ADVERTISEMENT

ಲಂಡನ್ ಒಲಿಂಪಿಕ್: ಮನಸು ತಣಿಸಿತು ಕನಸು

​ಪ್ರಜಾವಾಣಿ ವಾರ್ತೆ
Published 28 ಜುಲೈ 2012, 19:30 IST
Last Updated 28 ಜುಲೈ 2012, 19:30 IST
ಲಂಡನ್ ಒಲಿಂಪಿಕ್: ಮನಸು ತಣಿಸಿತು ಕನಸು
ಲಂಡನ್ ಒಲಿಂಪಿಕ್: ಮನಸು ತಣಿಸಿತು ಕನಸು   

ಲಂಡನ್: ಚಂದಿರನನ್ನೇ ಸಿಂಗರಿಸಿ ತಂದಿಟ್ಟಂಥ ಚೆಂದದ ಮುದ್ದು ಮುಖ. ತಿದ್ದಿ ತೀಡಿ ಬರೆದ ನಗೆಯ ಗೆರೆ. ಆದರೂ ಕೆನ್ನೆ ಒದ್ದೆಯಾಗಿಸಿತು ಕಣ್ಣೀರು. ಅಂಥ ನೊಂದ ಮನಗಳಿಗೆ ಕಾಡಿದ ಕೆಟ್ಟ ಕನಸನ್ನು ಓಡಿಸಿದ್ದು ಆಗಸದಿಂದ ಇಳಿದುಬಂದ ಹೈಟೆಕ್ ದೇವತೆಗಳು.

ಹೌದು; ಹೀಗೆಯೇ ಮೃದು ಅನುಭವ ನೀಡುತ್ತಲೇ ಆಧುನಿಕ ಜಗತ್ತಿನ ವಿಶಿಷ್ಟ ಚಿತ್ರಗಳು ಕಣ್ಣೆದುರು ತೆರೆತೆರೆಯಾಗಿ ಹರಿಯಿತು. ಅಂಥ ದೃಶ್ಯ ವೈಭವ ಸಾಲುಗಟ್ಟಿ ಕಣ್ಮನ ತಣಿಸಿದ್ದು ಇಲ್ಲಿ ಶುಕ್ರವಾರ ರಾತ್ರಿ ನಡೆದ ಮೂವತ್ತನೇ ಲಂಡನ್ ಒಲಿಂಪಿಕ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ.

ನಾಲ್ಕು ತಾಸುಗಳ ಕಾಲ ಹಾಲಿವುಡ್ ಸಿನಿಮಾ ನೋಡಿದ ಅನುಭವ. ಎದೆಯ ಕದ ತಟ್ಟುವಂಥ ಸಂವೇದನೆ, ರೋಮಾಂಚನ, ಆ್ಯಕ್ಷನ್, ಸಂಗೀತ, ನೃತ್ಯ ಹಾಗೂ ಹಾಸ್ಯ ಎಲ್ಲವೂ ಒಂದೇ ತಟ್ಟೆಯಲ್ಲಿ ಬಡಿಸಿಟ್ಟ ರಸದೂಟದಂತೆ. ಚೆಂದದ ಮಕ್ಕಳಿಂದ ಹಿಡಿದು ಇಳಿವಯಸ್ಸಿನ ಎಳೆಯರೂ ಹಸಿರು ಹರಡಿದ ಅಂಗಳದಲ್ಲಿ ಬಂದು ಹೋದರು.
 
ತಮ್ಮದೇ ಕಲಾಕೌಶಲ ಹಾಗೂ ಸಾಧನೆಯಿಂದ ಚಪ್ಪಾಳೆ ಕೂಡ ಗಿಟ್ಟಿಸಿದರು. ಅಂಥವರಲ್ಲಿ ಎದ್ದು ಕಾಣಿಸಿದ್ದು `ಬಾಕ್ಸಿಂಗ್ ಗ್ರೇಟ್~ ಮಹಮ್ಮದ್ ಅಲಿ.  ಖ್ಯಾತ ನಿರ್ದೇಶಕ ಡ್ಯಾನಿ  ಬಾಯ್ಲ ಕಲ್ಪನೆಯು ಪ್ರವಾಹವಾಗಿ ಹರಿದಾಗ ಅದೊಂದು ಅದ್ಭುತ ಲೋಕವಾಗಿ ಕಾಣಿಸಿದ್ದು ಅಚ್ಚರಿ ಯೇನಲ್ಲ.
 
ಲೇಸರ್ ಬೆಳಕಿನ ಆಟದ ನಡುವೆ ಮೂಡಿದ ನೃತ್ಯದ ಸೊಬಗು ಕಣ್ಣಿಗೆ ಹಬ್ಬ. ತ್ರೀ ಡೈಮೆನ್ಶನ್ ದೃಶ್ಯ ಸಂಯೋಜನೆಯಂತೂ ವಿಶಿಷ್ಟ. ಬೃಹತ್ತಾದ ಸೆಟ್‌ಗಳನ್ನು ಬಳಸಿ ಕೊಂಡು ಕ್ರೀಡಾಂಗಣದ ತುಂಬಾ ಪ್ರತಿಮೆಗಳು ಎದ್ದು ಕಾಣುವಂತೆ ಮಾಡಿದ್ದಂತೂ ಗಮನ ಸೆಳೆದ ಅಂಶ. 

ಪಾಪ್ ಸಂಗೀತ ಸ್ವಲ್ಪ ಅತಿ ಎನಿಸಿದರೂ ಲಂಡನ್‌ನ ತಂಗಾಳಿಯು ಮೈಗೆ ಸೋಕಿದ ಅನುಭವ. ವಿಶ್ವದ ಹತ್ತು ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳು ಹಾಗೂ 80,000 ಪ್ರೇಕ್ಷಕರಿಗೆ ನಿರಾಸೆಯಾಗಲಿಲ್ಲ. ಆದರೆ ಬೀಜಿಂಗ್‌ನಲ್ಲಿ ಕಂಡಿದ್ದ ಅಬ್ಬರ ಇರದಿದ್ದರೂ ಇದೊಂದು ಶ್ವೇತರಾತ್ರಿಯ ಕನಸಿನಂತೆ. ಹಿತವಾಗಿ ಮನಸು ತಣಿಸಿತು.

ನೃತ್ಯ ಹಾಗೂ ಸಂಗೀತದ ಸೊಬಗು ಇದ್ದರೂ ನೆನಪಿನಲ್ಲಿ ಗಟ್ಟಿಯಾಗಿ ಉಳಿದಿದ್ದು `ಬಾಂಡ್~, `ಬೀನ್~ ಹಾಗೂ `ಕ್ವೀನ್~ ಮಾತ್ರ. ಬಾಂಡ್ ಪಾತ್ರಧಾರಿ ಡೇನಿಯಲ್ ಕ್ರೇಗ್ ಅವರು ಹೆಲಿಕಾಫ್ಟರ್‌ನಲ್ಲಿ ಬಂದಾಗಲೇ ರೋಮಾಂಚನ. ಆನಂತರ ಕಚಗುಳಿ ಇಟ್ಟದ್ದು `ಮಿಸ್ಟರ್ ಬೀನ್~ ಖ್ಯಾತಿಯ ರೊವಾನ್ ಆ್ಯಟ್ಕಿನ್ಸನ್. ರಾಣಿ ಏಲಿಜೆಬೆತ್ ಸಂಪ್ರದಾಯದಂತೆ ಕೂಟ ಆರಂಭವೆಂದು ಹೇಳಿದರು. ಅದರೊಂದಿಗೆ ಬೃಹತ್ ಗಂಟೆಯ ಸದ್ದು ಮೊಳಗಿತು.

ಖ್ಯಾತ ಫುಟ್‌ಬಾಲ್ ತಾರೆ ಡೇವಿಡ್ ಬೆಕಮ್ ಅವರು ಥೇಮ್ಸ ನದಿಯಲ್ಲಿ ಬಂದು ಜ್ಯೋತಿಯನ್ನು ಹಸ್ತಾಂತರಿಸಿದ್ದು ಕೂಡ ಸಿನಿಮಾ ಶೈಲಿಯಲ್ಲಿ. ಅಲ್ಲಿಂದ ಕ್ರೀಡಾಂಗಣ ಪ್ರವೇಶಿಸಿದ ಜ್ಯೋತಿ ಹಿಡಿದದ್ದು ಯುವ ಅಥ್ಲೀಟ್‌ಗಳು. ಅದೇ ಈ ಕೂಟದ ಉದ್ಘಾಟನಾ ಸಮಾರಂಭದ ಇನ್ನೊಂದು ವಿಶೇಷ.

ಈ ಅಥ್ಲೀಟ್‌ಗಳ ಹೆಸರನ್ನು ದೇಶದ ಖ್ಯಾತ ಕ್ರೀಡಾ ತಾರೆಗಳು ಸಲಹೆ ಮಾಡಿದ್ದು ಎನ್ನುವುದು ಗಮನ ಸೆಳೆದ ಅಂಶ. ಸಾಮಾನ್ಯವಾಗಿ ಖ್ಯಾತ ಕ್ರೀಡಾ ತಾರೆಗಳೇ ಕ್ರೀಡಾಂಗಣದಲ್ಲಿ ಕೊನೆಯ ಕೆಲವು ಮೀಟರ್‌ಗಳಲ್ಲಿ ಓಡುವ ಅವಕಾಶ ಪಡೆಯುತ್ತಿದ್ದರು. ಆದರೆ ಇಲ್ಲಿ ಹೊಸ ತಲೆಮಾರಿನವರಿಗೆ ಆದ್ಯತೆ ನೀಡಲಾಯಿತು. ಅವರು ಹಿಡಿದ ಜ್ಯೋತಿಯಿಂದಲೇ ಬೆಳಗಿದ ಬೃಹತ್ ಕ್ರೀಡ್ಯಾಜ್ಯೋತಿ ಅಂಗಳದ ನಡುವೆ ಎತ್ತರದಿಂದ ಎತ್ತರಕ್ಕೇರಿ ಪ್ರಜ್ವಲಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT