ADVERTISEMENT

ಲಂಕಾಕ್ಕೆ ಭಾರತ ತಂಡದ ಸವಾಲು

​ಪ್ರಜಾವಾಣಿ ವಾರ್ತೆ
Published 20 ಜುಲೈ 2012, 19:30 IST
Last Updated 20 ಜುಲೈ 2012, 19:30 IST

ಹಂಬಂಟೊಟಾ, ಶ್ರೀಲಂಕಾ (ಪಿಟಿಐ): ಸ್ವಲ್ಪ ವಿರಾಮ ಪಡೆದಾಗಿದೆ. ಮೈಮನಸ್ಸಿಗೆ ಈಗ ಹೊಸ ಉತ್ಸಾಹ. ಅದೇ ಹುಮ್ಮಸ್ಸಿನೊಂದಿಗೆ ಈ ಕ್ರಿಕೆಟ್ ಋತುವಿನ ಮೊದಲ ಪಂದ್ಯ ಗೆದ್ದು ವಿಶ್ವಾಸ ಹೆಚ್ಚಿಸಿಕೊಳ್ಳಬೇಕು. ಅಂಥದೊಂದು ಆಶಯ ಹೊಂದಿದೆ ಭಾರತ ತಂಡ.

ಶನಿವಾರ ಇಲ್ಲಿ ಆರಂಭವಾಗಲಿರುವ ಐದು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯ ಪ್ರಥಮ ಪಂದ್ಯದಲ್ಲಿಯೇ ಶ್ರೀಲಂಕಾ ತಂಡವನ್ನು ಮಣಿಸುವ ಕನಸು ಕಂಡಿದೆ ಮಹೇಂದ್ರ ಸಿಂಗ್ ದೋನಿ ನಾಯಕತ್ವದ ಪಡೆ. ನಿರೀಕ್ಷಿಸಿದ ಫಲ ಸಿಗುತ್ತದೆ ಎನ್ನುವ ಭರವಸೆಗೂ ಕೊರತೆ ಇಲ್ಲ. ಆದರೆ ಬಯಸಿದ ಫಲಿತಾಂಶ ಹೊರಹೊಮ್ಮುವಂತೆ ಮಾಡಲು ಬಲವುಳ್ಳ ಆಟವಾಡಬೇಕು ಎನ್ನುವ ಸತ್ಯವನ್ನಂತೂ `ಮಹಿ~ ಅರಿತಿದ್ದಾರೆ.

ಆದ್ದರಿಂದಲೇ ಎದುರಿಗೆ ಇರುವುದು ಆತಿಥೇಯ ತಂಡವೆಂದು ಎಚ್ಚರಿಸಿದ್ದಾರೆ. ಮಾಹೇಲ ಜಯವರ್ಧನೆ ನೇತೃತ್ವದ ಸಿಂಹಳೀಯರ ಪಡೆಯು ಸುಲಭವಾಗಿ ಗೆಲುವಿನ ದಾರಿ ಬಿಡುವುದಿಲ್ಲ ಎನ್ನುವ ಸತ್ಯವನ್ನು ಮನದಲ್ಲಿ ಬಿತ್ತಿಕೊಂಡಿದ್ದಾರೆ ದೋನಿ ಬಳಗದವರು. ಇತ್ತೀಚೆಗೆ ಪಾಕಿಸ್ತಾನ ವಿರುದ್ಧದ ಏಕದಿನ ಹಾಗೂ ಟೆಸ್ಟ್ ಸರಣಿಯನ್ನು ಗೆದ್ದಿರುವ ಲಂಕಾ ತನ್ನ ಶಕ್ತಿ ಏನೆಂದು ಸಾಬೀತುಪಡಿಸಿದೆ.

ADVERTISEMENT

ತನ್ನ ನೆಲದಲ್ಲಿ ಆಡುವಾಗ ಶ್ರೀಲಂಕಾ ಇನ್ನೂ ಹೆಚ್ಚು ಅಪಾಯಕಾರಿ. ಅದಕ್ಕೆ ಪಾಕ್ ವಿರುದ್ಧದ ಸರಣಿಯೇ ಸಾಕ್ಷಿ. ಆದರೂ ಭಾರತವು ಸಿಂಹಳೀಯರನ್ನೇ ಕಾಡುವ ಹುಲಿಯಾಗುವ ಛಲ ಹೊಂದಿದೆ. `ನಮಗೇನು ಇಲ್ಲಿನ ವಾತಾವರಣ ಹೊಸದಲ್ಲ~ ಎಂದು ದೋನಿ ನಿರಾಳವಾಗಿ ಹೇಳಿರುವುದೇ ಪ್ರವಾಸಿ ತಂಡದವರ ಛಲಕ್ಕೆ ಹಿಡಿದ ಕನ್ನಡಿ.

ಆತಿಥೇಯ ತಂಡದ ನಾಯಕ ಜಯವರ್ಧನೆ ಯಶಸ್ಸಿನ ಓಟವನ್ನು ಮುಂದುವರಿಸುವ ಆಶಯ ಹೊಂದಿದ್ದಾರೆ. `ಪಾಕಿಸ್ತಾನ ವಿರುದ್ಧ ಉತ್ತಮ ಫಲ ಸಿಕ್ಕಿದೆ. ಅದೇ ರೀತಿಯಲ್ಲಿ ಈ ಸರಣಿಯಲ್ಲಿಯೂ ಸಕಾರಾತ್ಮಕ ಯೋಚನೆಯೊಂದಿಗೆ ಹೋರಾಡುತ್ತೇವೆ~ ಎಂದು ಅವರು ಹೇಳಿದ್ದಾರೆ.

ತಂಡದಲ್ಲಿ ಕಾಣಿಸಿಕೊಂಡಿರುವ ಹೊಸ ಆಟಗಾರರ ಮೇಲೆಯೂ ಮಾಹೇಲ ಭರವಸೆ ಹೊಂದಿದ್ದಾರೆ. 24 ವರ್ಷ ವಯಸ್ಸಿನ ಎಡಗೈ ವೇಗಿ ಐಸುರು ಉದಾನಗೆ ಈ ಪಂದ್ಯದಲ್ಲಿ ಆಡುವ ಅವಕಾಶ ನೀಡುವ ಯೋಚನೆ ಮಾಡಿದ್ದಾರೆ ಜಯವರ್ಧನೆ. ಈ ಸರಣಿಗಾಗಿ ತಂಡಕ್ಕೆ ಹಿಂದಿರುಗಿರುವ ಚಾಮರ ಕಪುಗೆಡೆರಾ ಹಾಗೂ ರಂಗನ ಹೆರಾತ್ ಕೂಡ ಹನ್ನೊಂದರ ಪಟ್ಟಿಯಲ್ಲಿ ಕಾಣಿಸಿಕೊಳ್ಳುವುದು ಖಚಿತ.

ಭಾರತ ತಂಡವು ಬ್ಯಾಟಿಂಗ್ ಜೊತೆಗೆ ಸ್ಪಿನ್ ದಾಳಿಗೆ ಒತ್ತು ನೀಡುವುದು ಸಹಜ. ಆದ್ದರಿಂದ ರವಿಚಂದ್ರನ್ ಅಶ್ವಿನ್ ಮೇಲಿನ ಜವಾಬ್ದಾರಿ ಹೆಚ್ಚು. ವೀರೇಂದ್ರ ಸೆಹ್ವಾಗ್ ಹಾಗೂ ಅಜಿಂಕ್ಯ ರಹಾನೆ ಅವರು ಇನಿಂಗ್ಸ್‌ಗೆ ಭದ್ರ ಬುನಾದಿ ಹಾಕುವ ಮೂಲಕ ಬ್ಯಾಟಿಂಗ್ ಬಲ ಕುಗ್ಗದಂತೆ ಮಾಡಿದರೆ ಪ್ರವಾಸಿ ತಂಡದ ಗೆಲುವಿನ ಕನಸು ಒಡೆಯುವುದಿಲ್ಲ!

ತಂಡಗಳು: ಭಾರತ: ಮಹೇಂದ್ರ ಸಿಂಗ್ ದೋನಿ (ನಾಯಕಿ), ವಿರಾಟ್ ಕೊಹ್ಲಿ (ಉಪ ನಾಯಕ), ಗೌತಮ್ ಗಂಭೀರ್, ಸುರೇಶ್ ರೈನಾ, ವೀರೇಂದ್ರ ಸೆಹ್ವಾಗ್, ರೋಹಿತ್ ಶರ್ಮ, ರವಿಚಂದ್ರನ್ ಅಶ್ವಿನ್, ಪ್ರಗ್ಯಾನ್ ಓಜಾ, ಜಹೀರ್ ಖಾನ್, ಉಮೇಶ್ ಯಾದವ್, ಅಶೋಕ್ ದಿಂಡಾ, ಇರ್ಫಾನ್ ಪಠಾಣ್, ಅಜಿಂಕ್ಯ ರಹಾನೆ, ಮನೋಜ್ ತಿವಾರಿ ಮತ್ತು ರಾಹುಲ್ ಶರ್ಮ.

ಶ್ರೀಲಂಕಾ: ಮಾಹೇಲ ಜಯವರ್ಧನೆ (ನಾಯಕ), ಆ್ಯಂಜೆಲೊ ಮ್ಯಾಥ್ಯೂಸ್ (ಉಪ ನಾಯಕ), ತಿಲಕರತ್ನೆ ದಿಲ್ಶಾನ್, ಕುಮಾರ ಸಂಗಕ್ಕಾರ, ಉಪುಲ್ ತರಂಗ, ದಿನೇಶ್ ಚಂಡಿಮಾಲ, ನುವಾನ್ ಕುಲಶೇಖರ, ತಿಸ್ಸಾರ ಪೆರೆರಾ, ಲಾಹಿರು ಥಿರಿಮನ್ನೆ, ಲಸಿತ್ ಮಾಲಿಂಗ, ಚಾಮರ ಕಪುಗೆಡೆರಾ, ರಂಗನ ಹೆರಾತ್, ಸಚಿತ್ರ ಸೇನನಾಯಕೆ, ಜೀವನ್ ಮೆಂಡಿಸ್ ಮತ್ತು ಐಸುರು ಉದಾನ.

ಪಂದ್ಯ ಆರಂಭ (ಭಾರತೀಯ ಕಾಲಮಾನ): ಮಧ್ಯಾಹ್ನ 2.30ಕ್ಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.