ADVERTISEMENT

ರೋಸ್‌ಬರ್ಗ್‌ಗೆ ಜಯ

ಎಫ್‌–1: ಫೋರ್ಸ್‌ ಇಂಡಿಯಾಕ್ಕೆ 9 ಪಾಯಿಂಟ್‌

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2014, 19:30 IST
Last Updated 16 ಮಾರ್ಚ್ 2014, 19:30 IST

ಮೆಲ್ಬರ್ನ್‌ (ಪಿಟಿಐ/ ರಾಯಿಟರ್ಸ್‌): ಮರ್ಸಿಡಿಸ್‌ ತಂಡದ ನಿಕೊ ರೋಸ್‌ಬರ್ಗ್‌ ಭಾನುವಾರ ನಡೆದ ಋತುವಿನ ಮೊದಲ ಫಾರ್ಮುಲಾ ಒನ್‌ ರೇಸ್‌ ‘ಆಸ್ಟ್ರೇಲಿಯಾ ಗ್ರ್ಯಾನ್‌ ಪ್ರಿ’ನಲ್ಲಿ ಅಗ್ರಸ್ಥಾನ ಪಡೆದರು.

ಅಲ್ಬರ್ಟ್‌ ಪಾರ್ಕ್‌ ಟ್ರ್ಯಾಕ್‌ನಲ್ಲಿ ನಡೆದ ರೇಸ್‌ನಲ್ಲಿ ಮೂರನೆಯವರಾಗಿ ಸ್ಪರ್ಧೆ ಆರಂಭಿಸಿದ್ದ ರೋಸ್‌ಬರ್ಗ್‌ ಅದ್ಭುತ ಚಾಲನಾ ಕೌಶಲ ಮೆರೆದು ಮೊದಲಿಗರಾಗಿ ಗುರಿಮುಟ್ಟಿದರು.

ಮೆಕ್‌ಲಾರೆನ್‌ ತಂಡದ ಕೆವಿನ್‌ ಮ್ಯಾಗ್ನಸೆನ್‌ ಮತ್ತು ಜೆನ್ಸನ್‌ ಬಟನ್‌ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ತಮ್ಮದಾಗಿಸಿಕೊಂಡರು. ರೆಡ್‌ಬುಲ್‌ ತಂಡದ ಡೇನಿಯಲ್‌ ರಿಚಾರ್ಡೊ ಎರಡನೆಯವರಾಗಿ ಸ್ಪರ್ಧೆ ಕೊನೆಗೊಳಿಸಿದ್ದರು. ಅದರೆ ಅವರ ಕಾರು ನಿಗದಿತ ಮಿತಿಗಿಂತ ಹೆಚ್ಚಿನ ಇಂಧನ ಬಳಸಿದ್ದು ಸಾಬೀತಾದ ಕಾರಣ ಅನರ್ಹಗೊಂಡರು. ಈ ಕ್ರಮದ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ರೆಡ್‌ಬುಲ್ ತಂಡ ಹೇಳಿದೆ.

‘ಪೋಲ್‌ ಪೊಸಿಷನ್‌’ನಿಂದ ಸ್ಪರ್ಧೆ ಆರಂಭಿಸಿದ್ದ ಮರ್ಸಿಡಿಸ್‌ ತಂಡದ ಲೂಯಿಸ್‌ ಹ್ಯಾಮಿಲ್ಟನ್‌ ಮತ್ತು ಹಾಲಿ ಚಾಂಪಿಯನ್‌ ಸೆಬಾಸ್ಟಿಯನ್‌ ವೆಟೆಲ್‌ ಸ್ಪರ್ಧೆ ಕೊನೆಗೊಳಿಸುವಲ್ಲಿ ವಿಫಲರಾಗಿ ನಿರಾಸೆ ಅನುಭವಿಸಿದರು. ಇಬ್ಬರ ಕಾರಿನ ಎಂಜಿನ್‌ನಲ್ಲಿ ತೊಂದರೆ ಕಾಣಿಸಿಕೊಂಡ ದ್ದರಿಂದ ಅರ್ಧದಲ್ಲೇ ಹಿಂದೆ ಸರಿದರು.

ಹುಲ್ಕೆನ್‌ಬರ್ಗ್‌ಗೆ ಆರನೇ ಸ್ಥಾನ: ಫೋರ್ಸ್‌ ಇಂಡಿಯಾದ ಇಬ್ಬರು ಚಾಲಕರೂ ಪಾಯಿಂಟ್‌ ಗಿಟ್ಟಿಸಿ ತಂಡಕ್ಕೆ  ಈ ಋತುವಿನಲ್ಲಿ ಸ್ಮರಣೀಯ ಆರಂಭ ನೀಡಿದ್ದಾರೆ. ಈ ತಂಡದ ಚಾಲಕ ನಿಕೊ ಹುಲ್ಕೆನ್‌ಬರ್ಗ್‌ ಆರನೇ ಸ್ಥಾನ ಪಡೆದು ಎಂಟು ಪಾಯಿಂಟ್‌ ಗಿಟ್ಟಿಸಿಕೊಂಡರು. ಇನ್ನೊಬ್ಬ ಚಾಲಕ ಸೆರ್ಜಿಯೊ ಪೆರೆಜ್‌ 10ನೇ ಸ್ಥಾನ ಪಡೆದು ಒಂದು ಪಾಯಿಂಟ್‌ ತಮ್ಮದಾಗಿಸಿಕೊಂಡರು.

ಹುಲ್ಕೆನ್‌ಬರ್ಗ್‌ ಮತ್ತು ಪೆರೆಜ್‌ ರೇಸ್‌ನಲ್ಲಿ ಕ್ರಮವಾಗಿ ಏಳು ಹಾಗೂ 11ನೇ ಸ್ಥಾನ ಪಡೆದಿದ್ದರು. ಆದರೆ ರಿಚಾರ್ಡೊ ಅನರ್ಹಗೊಂಡ ಕಾರಣ ಇಬ್ಬರೂ ಒಂದು ಸ್ಥಾನ ಮೇಲಕ್ಕೇರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.