ADVERTISEMENT

ಲಾರಾಗಿಂತ ತೆಂಡೂಲ್ಕರ್ ಶ್ರೇಷ್ಠ

ಭಾರತಕ್ಕಾಗಿ ಹಲವು ಪಂದ್ಯಗಳನ್ನು ಗೆದ್ದುಕೊಟ್ಟಿರುವ ಸಚಿನ್

​ಪ್ರಜಾವಾಣಿ ವಾರ್ತೆ
Published 18 ಜುಲೈ 2013, 19:59 IST
Last Updated 18 ಜುಲೈ 2013, 19:59 IST
ತೆಂಡೂಲ್ಕರ್
ತೆಂಡೂಲ್ಕರ್   

ನವದೆಹಲಿ (ಪಿಟಿಐ): ವೆಸ್ಟ್ ಇಂಡೀಸ್‌ನ ಬ್ರಯಾನ್ ಲಾರಾ ಭಾರತದ ಸಚಿನ್ ತೆಂಡೂಲ್ಕರ್ ಅವರಿಗಿಂತ ಶ್ರೇಷ್ಠ ಎನ್ನುವ ಮೂಲಕ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಬುಧವಾರ ಚರ್ಚೆಗೆ ಕಾರಣರಾಗಿದ್ದರು.

ರನ್ ಗಳಿಸುವುದಕ್ಕಿಂತ ಪಂದ್ಯ ಗೆಲ್ಲಿಸಿಕೊಡುವುದು ಮುಖ್ಯ ಎಂದಿದ್ದ ಪಾಂಟಿಂಗ್, `ವೆಸ್ಟ್ ಇಂಡೀಸ್‌ಗೆ ಹೆಚ್ಚು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿರುವ ಲಾರಾ ಅವರು ಸಚಿನ್‌ಗಿಂತ ಶ್ರೇಷ್ಠ' ಎಂದಿದ್ದರು. ಆದರೆ ಇಬ್ಬರು ಬ್ಯಾಟಿಂಗ್ ದಿಗ್ಗಜರ ಸಾಧನೆಯ ಅಂಕಿ ಅಂಶವನ್ನು ನೋಡಿದರೆ, ಪಾಂಟಿಂಗ್ ಹೇಳಿಕೆ ತಪ್ಪು ಎಂಬುದು ಸ್ಪಷ್ಟವಾಗುತ್ತದೆ.

198 ಟೆಸ್ಟ್ ಪಂದ್ಯಗಳನ್ನು ಆಡಿರುವ ಸಚಿನ್ ವೆಸ್ಟ್ ಇಂಡೀಸ್‌ನ ಮಾಜಿ ಆಟಗಾರನಿಗಿಂತ (131 ಪಂದ್ಯ) ಸಾಕಷ್ಟು ಮುಂದಿದ್ದಾರೆ. ಲಾರಾ ಅವರ ಉಪಸ್ಥಿತಿಯಲ್ಲಿ ವಿಂಡೀಸ್ ಶೇ 24.42 ರಷ್ಟು ಪಂದ್ಯಗಳಲ್ಲಿ ಗೆಲುವು ಪಡೆದಿದೆ ಎಂಬುದನ್ನು ಅಂಕಿ ಅಂಶಗಳು ತೋರಿಸುತ್ತವೆ. ಆದರೆ ತೆಂಡೂಲ್ಕರ್ ಉಪಸ್ಥಿತಿಯಲ್ಲಿ ಭಾರತ ಶೇ. 35.35 ರಷ್ಟು ಪಂದ್ಯಗಳಲ್ಲಿ ಜಯ ಸಾಧಿಸಿದೆ.

ಸಚಿನ್ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನೂರು ಶತಕ ಗಳಿಸಿದ್ದಾರೆ. ಇದರಲ್ಲಿ 53 ಶತಕಗಳು ಭಾರತ ತಂಡ ಗೆಲುವು ಪಡೆದ ಪಂದ್ಯಗಳಲ್ಲಿ ದಾಖಲಾಗಿವೆ. ಟೆಸ್ಟ್‌ನಲ್ಲಿ ಸಚಿನ್ ಗಳಿಸಿರುವುದು 51 ಶತಕಗಳು. ಇದರಲ್ಲಿ 20 ಶತಕಗಳನ್ನು (ಶೇ 39.01) ಗಳಿಸಿದ ಸಂದರ್ಭ ಭಾರತ ಜಯ ಸಾಧಿಸಿತ್ತು.

ಬ್ರಯಾನ್ ಲಾರಾ ಟೆಸ್ಟ್‌ನಲ್ಲಿ 34 ಶತಕ ಗಳಿಸಿದ್ದಾರೆ. ಇದರಲ್ಲಿ ಕೇವಲ ಎಂಟು ಶತಕಗಳು (ಶೇ 23.52) ವಿಂಡೀಸ್ ತಂಡವನ್ನು ಗೆಲುವಿನತ್ತ ಕೊಂಡೊಯ್ದಿದೆ. ಇನ್ನುಳಿದ 26 ಶತಕಗಳ ಸಂದರ್ಭ ತಂಡಕ್ಕೆ ಡ್ರಾ ಅಥವಾ ಸೋಲು ಎದುರಾಗಿತ್ತು.

ಲಾರಾ ಆಡಿರುವ 131 ಟೆಸ್ಟ್‌ಗಳಲ್ಲಿ 63 ಪಂದ್ಯಗಳಲ್ಲೂ ವಿಂಡೀಸ್ ಸೋಲು ಅನುಭವಿಸಿತ್ತು. ಆದರೆ ಸಚಿನ್ ಆಡಿದ 198 ಪಂದ್ಯಗಳಲ್ಲಿ ಭಾರತಕ್ಕೆ 56 ರಲ್ಲಿ ಮಾತ್ರ ಸೋಲು ಎದುರಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.