ಕೊಲಂಬೊ (ಪಿಟಿಐ): ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಚಾಂಪಿಯನ್ ಆದ ಶ್ರೀಲಂಕಾ ತಂಡದವರು ಭಾನು ವಾರ ತವರಿಗೆ ಬಂದರು. ಕೊಲಂಬೊ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಆಟಗಾರರಿಗೆ ಅದ್ದೂರಿ ಸ್ವಾಗತ ನೀಡಲಾಯಿತು.
ಮ್ಯಾಥ್ಯೂಸ್ ಬಳಗದ ಆಟಗಾರರನ್ನು ವಿಮಾನ ನಿಲ್ದಾಣದಿಂದ ತೆರೆದ ಬಸ್‌ನಲ್ಲಿ ಮೆರವಣಿಗೆ ಮೂಲಕ ಲಂಕಾ ಕ್ರಿಕೆಟ್ ಮಂಡಳಿಯ ಕಚೇರಿಗೆ ಕರೆತರಲಾಯಿತು. ಆಟಗಾರರನ್ನು ನೋಡಲು ರಸ್ತೆಯ ಎರಡೂ ಬದಿಗಳಲ್ಲಿ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ನೆರೆದಿದ್ದರು.
ಮೀರ್‌ಪುರದಲ್ಲಿ ಶನಿವಾರ ನಡೆದ ಫೈನಲ್‌ನಲ್ಲಿ ಲಂಕಾ ತಂಡ ಪಾಕಿಸ್ತಾನ ತಂಡವನ್ನು ಐದು ವಿಕೆಟ್‌ಗಳಿಂದ ಮಣಿಸಿ ಚಾಂಪಿಯನ್ ಆಗಿತ್ತು.
ಎಲ್ಲ ಆಟಗಾರರ ಕಠಿಣ ಪ್ರಯತ್ನದಿಂದ ಏಷ್ಯಾಕಪ್ ಗೆಲ್ಲಲು ಸಾಧ್ಯವಾಯಿತು ಎಂದು ನಾಯಕ ಮ್ಯಾಥ್ಯೂಸ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಶ್ರೀಲಂಕಾ ಕ್ರಿಕೆಟ್ ಮಂಡಳಿ (ಎಸ್‌ಎಲ್‌ಸಿ) ಮತ್ತು ಆಟಗಾರರ ನಡುವಿನ ಬಿಕ್ಕಟ್ಟು ಬಗೆಹರಿಯ ಬಹುದು ಎಂಬ ವಿಶ್ವಾಸವನ್ನು ಮ್ಯಾಥ್ಯೂಸ್ ವ್ಯಕ್ತಪಡಿಸಿದರು.
‘ಹೌದು. ಎಸ್‌ಎಲ್‌ಸಿ ಜೊತೆ ನಮಗೆ ಭಿನ್ನಾಭಿಪ್ರಾಯ ಇದೆ. ಮಂಡಳಿಯ ಒಪ್ಪಂದಕ್ಕೆ ನಾವು ಸಹಿ ಹಾಕಿಲ್ಲ. ಸದ್ಯದಲ್ಲೇ ಈ ಬಿಕ್ಕಟ್ಟು ಬಗೆಹರಿಯಬಹುದೆಂಬ ವಿಶ್ವಾಸ ನನ್ನದು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.