ADVERTISEMENT

ವಯಸ್ಸು ನಲವತ್ತು; ಜವಾಬ್ದಾರಿ ದುಪ್ಪಟ್ಟು

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2012, 19:30 IST
Last Updated 4 ಏಪ್ರಿಲ್ 2012, 19:30 IST

ಕೋಲ್ಕತ್ತ (ಪಿಟಿಐ): ಆ್ಯಡಮ್  ಗಿಲ್‌ಕ್ರಿಸ್ಟ್ ಅವರ ವಯಸ್ಸು ಈಗ ನಲವತ್ತು. ಯುವಕರ ಆಟ ಎಂದೇ ಪರಿಗಣಿತವಾಗಿರುವ ಐಪಿಎಲ್‌ನಲ್ಲಿ ಅವರು ಹಿರಿಯ ಆಟಗಾರ ಕೂಡ. ಆದರೆ ಐದನೇ ಅವತರಣಿಕೆಯಲ್ಲಿ ಗಿಲ್‌ಕ್ರಿಸ್ಟ್ ಎರಡು ಜವಾಬ್ದಾರಿ ನಿಭಾಯಿಸಬೇಕಾಗಿದೆ. ಅದು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕತ್ವ ಹಾಗೂ ಕೋಚಿಂಗ್ ಜವಾಬ್ದಾರಿ.

`ನನಗೆ ನೀಡಿರುವ ಜವಾಬ್ದಾರಿ ನಿಭಾಯಿಸುವ ಶಕ್ತಿ ನನ್ನಲ್ಲಿದೆ. ಸಂತೋಷದಿಂದ ಈ ಜವಾಬ್ದಾರಿಯನ್ನು ಒಪ್ಪಿಕೊಂಡಿದ್ದೇನೆ. ತಂಡದ ಆಟಗಾರರಿಗೆ ಸ್ಫೂರ್ತಿ ಆಗುವ ಭರವಸೆ ಇದೆ~ ಎಂದು ಅವರು ನುಡಿದಿದ್ದಾರೆ.

ಆಸ್ಟ್ರೇಲಿಯಾ ತಂಡ ಹ್ಯಾಟ್ರಿಕ್ ವಿಶ್ವಕಪ್ ಗೆಲ್ಲಲು ಪ್ರಮುಖ ಪಾತ್ರ ವಹಿಸಿದ್ದ ಈ ವಿಕೆಟ್ ಕೀಪರ್ 2008ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಆದರೆ ಐದು ವರ್ಷಗಳಿಂದ ಐಪಿಎಲ್‌ನಲ್ಲಿ ಗಮನಾರ್ಹ ಪ್ರದರ್ಶನ ತೋರುತ್ತಿದ್ದಾರೆ.

`ವಿದಾಯ ಹೇಳಿದ ಮೇಲೆ ನಾನು ಹಲವು ವ್ಯವಹಾರಗಳಲ್ಲಿ ತೊಡಗಿದ್ದೇನೆ. ವಿಶ್ವವಿದ್ಯಾಲಯವೊಂದರ ರಾಯಭಾರಿ ಆಗಿದ್ದೇನೆ. ಜೊತೆಗೆ ಹತ್ತು ವರ್ಷ ವಯಸ್ಸಿನ ಪುತ್ರ ಹ್ಯಾರಿಗೆ ಕ್ರಿಕೆಟ್ ಕೋಚಿಂಗ್ ನೀಡುತ್ತಿದ್ದೇನೆ~ ಎಂದು ಗಿಲ್‌ಕ್ರಿಸ್ಟ್ ವಿವರಿಸಿದ್ದಾರೆ.

`ನಾವೀಗ ಸೆಮಿಫೈನಲ್ ತಲುಪುವ ಗುರಿ ಇಟ್ಟುಕೊಂಡಿದ್ದೇವೆ. ಅಲ್ಲಿಂದ ಫಲಿತಾಂಶ ಏನು ಬೇಕಾದರೂ ಆಗಬಹುದು. ಆದರೆ ಉತ್ತಮ ಆರಂಭ ಪಡೆಯುವುದು ತುಂಬಾ ಮುಖ್ಯ. ಎರಡು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸವಾಲನ್ನು ಮೆಟ್ಟಿ ನಿಲ್ಲಬೇಕು. ಇದು ನಮ್ಮ  ಮುಂದೆ ಇರುವ ದೊಡ್ಡ ಸವಾಲು~ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.