ADVERTISEMENT

ವಲ್ತಾಟಿಗೆ ನಡುಗಿದ ಸೂಪರ್ ಕಿಂಗ್ಸ್

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2011, 19:30 IST
Last Updated 13 ಏಪ್ರಿಲ್ 2011, 19:30 IST

ಮೊಹಾಲಿ (ಪಿಟಿಐ): ಐಪಿಎಲ್‌ನಿಂದಾಗಿ ಮತ್ತೊಬ್ಬ ಹೀರೊ ಜನಿಸಿದ್ದಾರೆ. ಅದು ಪಾಲ್ ವಲ್ತಾಟಿ. ಹೆಚ್ಚಿನವರಿಗೆ ಈ ವಲ್ತಾಟಿ ಯಾರೆಂಬುದು ಗೊತ್ತಿರಲಿಕ್ಕಿಲ್ಲ. ಅವರೀಗ ಅಬ್ಬರದ ಶತಕದ ಮೂಲಕ ತಮ್ಮನ್ನು ಕ್ರಿಕೆಟ್ ಜಗತ್ತಿಗೆ ಪರಿಚಯ ಮಾಡಿಕೊಂಡಿದ್ದಾರೆ!

ಪಂಜಾಬ್ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ಬುಧವಾರ ಎಲ್ಲೆಲ್ಲೂ ವಲ್ತಾಟಿ ಅವರ ಹೆಸರಿನದ್ದೇ ಜಪ. ಕಾರಣ ಅವರು ಕೇವಲ 63 ಎಸೆತಗಳಲ್ಲಿ ಗಳಿಸಿದ ಅಜೇಯ 120 ರನ್‌ಗಳ ಆಟ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಒಡತಿ ಪ್ರೀತಿ ಜಿಂಟಾ ಅವರ ಮೊಗದಲ್ಲಿ ನಗು ಮೂಡಿಸಿತು.

ವಲ್ತಾಟಿ ಶತಕದ ಪರಿಣಾಮ ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಈ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ತಂಡದವರು ಆರು ವಿಕೆಟ್‌ಗಳಿಂದ ಚೆನ್ನೈ ಸೂಪರ್ ಕಿಂಗ್ಸ್‌ಗೆ ಸೋಲುಣಿಸಿದ್ದಾರೆ. ಈ ತಂಡಕ್ಕೆ ಲಭಿಸಿದ ಮೊದಲ ಗೆಲುವು ಇದು.

ADVERTISEMENT

ಚೆನ್ನೈ ನೀಡಿದ 189 ರನ್‌ಗಳ ಭಾರಿ ಗುರಿ ವಲ್ತಾಟಿ ಆರ್ಭಟಕ್ಕೆ ನೀರು ಕುಡಿದಷ್ಟೇ ಸುಲಭ ಎನಿಸಿತು. ಪಂಜಾಬ್ ತಂಡದವರು 19.1 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗೆಲುವಿನ ಗೆರೆ ದಾಟಿ ನಿಂತರು. ಆದರೆ ಇಷ್ಟು ದೊಡ್ಡ ಮೊತ್ತ ದಾಟಿ ನಿಲ್ಲಲು ಸಾಧ್ಯವಾದ ಕ್ರೆಡಿಟ್ ಸಂಪೂರ್ಣ 27 ವರ್ಷ ವಯಸ್ಸಿನ ವಲ್ತಾಟಿಗೆ ಸಲ್ಲಬೇಕು. ಅವರು ಈ ಪಂದ್ಯದಲ್ಲಿ 19 ಬೌಂಡರಿ ಹಾಗೂ ಒಂದು ಸಿಕ್ಸರ್ ಎತ್ತಿದರು.

ಐಪಿಎಲ್‌ನ ಪಂದ್ಯವೊಂದರಲ್ಲಿ ಅತಿ ಹೆಚ್ಚು ಬೌಂಡರಿ ಗಳಿಸಿದ ಶ್ರೇಯಕ್ಕೆ ಅವರು ಪಾತ್ರರಾದರು. ಈ ಮೊದಲು ಮಾಹೇಲ ಜಯವರ್ಧನೆ 14 ಬೌಂಡರಿ ಗಳಿಸಿದ್ದರು.ನಾಲ್ಕನೇ ಅವತರಣಿಕೆಯಲ್ಲಿ ದಾಖಲಾದ ಮೊದಲ ಶತಕ ಕೂಡ. ಈ ಟೂರ್ನಿಯಲ್ಲಿ ಇದುವರೆಗೆ ಅತಿ ಹೆಚ್ಚು ರನ್ ಗಳಿಸಿರುವ ಅವರು ‘ಆರೇಂಜ್ ಟೋಪಿ’ ಗೌರವ ಪಡೆದಿದ್ದಾರೆ. 52 ಎಸೆತಗಳಲ್ಲಿ ಅವರು ಮೂರಂಕಿ ಗೆರೆ ದಾಟಿದರು.

ಯಾರಿ ವಲ್ತಾಟಿ?: ಮುಂಬೈನ ಆಟಗಾರ ವಲ್ತಾಟಿ 2009ರ ಐಪಿಎಲ್‌ನಲ್ಲಿ ರಾಜಸ್ತಾನ ರಾಯಲ್ಸ್ ತಂಡದಲ್ಲಿ ಆಡಿದ್ದರು. ಆದರೆ ಸುದ್ದಿ ಮಾಡಿರಲಿಲ್ಲ.

2002ರಲ್ಲಿ ನಡೆದ 19 ವರ್ಷ ವಯಸ್ಸಿನೊಳಗಿನವರ ವಿಶ್ವಕಪ್‌ನಲ್ಲಿ ಭಾರತ ತಂಡದಲ್ಲಿ ಆಡಿದ್ದರು. ಆ ತಂಡದಲ್ಲಿ ಇರ್ಫಾನ್ ಪಠಾಣ್, ಪಾರ್ಥಿವ್ ಪಟೇಲ್ ಕೂಡ ಇದ್ದರು. ಆದರೆ ಕಣ್ಣಿಗೆ ಗಾಯವಾದ ಕಾರಣ ಅವರ ಕ್ರಿಕೆಟ್ ಜೀವನ ಬಹುತೇಕ ಅಂತ್ಯಗೊಂಡಿತ್ತು. 2006ರಲ್ಲಿ ಬರೋಡ ಎದುರು ಒಂದು ರಣಜಿ ಏಕದಿನ ಪಂದ್ಯ ಆಡಿದ್ದರು.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಚೆನ್ನೈ ಪ್ರಥಮ ಓವರ್‌ನಲ್ಲಿಯೇ ಆಘಾತ ಅನುಭವಿಸಿತು. ಕಾರಣ ಪಂಜಾಬ್ ತಂಡದ ವೇಗಿ ಪ್ರವೀಣ್ ಕುಮಾರ್ ಮೊದಲ ಓವರ್‌ನ ಮೊದಲ ಎರಡು ಎಸೆತಗಳಲ್ಲಿ ಶ್ರೀಕಾಂತ್ ಅನಿರುದ್ಧ ಹಾಗೂ ಸುರೇಶ್ ರೈನಾ ವಿಕೆಟ್ ಪಡೆದರು. ಆದರೆ ಮುರಳಿ ವಿಜಯ್ (74; 43ಎಸೆತ, 6 ಬೌಂ, 4 ಸಿ.), ಎಸ್.ಬದರೀನಾಥ್ (ಅಜೇಯ 66; 56 ಎಸೆತ, 8 ಬೌಂ) ಹಾಗೂ ನಾಯಕ ದೋನಿ (43; 20 ಎಸೆತ, 4 ಬೌಂ. 2 ಸಿ.) ನೆರವಿನಿಂದ ಚೆನ್ನೈ ಸವಾಲಿನ ಮೊತ್ತ ಪೇರಿಸಿತು.

ಸ್ಕೋರು ವಿವರ

ಚೆನ್ನೈ ಸೂಪರ್ ಕಿಂಗ್ಸ್ 20 ಓವರ್‌ಗಳಲ್ಲಿ
4 ವಿಕೆಟ್ ನಷ್ಟಕ್ಕೆ 188

ಶ್ರೀಕಾಂತ್ ಅನಿರುದ್ಧ ಎಲ್‌ಬಿಡಬ್ಲ್ಯು ಬಿ ಪ್ರವೀಣ್ ಕುಮಾರ್  00
ಮುರಳಿ ವಿಜಯ್ ಸ್ಡಂಪ್ಡ್ ಆ್ಯಡಮ್ ಗಿಲ್‌ಕ್ರಿಸ್ಟ್ ಬಿ ಪಿಯೂಷ್ ಚಾವ್ಲಾ  74
ಸುರೇಶ್ ರೈನಾ ಸಿ ಪಾಲ್ ವಲ್ತಾಟಿ ಬಿ ಪ್ರವೀಣ್ ಕುಮಾರ್  00
ಎಸ್.ಬದರೀನಾಥ್ ಔಟಾಗದೆ  66
ಎಂ.ಎಸ್.ದೋನಿ ಬಿ ರ್ಯಾನ್ ಹ್ಯಾರಿಸ್  43
ಇತರೆ: (ಲೆಗ್‌ಬೈ-3, ವೈಡ್-1, ನೋಬಾಲ್-1)  05
ವಿಕೆಟ್ ಪತನ: 1-0 (ಅನಿರುದ್ಧ; 0.1); 2-0 (ರೈನಾ; 0.2); 3-124 (ವಿಜಯ್; 14.5); 4-188 (ದೋನಿ; 19.6).
ಬೌಲಿಂಗ್: ಪ್ರವೀಣ್ ಕುಮಾರ್ 4-1-37-2, ರ್ಯಾನ್ ಹ್ಯಾರಿಸ್ 4-0-25-1, ರ್ಯಾನ್ ಮೆಕ್‌ಲರೆನ್ 4-0-31-0(ನೋಬಾಲ್-1), ಪಿಯೂಷ್ ಚಾವ್ಲಾ 3-0-33-1, ಅಭಿಷೇಕ್ ನಾಯರ್ 2-0-24-0, ಭಾರ್ಗವ್ ಭಟ್ 3-0-35-0 (ವೈಡ್-1).

ಕಿಂಗ್ಸ್ ಇಲೆವೆನ್ ಪಂಜಾಬ್ 19.1 ಓವರ್‌ಗಳಲ್ಲಿ
4 ವಿಕೆಟ್ ನಷ್ಟಕ್ಕೆ 193

ಪಾಲ್ ವಲ್ತಾಟಿ ಔಟಾಗದೆ  120
ಆ್ಯಡಮ್ ಗಿಲ್‌ಕ್ರಿಸ್ಟ್ ಸಿ ಸೂರಜ್ ರಂದೀವ್ ಬಿ ಅಲ್ಬಿ ಮೊರ್ಕೆಲ್  19
ಶೇನ್ ಮಾರ್ಷ್ ರನ್‌ಔಟ್ (ರಂದೀವ್/ಅನಿರುದ್ಧ)  12
ಸನ್ನಿ ಸಿಂಗ್ ಸಿ ಜಕಾತಿ ಬಿ ಸೂರಜ್ ರಂದೀವ್  20
ಅಭಿಷೇಕ್ ನಾಯರ್ ಎಲ್‌ಬಿಡಬ್ಲ್ಯು ಬಿ ಟಿಮ್ ಸೌಥಿ  00
ದಿನೇಶ್ ಕಾರ್ತಿಕ್ ಔಟಾಗದೆ  21

ಇತರೆ: (ವೈಡ್-1)  01

ವಿಕೆಟ್ ಪತನ: 1-61 (ಗಿಲ್‌ಕ್ರಿಸ್ಟ್; 5.5); 2-100 (ಮಾರ್ಷ್; 10.1); 3-136 (ಸನ್ನಿ; 13.6); 4-136 (ನಾಯರ್; 14.1).

ಬೌಲಿಂಗ್: ಆರ್.ಅಶ್ವಿನ್ 4-0-37-0 (ವೈಡ್-1), ಟಿಮ್ ಸೌಥಿ 4-0-33-1, ಅಲ್ಬಿ ಮೊರ್ಕೆಲ್ 3-0-38-1, ಸೂರಜ್ ರಂದೀವ್ 4-0-32-1, ಸ್ಕಾಟ್ ಸ್ಟೈರಿಸ್ 1-0-13-0, ಶದಾಬ್ ಜಕಾತಿ 2.1-0-28-0, ಸುರೇಶ್ ರೈನಾ 1-0-12-0

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.