ADVERTISEMENT

ವರ್ಷದ ಟೆಸ್ಟ್ ತಂಡ: ದ್ರಾವಿಡ್‌ಗೆ ಮಾತ್ರ ಸ್ಥಾನ

​ಪ್ರಜಾವಾಣಿ ವಾರ್ತೆ
Published 1 ಜನವರಿ 2012, 19:30 IST
Last Updated 1 ಜನವರಿ 2012, 19:30 IST

ನವದೆಹಲಿ (ಪಿಟಿಐ): ಭಾರತ ಕ್ರಿಕೆಟ್ ತಂಡದ ರಾಹುಲ್ ದ್ರಾವಿಡ್ `ಇಎಸ್‌ಪಿಎನ್ ಕ್ರಿಕ್ ಇನ್‌ಫೋ~ ನ 2011ರ    ಟೆಸ್ಟ್ ಇಲೆವೆನ್ ತಂಡದಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ಆಟಗಾರರಾಗಿದ್ದಾರೆ.

 ಏಕದಿನ ಇಲೆವೆನ್ ತಂಡದಲ್ಲಿ ಭಾರತದ ಐದು ಜನ ಆಟಗಾರರಿದ್ದಾರೆ. ಬ್ಯಾಟಿಂಗ್ ಮಾಂತ್ರಿಕ ಸಚಿನ್ ತೆಂಡೂಲ್ಕರ್‌ಗೆ ಟೆಸ್ಟ್ ಹಾಗೂ ಏಕದಿನ ಎರಡೂ ತಂಡಗಳ ಪಟ್ಟಿಯಲ್ಲಿ ಸ್ಥಾನ ಸಿಕ್ಕಿಲ್ಲ.

ದ್ರಾವಿಡ್‌ಗೆ ಟೆಸ್ಟ್ ತಂಡದಲ್ಲಿ ಮೂರನೇ ಕ್ರಮಾಂಕದಲ್ಲಿ ಸ್ಥಾನ ಲಭಿಸಿದೆ. 2011ರಲ್ಲಿ ಈ ಆಟಗಾರ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಟೆಸ್ಟ್‌ನಲ್ಲಿ ಒಟ್ಟು ನಾಲ್ಕು ಶತಕ ಸೇರಿದಂತೆ 1145 ರನ್ ಗಳಿಸಿದ್ದಾರೆ.

ಟೆಸ್ಟ್ ಪಟ್ಟಿಯಲ್ಲಿ ಇಂಗ್ಲೆಂಡ್ ತಂಡದ ಆಟಗಾರರೇ ಹೆಚ್ಚಾಗಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ನೀಡುವ ವರ್ಷದ ಆಟಗಾರ ಗೌರವ ಪಡೆದಿರುವ ಅಲಿಸ್ಟರ್ ಕುಕ್, ಜೇಮ್ಸ ಆ್ಯಂಡರ್ಸನ್, ಸ್ಟುವರ್ಟ್ ಬ್ರಾಡ್, ಮಧ್ಯಮ ಕ್ರಮಾಂಕದ    ಬ್ಯಾಟ್ಸ್‌ಮನ್ ಕೆವಿನ್    ಪೀಟರ್ಸನ್, ಇಯಾನ್ ಬೆಲ್ ಹಾಗೂ ವಿಕೆಟ್ ಕೀಪರ್ ಮ್ಯಾಟ್ ಪ್ರಯರ್ ಈ ತಂಡದಲ್ಲಿ ಸ್ಥಾನ ಪಡೆದ ಆಂಗ್ಲ ಪಡೆಯ ಆಟಗಾರರು.

ಏಕದಿನ ಪಂದ್ಯದಲ್ಲಿ ವೈಯಕ್ತಿಕವಾಗಿ 219 ರನ್ ಮಾಡಿ ವಿಶ್ವ ದಾಖಲೆ ಮಾಡಿದ ವೀರೇಂದ್ರ ಸೆಹ್ವಾಗ್ ಏಕದಿನ ತಂಡದಲ್ಲಿ ಮೊದಲ ಕ್ರಮಾಂಕ ದಲ್ಲಿದ್ದಾರೆ. ಆಸ್ಟ್ರೇಲಿಯಾದ ಶೇನ್‌ವ್ಯಾಟ್ಸನ್ ಅವರು ಸೆಹ್ವಾಗ್‌ಗೆ ಆರಂಭದ ಜೊತೆಗಾರರಾಗಿದ್ದಾರೆ.

ಹತ್ತನೇ ವಿಶ್ವಕಪ್ `ಹೀರೋ~ ಯುವರಾಜ್ ಸಿಂಗ್ ಐದನೇ ಕ್ರಮಾಂಕದಲ್ಲಿದ್ದಾರೆ. ಬೌಲಿಂಗ್ ವಿಭಾಗದಲ್ಲಿ            ಜಹೀರ್ ಖಾನ್ ಮಾತ್ರ ತಂಡದಲ್ಲಿ ಸ್ಥಾನ ಪಡೆದ ಭಾರತದ ಆಟಗಾರರಾಗಿದ್ದಾರೆ.

ಟೆಸ್ಟ್ ಇಲೆವೆನ್ ತಂಡ: ಅಲಿಸ್ಟರ್ ಕುಕ್, ಮೊಹಮ್ಮದ್ ಹಫೀಜ್, ರಾಹುಲ್ ದ್ರಾವಿಡ್, ಕೆವಿನ್ ಪೀಟರ್ಸನ್, ಇಯಾನ್ ಬೆಲ್, ಡೆರನ್ ಬ್ರಾವೊ, ಮ್ಯಾಟ್ ಪ್ರಯರ್ ಸ್ಟುವರ್ಟ್ ಬ್ರಾಡ್, ಡೇಲ್ ಸ್ಟೈನ್, ಸಯೀದ್ ಅಜ್ಮಲ್ ಮತ್ತು ಜೇಮ್ಸ    ಆ್ಯಂಡರ್ಸನ್. ಏಕದಿನ ಇಲೆವೆನ್ ತಂಡ: ವೀರೇಂದ್ರ ಸೆಹ್ವಾಗ್, ಶೇನ್ ವ್ಯಾಟ್ಸನ್, ವಿರಾಟ್ ಕೊಹ್ಲಿ, ಮಾಹೇಲ ಜಯವರ್ಧನೆ, ಯುವರಾಜ್ ಸಿಂಗ್, ಮಹೇಂದ್ರ ಸಿಂಗ್ ದೋನಿ, ಶಾಹಿದ್ ಅಫ್ರಿದಿ, ಮಿಷೆಲ್ ಜಾನ್ಸನ್, ಲಸಿತ್ ಮಾಲಿಂಗ, ಜಹೀರ್ ಖಾನ್ ಹಾಗೂ ಸಯೀದ್ ಅಜ್ಮಲ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.