ADVERTISEMENT

ವಯಸ್ಸು ನಿರ್ಧಾರ ಪದ್ಧತಿ ಪ್ರಶ್ನಿಸಿದ ಕುಂಬ್ಳೆ

ಬಿಸಿಸಿಐ ಕಾರ್ಯಕಾರಿ ಸಭೆ ಸಮಿತಿ

​ಪ್ರಜಾವಾಣಿ ವಾರ್ತೆ
Published 15 ಜನವರಿ 2013, 19:59 IST
Last Updated 15 ಜನವರಿ 2013, 19:59 IST
ಬಿಸಿಸಿಐ ಸಭೆಯಲ್ಲಿ ಪಾಲ್ಗೊಂಡಿದ್ದ ಅನಿಲ್ ಕುಂಬ್ಳೆ.
ಬಿಸಿಸಿಐ ಸಭೆಯಲ್ಲಿ ಪಾಲ್ಗೊಂಡಿದ್ದ ಅನಿಲ್ ಕುಂಬ್ಳೆ.   

ಮುಂಬೈ (ಪಿಟಿಐ): ಜೂನಿಯರ್ ಮಟ್ಟದ ವಿವಿಧ ಕ್ರಿಕೆಟ್ ಟೂರ್ನಿಗಳಲ್ಲಿ ಆಟಗಾರರ ವಯಸ್ಸು ಪರಿಶೀಲಿಸಲು ಬಿಸಿಸಿಐ ಅಳವಡಿಸುತ್ತಿರುವ ಪದ್ಧತಿಯನ್ನು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಕರ್ನಾಟಕ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಅನಿಲ್ ಕುಂಬ್ಳೆ ಪ್ರಶ್ನಿಸಿದ್ದಾರೆ.

ಮಂಗಳವಾರ ಇಲ್ಲಿ ನಡೆದ ಬಿಸಿಸಿಐ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಕುಂಬ್ಳೆ ಈ ಸಂಬಂಧ ಪ್ರಶ್ನೆ ಮುಂದಿಟ್ಟಿದ್ದಾರೆ. ಆದರೆ ಇದಕ್ಕೆ ಬಿಸಿಸಿಐ ಅಧ್ಯಕ್ಷ   ಎನ್.ಶ್ರೀನಿವಾಸನ್ ಅವರ ಸಹಮತ ಇರಲಿಲ್ಲ ಎಂದು ಮೂಲಗಳು ತಿಳಿಸಿವೆ.

16 ಹಾಗೂ 19 ವರ್ಷದೊಳಗಿನ ಟೂರ್ನಿಯ ವೇಳೆ ಆಟಗಾರರ ವಯಸ್ಸು ನಿರ್ಧರಿಸಲು `ಮೂಳೆ ಸಾಂದ್ರತೆ' ಪರೀಕ್ಷೆಯನ್ನು ಬಿಸಿಸಿಐ ಅಳವಡಿಸಿದೆ.

`ವಯಸ್ಸು ಪರೀಶಿಲನೆ ಸಂಬಂಧ ಅನಿಲ್ ಪ್ರಶ್ನೆ ಎತ್ತಿದ್ದು ನಿಜ. ಏಕೆಂದರೆ ಬಿಸಿಸಿಐ ಈಗ ಕೈಗೊಳ್ಳುತ್ತಿರುವ ಮೂಳೆ ಸಾಂದ್ರತೆ ಪರೀಕ್ಷೆ ನಿಖರವಾಗಿಲ್ಲ. ವಯಸ್ಸು ನಿರ್ಧರಿಸಲು ಪರ್ಯಾಯ ವ್ಯವಸ್ಥೆಗೆ ಮುಂದಾಗಬೇಕು ಎಂದರು. ಆದರೆ ಅದಕ್ಕೆ ಅಧ್ಯಕ್ಷರು ಒಪ್ಪಲಿಲ್ಲ. ಈಗಿರುವ ಪದ್ಧತಿಯೇ ಸರಿಯಾಗಿದೆ ಎಂದು ಸಮರ್ಥಿಸಿಕೊಂಡರು' ಎಂದು ಸಭೆಯಲ್ಲಿ ಹಾಜರಿದ್ದ ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಆದರೆ ಈ ಸಂಬಂಧ ಪ್ರತಿಕ್ರಿಯೆ ನೀಡಲು ಕುಂಬ್ಳೆ ನಿರಾಕರಿಸಿದ್ದಾರೆ. `ಈ ವಿಷಯದ ಬಗ್ಗೆ ನಾನು ಪ್ರತಿಕ್ರಿಯಿಸಲು ಇಷ್ಟಪಡುವುದಿಲ್ಲ' ಎಂದಿದ್ದಾರೆ.

ಕುಂಬ್ಳೆ ಈ ಹಿಂದೆ ಕೂಡ ಬಿಸಿಸಿಐನ ಕೆಲವು ನಿರ್ಧಾರಗಳನ್ನು ಪ್ರಶ್ನಿಸಿದ್ದರು. ಭಾರತ ತಂಡ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ಪ್ರವಾಸದಲ್ಲಿ ಸತತ ಎಂಟು ಟೆಸ್ಟ್ ಪಂದ್ಯ ಸೋತಾಗ ಕೋಚ್ ಡಂಕನ್ ಫ್ಲೆಚರ್ ವಿರುದ್ಧ ಏನು ಕ್ರಮ ತೆಗೆದುಕೊಂಡಿದ್ದೀರಿ ಎಂಬುದು ಪ್ರಶ್ನಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.