ADVERTISEMENT

ವಾರಿಯರ್ಸ್‌ಗೆ ರೋಚಕ ಜಯ

ಮಣಿಂದರ್‌ ಮಿಂಚು; ಪಿಂಕ್ ಪ್ಯಾಂಥರ್ಸ್‌ಗೆ ನಿರಾಸೆ

ಪಿಟಿಐ
Published 1 ಅಕ್ಟೋಬರ್ 2017, 19:37 IST
Last Updated 1 ಅಕ್ಟೋಬರ್ 2017, 19:37 IST
ವಾರಿಯರ್ಸ್‌ಗೆ ರೋಚಕ ಜಯ
ವಾರಿಯರ್ಸ್‌ಗೆ ರೋಚಕ ಜಯ   

ಚೆನ್ನೈ: ಮಣಿಂದರ್ ಸಿಂಗ್ ಅವರ ಪ್ರಭಾವಿ ದಾಳಿಯ ನೆರವು ಪಡೆದ ಬೆಂಗಾಲ್ ವಾರಿಯರ್ಸ್ ತಂಡ ಭಾನುವಾರದ ಪ್ರೊ ಕಬಡ್ಡಿ ಪಂದ್ಯದಲ್ಲಿ ರೋಚಕವಾಗಿ ಗೆಲುವು ದಾಖಲಿಸಿದೆ.

ಪಿಂಕ್ ಪ್ಯಾಂಥರ್ಸ್ ವಿರುದ್ಧದ ಪಂದ್ಯದಲ್ಲಿ ವಾರಿಯರ್ಸ್‌ 32–31 ಪಾಯಿಂಟ್ಸ್‌ಗಳಿಂದ ಗೆಲುವಿನ ಕದ ತಟ್ಟಿತು. ಕೊನೆಯ ಹಂತದವರೆಗೂ ಯಾರು ಗೆಲ್ಲಬಹುದು ಎಂಬ ಕುತೂಹಲವನ್ನು ಉಳಿಸಿಕೊಂಡಿದ್ದ ಪಂದ್ಯ ರೋಚಕ ಹಂತ ತಲುಪಿತ್ತು. ಆದರೆ ಮಣಿಂದರ್ ಸಿಂಗ್ ಅವರ ಚುರುಕಿನ ದಾಳಿಗೆ ಪ್ಯಾಂಥರ್ಸ್ ಮಣಿಯಬೇಕಾಯಿತು.

ಮಣಿಂದರ್ ಒಟ್ಟು 16 ಪಾಯಿಂಟ್ಸ್‌ಗಳನ್ನು ತಂದುಕೊಡುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು.

ADVERTISEMENT

ರೈಡಿಂಗ್‌ನಲ್ಲಿ 12, ನಾಲ್ಕು ಬೋನಸ್ ಪಾಯಿಂಟ್ಸ್‌ಗಳನ್ನು ಅವರು ಕಲೆಹಾಕಿದರು. ನಿಖರವಾದ ರೈಡಿಂಗ್‌ನಿಂದಾಗಿ ಕ್ರೀಡಾಂಗಣದಲ್ಲಿ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದರು. ಉಳಿದ ರೈಡರ್‌ಗಳಾದ ದೀಪಕ್ ನರ್ವಾಲ್ ಹಾಗೂ ರಾಣಾ ಸಿಂಗ್‌ ತಲಾ ನಾಲ್ಕು ಪಾಯಿಂಟ್ಸ್ ತಂದುಕೊಟ್ಟರು.

ಪಿಂಕ್ ಪ್ಯಾಂಥರ್ಸ್ ಕೂಡ ಆರಂಭದಿಂದ ಚುರುಕಿನ ದಾಳಿ ನಡೆಸಿತು. ಈ ತಂಡ ರೈಡಿಂಗ್‌ನಲ್ಲಿ 22 ಪಾಯಿಂಟ್ಸ್ ಗಳಿಸಿತು. ಮೊದಲರ್ಧದಲ್ಲಿ ಈ ತಂಡ 12–11ರಲ್ಲಿ ಮುಂದಿತ್ತು. ದ್ವಿತೀಯಾರ್ಧದಲ್ಲಿ ಕೂಡ ಸಮಬಲದ ಹೋರಾಟ ನಡೆಸಿತು. ಆದರೆ ಕೊನೆಯಲ್ಲಿ ಪಾಯಿಂಟ್ಸ್ ಬಿಟ್ಟುಕೊಟ್ಟಿದ್ದು ಈ ತಂಡದ ಸೋಲಿಗೆ ಕಾರಣವಾಯಿತು.

ಪ್ಯಾಂಥರ್ಸ್‌ ತಂಡಕ್ಕೆ ಪವನ್ ಕುಮಾರ್ ಬಲ ತುಂಬಿದರು. ಒಟ್ಟು 13 ಪಾಯಿಂಟ್ಸ್‌ಗಳನ್ನು ಅವರು ತಂದರು. ಇದರಲ್ಲಿ ರೈಡಿಂಗ್‌ನಲ್ಲಿ ಏಳು ಹಾಗೂ ಆರು ಬೋನಸ್‌ ಪಾಯಿಂಟ್ಸ್‌ಗಳನ್ನು ಗಿಟ್ಟಿಸಿದರು. ತುಷಾರ್ ಪಾಟೀಲ್ ಆರು ಪಾಯಿಂಟ್ಸ್ ಸೇರಿಸಿದರು.

ನಿತಿನ್ ರಾವಲ್ ಹಾಗೂ ಸಿದ್ದಾರ್ಥ್ ತಲಾ ಮೂರು ಪಾಯಿಂಟ್ಸ್ ತಂದುಕೊಟ್ಟರು.

ಪ್ಯಾಂಥರ್ಸ್ ತಂಡ ‘ಎ’ ಗುಂಪಿನ ಪಾಯಿಂಟ್ಸ್ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. 15 ಪಂದ್ಯಗಳಲ್ಲಿ ಈ ತಂಡ ಏಳು ಪಂದ್ಯಗಳನ್ನು ಗೆದ್ದು, ಉಳಿದ ಏಳು ಪಂದ್ಯಗಳನ್ನು ಸೋತಿದೆ. ಒಂದು ಪಂದ್ಯ ಟೈ ಆಗಿದೆ. ಈ ತಂಡದ ಬಳಿ ಒಟ್ಟು 44 ಪಾಯಿಂಟ್ಸ್‌ಗಳು ಇವೆ.

ಬೆಂಗಾಲ್ ವಾರಿಯರ್ಸ್‌ ‘ಬಿ’ ಗುಂಪಿನ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಆಡಿದ 19 ಪಂದ್ಯಗಳಲ್ಲಿ ಈ ತಂಡ 9 ಪಂದ್ಯಗಳನ್ನು ಗೆದ್ದುಕೊಂಡು 64 ಪಾಯಿಂಟ್ಸ್ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.