ADVERTISEMENT

ಲಲಿತ್‌ ಮೋದಿ ಸ್ಪರ್ಧೆಗೆ ಸಮ್ಮತಿ

ರಾಜಸ್ತಾನ ಕ್ರಿಕೆಟ್ ಸಂಸ್ಥೆ ಚುನಾವಣೆ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2013, 19:30 IST
Last Updated 18 ಡಿಸೆಂಬರ್ 2013, 19:30 IST

ಜೈಪುರ (ಪಿಟಿಐ): ರಾಜಸ್ತಾನ ಕ್ರಿಕೆಟ್ ಸಂಸ್ಥೆ (ಆರ್‌ಸಿಎ) ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು  ಇಂಡಿಯನ್ ಪ್ರಿಮೀಯರ್ ಲೀಗ್ (ಐಪಿಎಲ್‌) ಮಾಜಿ ಮುಖ್ಯಸ್ಥ ಲಲಿತ್ ಮೋದಿ ಅವರಿಗೆ ಸುಪ್ರೀಂ ಕೋರ್ಟ್ ನೇಮಿಸಿದ್ದ ವೀಕ್ಷಕರು ಹಸಿರು ನಿಶಾನೆ ತೋರಿಸಿದ್ದಾರೆ.

ಮೋದಿ ಸೋಮವಾರ ಆರ್‌ಸಿಎ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದರು. ಇದರ ಬೆನ್ನಲ್ಲೇ ಮೋದಿ ಅವರಿಗೆ ಸಂಸ್ಥೆಯ ಚುನಾವಣೆಯಲ್ಲಿ ಸ್ಪರ್ಧಿ ಸಲು ಅವಕಾಶ ನೀಡಿದರೆ ಆರ್‌ಸಿಎ ಮಾನ್ಯತೆಯನ್ನು ರದ್ದುಗೊಳಿಸು ವುದಾಗಿ ಬಿಸಿಸಿಐ ಬೆದರಿಕೆ ಹಾಕಿತ್ತು.

ಈ ವಿವಾದದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಆರ್‌ಸಿಎ ಚುನಾವಣೆಯ ಉಸ್ತುವಾರಿ ನೋಡಿ ಕೊಳ್ಳಲು ವೀಕ್ಷಕರನ್ನಾಗಿ ನಿವೃತ್ತ ನ್ಯಾಯಮೂರ್ತಿ ನರೇಂದ್ರ ಮೋಹನ್ ಕಸ್ಲಿವಾಲ್ ಅವರನ್ನು ನೇಮಿಸಿತ್ತು.

ಮೋದಿ ಚುನಾವಣೆಗೆ ಸ್ಪರ್ಧಿಸಿದರೆ ಆರ್‌ಸಿಎ ಬಿಸಿಸಿಐ ನಿಂದ ಪಡೆಯುತ್ತಿ ರುವ ನೆರವು ಹಾಗೂ ಮಾನ್ಯತೆ ಕಳೆದು ಕೊಳ್ಳಲಿದೆ, ಹೀಗಾಗಿ ಅವರ ನಾಮಪತ್ರವನ್ನು ತಿರಸ್ಕರಿಸಬೇಕು. ಎಂದು ಆರ್‌ಸಿಎ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ  ರಾಂಪಾಲ್ ಶರ್ಮಾ ಪರ ವಕೀಲರು ಬುಧವಾರ ವಾದ ಮಂಡಿಸಿದರು.

ಅವರು  ‘ಮೋದಿ ಭ್ರಷ್ಟಾಚಾರ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ತನಿಖೆ ಎದುರಿಸುತ್ತಿದ್ದು, ಮುಂಬೈ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ ಅವರ ಪಾಸ್‌ಪೋರ್ಟ್‌ ಅನ್ನು ಮುಟ್ಟುಗೋಲು ಹಾಕಿಕೊಂಡಿದೆ. ಹಾಗೂ ಅವರು ಸದ್ಯ ಲಂಡನ್‌ನಲ್ಲಿ ವಾಸವಾಗಿರುವುದರಿಂದ ಅಲ್ಲಿದ್ದುಕೊಂಡು ಸಂಸ್ಥೆಯ ದೈನಂದಿನ ವ್ಯವಹಾರಗಳನ್ನು ನೋಡಿಕೊಳ್ಳುವುದು ಅಸಾಧ್ಯ.

ಜೊತೆಗೆ ಆರ್‌ಸಿಎ ಒಳಗೊಂಡು ಎಲ್ಲಾ ಸದಸ್ಯರು ಬಿಸಿಸಿಐ ಕೈಗೊಂಡ ತೀರ್ಮಾನ ಮತ್ತು ನಿರ್ದೇಶನಗಳನ್ನು ಪಾಲಿಸ ಬೇಕು ಎಂಬ ನಿಯಮವಿದ್ದು,   ಬಿಸಿಸಿಐ ಮೋದಿ ಅವರ ಮೇಲೆ ಆಜೀವ ನಿಷೇಧವನ್ನೂ ಹೇರಿದೆ’. ಹೀಗಾಗಿ ಈ ಮೂರು ಪ್ರಮುಖ ಅಂಶಗಳ ಆಧಾರದ ಮೇಲೆ ಅವರ ಸ್ಪರ್ಧೆಯನ್ನು ರದ್ದುಗೊಳಿಸಬೇಕು ಎಂದು ತಮ್ಮ ವಾದದಲ್ಲಿ ತಿಳಿಸಿದರು.

ಆದರೆ ಈ ವಾದವನ್ನು ತಳ್ಳಿ ಹಾಕಿದ ಕಸ್ಲಿವಾಲ್ ಮೋದಿ ನಾಮಪತ್ರವನ್ನು ಮಾನ್ಯ ಮಾಡಿ ಸ್ಪರ್ಧೆಗೆ ಅವಕಾಶ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.