ADVERTISEMENT

ಲಕ್ಷ್ಮಣ್, ಸುಶೀಲ್, ನಾರಂಗ್‌ಗೆ ಪದ್ಮಶ್ರೀ ಗೌರವ

​ಪ್ರಜಾವಾಣಿ ವಾರ್ತೆ
Published 25 ಜನವರಿ 2011, 19:30 IST
Last Updated 25 ಜನವರಿ 2011, 19:30 IST

ನವದೆಹಲಿ (ಪಿಟಿಐ): ಭಾರತ ಕ್ರಿಕೆಟ್ ತಂಡದ ಕಲಾತ್ಮಕ ಆಟಗಾರ ವಿವಿಎಸ್ ಲಕ್ಷ್ಮಣ್, ದೆಹಲಿ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಗಗನ್ ನಾರಂಗ್, ಸುಶೀಲ್ ಕುಮಾರ್, ಕೃಷ್ಣ ಪೂನಿಯಾ ಸೇರಿದಂತೆ ಒಟ್ಟು ಏಳು ಕ್ರೀಡಾಪಟುಗಳಿಗೆ ಈ ಸಲದ ಪದ್ಮಶ್ರೀ ಪ್ರಶಸ್ತಿ ದೊರೆತಿದೆ.

ವೇಟ್ ಲಿಫ್ಟರ್ ಎನ್. ಕುಂಜರಾಣಿ ದೇವಿ, ಪ್ಯಾರ ಜಂಪ್ ಸ್ಪರ್ಧಿ ಶೀತಲ್ ಮಹಾಜನ್ ಹಾಗೂ ಪರ್ವತಾರೋಹಿ ಹರಭಜನ್ ಸಿಂಗ್ ಈ ಪ್ರಶಸ್ತಿಗೆ ಭಾಜನರಾದ ಇತರ ಕ್ರೀಡಾಪಟುಗಳು.

36 ವರ್ಷದ ಲಕ್ಷ್ಮಣ್ 120 ಟೆಸ್ಟ್‌ಗಳಲ್ಲಿ 7903 ರನ್‌ಗಳನ್ನು ಗಳಿಸಿ 47.32 ಸರಾಸರಿಯನ್ನು ಹೊಂದಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 16 ಶತಕ ಹಾಗೂ 49 ಅರ್ಧ ಶತಕಗಳನ್ನು ಗಳಿಸಿದ್ದಾರೆ.

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತ ಪಂದ್ಯಗಳನ್ನು ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಆದ್ದರಿಂದಲೇ ‘ಆಪದ್ಬಾಂದವ’ ಎನ್ನುವ ಕೀರ್ತಿಯೂ ಅವರಿಗಿದೆ.
ಕುಸ್ತಿಪಟು ಸುಶೀಲ್ ಕುಮಾರ್ 2008ರ ಬೀಜಿಂಗ್ ಒಲಿಂಪಿಕ್ ಕ್ರೀಡಾಕೂಟದಲ್ಲಿ ಕಂಚಿನ ಪದಕ, 2010ರ ಮಾಸ್ಕೋ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ, ಈ ಸಲದ ದೆಹಲಿ ಕಾಮನ್‌ವೆಲ್ತ್ ಕ್ರೀಡಾಕೂಟದ 66 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಸೇರಿದಂತೆ ಇತರ ಅನೇಕ ಪದಕಗಳನ್ನು ಗೆದ್ದ ಕೀರ್ತಿ ಅವರ ಖಾತೆಯಲ್ಲಿ ಭದ್ರವಾಗಿವೆ.

ಈ ಸಲದ ಕಾಮನ್‌ವೆಲ್ತ್ ಕ್ರೀಡಾಕೂಟದ ವಿವಿಧ ವಿಭಾಗಗಳಲ್ಲಿ ನಾಲ್ಕು ಚಿನ್ನದ ಪದಕ ಪಡೆದ ಶೂಟರ್ ಗಗನ್ ನಾರಂಗ್‌ಗೆ ಚೀನಾ ಏಷ್ಯನ್ ಕ್ರೀಡಾಕೂಟದಲ್ಲಿ ಎರಡು ಬೆಳ್ಳಿ ಪದಕಗಳನ್ನು ಗೆದ್ದಿದ್ದಾರೆ.

ಪ್ರಖ್ಯಾತ ಕ್ರೀಡಾಪಟು ಕುಂಜುರಾಣಿ 50ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಮಟ್ಟದಲ್ಲಿ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. 1989ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಮೂರು ಬೆಳ್ಳಿ ಪದಕಗಳನ್ನು ಗೆದ್ದಿದ್ದರು. 2006ರ ಮೆಲ್ಬರ್ನ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ‘ಚಿನ್ನ’ವನ್ನು ಜಯಿಸಿದ್ದರು.

ಕೃಷ್ಣ ಪೂನಿಯಾ ಕಾಮನ್‌ವೆಲ್ತ್ ಕ್ರೀಡಾಕೂಟದ ವೈಯಕ್ತಿಕ ವಿಭಾಗದಲ್ಲಿ 52 ವರ್ಷಗಳ ಬಿಡುವಿನ ಬಳಿಕ ಡಿಸ್ಕಸ್ ಥ್ರೋ ಸ್ಪರ್ಧೆಯಲ್ಲಿ ಭಾರತಕ್ಕೆ ಮೊದಲ ಬಾರಿಗೆ ಚಿನ್ನದ ಪದಕ ತಂದುಕೊಟ್ಟ ಶ್ರೇಯಕ್ಕೆ ಪಾತ್ರರಾಗಿದ್ದರು. ಪೂನಿಯಾ 2006ರ ಏಷ್ಯಾಡ್‌ನಲ್ಲಿಯೂ ಕಂಚು ಗೆದ್ದಿದ್ದರು.‘ಈ ಪ್ರಶಸ್ತಿ ಸಹಜವಾಗಿಯೇ ಸಂತೋಷವನ್ನು ಇಮ್ಮಡಿಗೊಳಿಸಿದೆ. ಎಂದು ಲಕ್ಷ್ಮಣ್ ಪ್ರತಿಕ್ರಿಯಿಸಿದ್ದಾರೆ.‘2012 ಲಂಡನ್ ಒಲಿಂಪಿಕ್‌ಗೆ ಈ ಗೌರವವು ಪ್ರೇರಣೆಯಾಗಲಿದೆ ಎಂದು’ ಸುಶೀಲ್ ಕುಮಾರ್ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.