ADVERTISEMENT

ಲಂಡನ್ ಒಲಿಂಪಿಕ್ಸ್‌ಗೆ ಭಾರತ ಹಾಕಿ ತಂಡ: ಕರ್ನಾಟಕದ ಐವರು ಆಟಗಾರರಿಗೆ ಅವಕಾಶ

​ಪ್ರಜಾವಾಣಿ ವಾರ್ತೆ
Published 11 ಜೂನ್ 2012, 19:30 IST
Last Updated 11 ಜೂನ್ 2012, 19:30 IST
ಲಂಡನ್ ಒಲಿಂಪಿಕ್ಸ್‌ಗೆ ಭಾರತ ಹಾಕಿ ತಂಡ: ಕರ್ನಾಟಕದ ಐವರು ಆಟಗಾರರಿಗೆ ಅವಕಾಶ
ಲಂಡನ್ ಒಲಿಂಪಿಕ್ಸ್‌ಗೆ ಭಾರತ ಹಾಕಿ ತಂಡ: ಕರ್ನಾಟಕದ ಐವರು ಆಟಗಾರರಿಗೆ ಅವಕಾಶ   

ನವದೆಹಲಿ (ಪಿಟಿಐ): ಕರ್ನಾಟಕದ ಐವರು ಆಟಗಾರರು ಜುಲೈ 27ರಂದು ಆರಂಭವಾಗಲಿರುವ ಲಂಡನ್ ಒಲಿಂಪಿಕ್ಸ್‌ಗೆ ಭಾರತ ಹಾಕಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.  ಈ ಕ್ರೀಡಾಕೂಟಕ್ಕೆ 16 ಆಟಗಾರರ ತಂಡವನ್ನು `ಹಾಕಿ ಇಂಡಿಯಾ~ ಸೋಮವಾರ ಪ್ರಕಟಿಸಿದ್ದು, ರಾಜ್ಯದ ಭರತ್ ಚೆಟ್ರಿ ಮುನ್ನಡೆಸಲಿದ್ದಾರೆ.

ಗೋಲ್‌ಕೀಪರ್ ಚೆಟ್ರಿ ಸೇರಿದಂತೆ ಡಿಫೆಂಡರ್ಸ್‌ ವಿ.ಆರ್.ರಘುನಾಥ್, ಇಗ್ನೇಸ್ ಟರ್ಕಿ, ಫಾರ್ವರ್ಡ್ಸ್ ಎಸ್.ವಿ.ಸುನಿಲ್ ಹಾಗೂ ಎಸ್.ಕೆ.ಉತ್ತಪ್ಪ ತಂಡದಲ್ಲಿ ಸ್ಥಾನ ಪಡೆದಿರುವ ಕರ್ನಾಟಕದ ಆಟಗಾರರು. ಯುವರಾಜ್ ವಾಲ್ಮಿಕಿ ಹಾಗೂ ರೂಪಿಂದರ್ ಪಾಲ್ ಸಿಂಗ್ ಅವರನ್ನು ತಂಡದಿಂದ ಕೈಬಿಡಲಾಗಿದೆ. ಇವರಿಬ್ಬರು ಸುಲ್ತಾನ್ ಅಜ್ಲನ್ ಷಾ ಕಪ್ ಹಾಕಿ ಟೂರ್ನಿಯಲ್ಲಿ ಆಡಿದ ತಂಡದಲ್ಲಿದ್ದರು. ಅದರಲ್ಲಿ ಭಾರತ ಕಂಚಿನ ಪದಕ ಜಯಿಸಿತ್ತು.

ಪುಣೆಯ ಬಾಳೇವಾಡಿ ಕ್ರೀಡಾ ಸಂಕೀರ್ಣದಲ್ಲಿ ಜೂನ್ 6 ಹಾಗೂ 7ರಂದು ನಡೆದ ಆಯ್ಕೆ ಟ್ರಯಲ್ಸ್‌ನಲ್ಲಿ ಈ ಆಯ್ಕೆ ಮಾಡಲಾಗಿದೆ. ಟ್ರಯಲ್ಸ್ ವೇಳೆ ಆಯ್ಕೆದಾರರಾದ ಬಿ.ಪಿ.ಗೋವಿಂದ ಹಾಗೂ ಬಲ್ಬೀರ್ ಸಿಂಗ್ ಉಪಸ್ಥಿತರಿದ್ದರು. ಮಿಡ್‌ಫೀಲ್ಡರ್ಸ್ ಸರ್ದಾರ್ ಸಿಂಗ್ ಅವರನ್ನು ಉಪನಾಯಕರನ್ನಾಗಿ ನೇಮಿಸಲಾಗಿದೆ.

ತಂಡದಲ್ಲಿ ಇಬ್ಬರು ಗೋಲ್‌ಕೀಪರ್‌ಗಳಿಗೆ ಆಯ್ಕೆದಾರರು ಅವಕಾಶ ನೀಡಿದ್ದಾರೆ. ಸರ್ವಣ್‌ಜಿತ್‌ಸಿಂಗ್ ಹಾಗೂ ಕೊಥಾಜಿತ್ ಸಿಂಗ್ ಅವರನ್ನು ಕಾಯ್ದಿರಿಸಿದ ಆಟಗಾರರನ್ನಾಗಿ ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ.

ದಶಕಗಳ ಹಿಂದೆ ಎಂಟು ಚಿನ್ನದ ಪದಕ ಗೆದ್ದಿದ್ದ ಹೆಗ್ಗಳಿಕೆಯ ಭಾರತ ಒಲಿಂಪಿಕ್ಸ್‌ನ ಹಾಕಿ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಹಾಲೆಂಡ್ ತಂಡವನ್ನು ಎದುರಿಸಲಿದೆ. ಈ ಪಂದ್ಯ ಜುಲೈ 30ರಂದು ನಡೆಯಲಿದೆ. ಭಾರತ ತಂಡ `ಬಿ~ ಗುಂಪಿನಲ್ಲಿದ್ದು, ಇದರಲ್ಲಿ ಜರ್ಮನಿ, ಹಾಲೆಂಡ್, ಕೊರಿಯಾ, ನ್ಯೂಜಿಲೆಂಡ್ ಮತ್ತು ಬೆಲ್ಜಿಯಂ ತಂಡಗಳಿವೆ. ಆಗಸ್ಟ್ 11ರಂದು ಫೈನಲ್ ನಡೆಯಲಿದೆ.

ತಂಡ ಇಂತಿದೆ: ಗೋಲ್‌ಕೀಪರ್ಸ್‌: ಭರತ್ ಚೆಟ್ರಿ (ನಾಯಕ), ಪಿ.ಆರ್. ಶ್ರೀಜೇಶ್. ಡಿಫೆಂಡರ್ಸ್: ವಿ.ಆರ್.ರಘುನಾಥ್, ಇಗ್ನೇಸ್ ಟರ್ಕಿ, ಸಂದೀಪ್ ಸಿಂಗ್. ಮಿಡ್‌ಫೀಲ್ಡರ್ಸ್: ಸರ್ದಾರ್ ಸಿಂಗ್ (ಉಪನಾಯಕ), ಗುರ್ಬಜ್ ಸಿಂಗ್, ಬೀರೇಂದ್ರ ಲಾಕ್ರಾ, ಮನ್‌ಪ್ರೀತ್ ಸಿಂಗ್. ಫಾರ್ವರ್ಡ್ಸ್: ಎಸ್.ವಿ.ಸುನಿಲ್, ಗುರ್ವಿಂದರ್ ಸಿಂಗ್ ಚಾಂದಿ, ಶಿವೇಂದ್ರ ಸಿಂಗ್, ದನೀಶ್ ಮುಜ್ತಾಬ, ತುಷಾರ್ ಖಾಂಡ್ಕರ್, ಧರಮ್‌ವೀರ್ ಸಿಂಗ್, ಎಸ್.ಕೆ.ಉತ್ತಪ್ಪ.
ಸ್ಟ್ಯಾಂಡ್‌ಬೈ: ಸರ್ವಣಜಿತ್‌ಸಿಂಗ್ ಹಾಗೂ ಕೊಥಾಜಿತ್ ಸಿಂಗ್.

ತಂಡದ ಅಧಿಕಾರಿಗಳು: ಮೈಕಲ್ ನಾಬ್ಸ್ (ಮುಖ್ಯ ಕೋಚ್), ಮೊಹಮ್ಮದ್ ರಿಯಾಜ್ (ಕೋಚ್), ಕ್ಲಾರೆನ್ಸ್ ಲೋಬೊ (ಕೋಚ್), ಡೇವಿಡ್ ಜಾನ್ (ಫಿಜಿಯೊ), ಶ್ರೀಕಾಂತ್ ಐಯ್ಯಂಗಾರ್ (ಮ್ಯಾನೇಜರ್) ಹಾಗೂ ಹರಿ ಶಂಕರ್ ನಾರಾಯಣನ್ (ವಿಡಿಯೊ ವಿಶ್ಲೇಷಕ).

ಭಾರತದ ಪಂದ್ಯಗಳ ವೇಳಾಪಟ್ಟಿ
ಜುಲೈ 30: ಭಾರತ-ಹಾಲೆಂಡ್, ಆಗಸ್ಟ್ 01: ಭಾರತ-ನ್ಯೂಜಿಲೆಂಡ್, ಆ. 03: ಭಾರತ-ಜರ್ಮನಿ, ಆ.05: ಭಾರತ- ಕೊರಿಯಾ, ಆ.07: ಭಾರತ-ಬೆಲ್ಜಿಯಂ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.