ADVERTISEMENT

ವಾರ್ನರ್‌ ಬದಲು ಹೇಲ್ಸ್‌ಗೆ ಸ್ಥಾನ

ಏಜೆನ್ಸೀಸ್
Published 31 ಮಾರ್ಚ್ 2018, 19:30 IST
Last Updated 31 ಮಾರ್ಚ್ 2018, 19:30 IST
ಅಲೆಕ್ಸ್‌ ಹೇಲ್ಸ್‌
ಅಲೆಕ್ಸ್‌ ಹೇಲ್ಸ್‌   

ಮುಂಬೈ: ಇಂಗ್ಲೆಂಡ್‌ ಕ್ರಿಕೆಟ್‌ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಅಲೆಕ್ಸ್‌ ಹೇಲ್ಸ್‌ ಅವರು ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) 11ನೇ ಆವೃತ್ತಿಯಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದಲ್ಲಿ ಆಡಲಿದ್ದಾರೆ.

ಈ ವಿಷಯವನ್ನು ಸನ್‌ರೈಸರ್ಸ್‌ ಫ್ರಾಂಚೈಸ್‌ ಶನಿವಾರ ತಿಳಿಸಿದೆ. ಈ ಮೊದಲು ತಂಡದಲ್ಲಿದ್ದ ಆಸ್ಟ್ರೇಲಿಯಾದ ಡೇವಿಡ್‌ ವಾರ್ನರ್‌ ಚೆಂಡು ವಿರೂಪಗೊಳಿಸಿದ ಪ್ರಕರಣದಲ್ಲಿ ಭಾಗಿಯಾಗಿದ್ದರು.  ಆದ್ದರಿಂದ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ವಾರ್ನರ್‌ ಮೇಲೆ ಒಂದು ವರ್ಷ ನಿಷೇಧ ವಿಧಿಸಿದೆ.

ಅಲೆಕ್ಸ್‌ ಅವರನ್ನು ಈ ಬಾರಿಯ ಆಟಗಾರರ ಹರಾಜಿನಲ್ಲಿ ಯಾವ ತಂಡವೂ ಖರೀದಿಸಿರಲಿಲ್ಲ. 29 ವರ್ಷದ ಅಲೆಕ್ಸ್‌, ಟ್ವೆಂಟಿ–20 ಮಾದರಿಯಲ್ಲಿ ಶತಕ ಸಿಡಿಸಿದ ಇಂಗ್ಲೆಂಡ್‌ನ ಏಕೈಕ ಬ್ಯಾಟ್ಸ್‌ಮನ್‌ ಎಂಬ ಹಿರಿಮೆ ಹೊಂದಿದ್ದಾರೆ. ಹೋದ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್‌ ತಂಡದಲ್ಲಿದ್ದ ಅವರು ಒಂದೂ ಪಂದ್ಯ ಆಡಿರಲಿಲ್ಲ.

ADVERTISEMENT

52 ಅಂತರರಾಷ್ಟ್ರೀಯ ಟ್ವೆಂಟಿ–20 ‍ಪಂದ್ಯಗಳನ್ನು ಆಡಿರುವ ಹೇಲ್ಸ್‌ 1456ರನ್‌ ಗಳಿಸಿದ್ದಾರೆ. ಏಳು ಅರ್ಧಶತಕಗಳೂ ಅವರ ಖಾತೆಯಲ್ಲಿವೆ.

ವಾರ್ನರ್‌ ಈ ಬಾರಿಯ ಐಪಿಎಲ್‌ಗೆ ಅಲಭ್ಯರಾಗಿರುವ ಕಾರಣ ನ್ಯೂಜಿಲೆಂಡ್‌ನ ಕೇನ್‌ ವಿಲಿಯಮ್ಸನ್‌ ಅವರನ್ನು ಸನ್‌ರೈಸರ್ಸ್‌ ತಂಡದ ನಾಯಕರನ್ನಾಗಿ ನೇಮಿಸಲಾಗಿತ್ತು.

‘ಅಲೆಕ್ಸ್‌ ನೀವು ನಮ್ಮ ತಂಡದ ಭಾಗವಾಗಿರುವುದು ಖುಷಿ ನೀಡಿದೆ. ಈ ಬಾರಿಯ ಟೂರ್ನಿಯಲ್ಲಿ ನಿಮ್ಮ ಆಟ ನೋಡಲು ನಾವೆಲ್ಲ ಕಾತರರಾಗಿದ್ದೇವೆ’ ಎಂದು ಸನ್‌ರೈಸರ್ಸ್‌ ಕೋಚ್‌ ಟಾಮ್‌ ಮೂಡಿ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.