ADVERTISEMENT

ಲಂಡನ್ ಒಲಿಂಪಿಕ್ಸ್ ತರಬೇತಿಗೆ ಮತ್ತಷ್ಟು ಹಣ

​ಪ್ರಜಾವಾಣಿ ವಾರ್ತೆ
Published 22 ಜನವರಿ 2012, 19:30 IST
Last Updated 22 ಜನವರಿ 2012, 19:30 IST

ನವದೆಹಲಿ (ಪಿಟಿಐ):  ಲಂಡನ್ ಒಲಿಂಪಿಕ್ಸ್ ತರಬೇತಿಗೆ ಸಜ್ಜು ಗೊಳ್ಳಲು ಕೇಂದ್ರ ಕ್ರೀಡಾ ಇಲಾಖೆ ಭಾರತದ ಸ್ಪರ್ಧಿಗಳಿಗೆ ಹೆಚ್ಚುವರಿಯಾಗಿ ಮತ್ತೆ ಮೂರು ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಿದೆ.

ಜಿಮ್ನಾಸ್ಟಿಕ್ ಸ್ಪರ್ಧೆಗೆ 89.91 ಲಕ್ಷ ರೂಪಾಯಿ ನೀಡಲಾಗಿದೆ ಎಂದು ಕೇಂದ್ರ ಕ್ರೀಡಾ ಸಚಿವ ಅಜಯ್ ಮಾಕನ್ ತಿಳಿಸಿದ್ದಾರೆ. ಒಲಿಂಪಿಕ್ಸ್ ಹಾಗೂ ಅಂತರರಾಷ್ಟ್ರೀಯ ಮಟ್ಟದ ಇತರ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳಲು ಭಾರತದ ಸ್ಪರ್ಧಿಗಳು ಈ ಹಣ ಖರ್ಚು ಮಾಡಬಹುದು. ಇದರ ಜೊತೆಗೆ ವಿಮಾನ ವೆಚ್ಚವನ್ನು ಸಹ ಸರ್ಕಾರವೇ ನೀಡಿದೆ.

`ಆಪರೇಷನ್ ಎಕ್ಸಲೆನ್ಸ್ 2012~ ಯೋಜನೆ ಅಡಿ ಈ ಹಣ ನಿಗದಿ ಮಾಡಲಾಗಿದ್ದು, ಒಟ್ಟು 47 ಸ್ಪರ್ಧಿಗಳು, 12 ಜನ ಕೋಚ್‌ಗಳು ಹಾಗೂ ಸಿಬ್ಬಂದಿಗೂ ಹಣ ನೀಡ ಲಾಗಿದೆ ಎಂದು ಮಾಕನ್ ತಿಳಿಸಿದರು.

ಟೆನಿಸ್ ಆಟಗಾರ ಸೋಮದೇವ್ ದೇವವರ್ಮನ್ ಸೇರಿದಂತೆ ಏಳು ಟೆನಿಸ್ ಆಟಗಾರರಿಗೆ ಕ್ರೀಡಾ ಇಲಾಖೆ ಮೂರು ದಿನಗಳ ಹಿಂದೆ ಅಂದಾಜು 1.59 ಕೋಟಿ ರೂಪಾಯಿ ಬಿಡುಗಡೆ ಮಾಡಿತ್ತು.

`ಸೋಮದೇವ್‌ಗೆ ಪ್ರತಿ ತಿಂಗಳಿಗೆ 3,30,000 ರೂಪಾಯಿಯಂತೆ 24 ತಿಂಗಳಿಗೆ ಆಗುವಷ್ಟು ಹಣ ನೀಡಲಾಗಿದೆ. ಈ ಹಣ ವೈಯಕ್ತಿಕ ಕೋಚ್ ನೇಮಕ ಹಾಗೂ ತರಬೇತಿ ಸಂಬಂಧಿತ ವೆಚ್ಚಕ್ಕಾಗಿ ಇದನ್ನು ಖರ್ಚು ಮಾಡಬಹುದು. ರಾಷ್ಟ್ರೀಯ ಕ್ರೀಡಾಭಿವೃದ್ಧಿ ನಿಧಿ (ಎನ್‌ಎಸ್‌ಡಿಎಫ್) ಅಡಿ ಈ ಹಣ ವೆಚ್ಚ ಮಾಡಲಾಗಿದೆ~ ಎಂದು ಅವರು ಹೇಳಿದರು.

ಡಬಲ್ಸ್ ವಿಭಾಗದಲ್ಲಿ ಸ್ಪರ್ಧಿಸುವ ಮಹೇಶ್ ಭೂಪತಿ ಮತ್ತು ಲಿಯಾಂಡರ್ ಪೇಸ್ ಅವರಿಗೆ 14 ತಿಂಗಳಿಗೆ ಆಗುವಷ್ಟು ಹಣ ನೀಡಲಾಗಿದೆ. ಗಾಯಗೊಂಡು ಚೇತರಿಸಿಕೊಂಡಿರುವ ಸಾನಿಯಾ ಮಿರ್ಜಾಗೆ ಹದಿಮೂರುವರೆ ತಿಂಗಳಿಗಾಗುವಷ್ಟು ಹಣ ನೀಡಲಾಗಿದೆ~ ಎಂದು ಮಾಕನ್ ಮಾಹಿತಿ ನೀಡಿದರು.

`ರೋಹನ್ ಬೋಪಣ್ಣ, ಯೂಕಿ ಭಾಂಬ್ರಿ ಮತ್ತು ಸನಮ್ ಸಿಂಗ್ ಅವರಿಗೆ 13 ತಿಂಗಳಿಗೆ ಆಗುವಷ್ಟು ಹಣ ಒದಗಿಸಲಾಗಿದೆ. ಇನ್ನಿಬ್ಬರು ಹೆಚ್ಚುವರಿ ಆಟಗಾರರಿಗೆ (ಇಶಾ ಲಖಾನಿ ಹಾಗೂ ರುತುಜಾ ಬೋಸಲೆ) ಅವರಿಗೂ ಈ ಸೌಲಭ್ಯ ದೊರೆಯಲಿದೆ. ಇದರಿಂದ ಪರಿಣಾಮಕಾರಿ ತರಬೇತಿ ಪಡೆಯಲು ಸಾಧ್ಯವಾಗುತ್ತದೆ~ ಎನ್ನುವ ಅಭಿಪ್ರಾಯವನ್ನು ಮಾಕನ್ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.