲಬ್‌ನ ಸುನೀತಾ ಮತ್ತು ಉತ್ತಮ ಆಲ್‌ರೌಂಡರ್ ಹಿರಿಮೆಗೆ ಖ್ಯಾತ ಆಟಗಾರ್ತಿ ಮಮತಾ ಪೂಜಾರಿ ಪಾತ್ರರಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.