ADVERTISEMENT

ವಿಂಡೀಸ್‌ಗೆ ಭಾರತ ಸವಾಲು

ಕ್ರಿಕೆಟ್‌: ಕ್ರಿಸ್‌ ಗೇಲ್‌ ಮೇಲೆ ಎಲ್ಲರ ಚಿತ್ತ; ಆತ್ಮವಿಶ್ವಾಸದಲ್ಲಿ ದೋನಿ ಬಳಗ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2014, 19:30 IST
Last Updated 22 ಮಾರ್ಚ್ 2014, 19:30 IST

ಮೀರ್‌ಪುರ (ಪಿಟಿಐ): ಪಾಕಿಸ್ತಾನ ವಿರುದ್ಧದ ಮಹತ್ವದ ಪಂದ್ಯದಲ್ಲಿ ಸುಲಭ ಗೆಲುವು ಪಡೆದು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಭಾರತ ತಂಡ ಇದೀಗ ಕ್ರೀಸ್‌ ಗೇಲ್‌ ಅವರ ಸವಾಲು ಎದುರಿಸಲು ಸಜ್ಜಾಗಿದೆ.

ಟ್ವೆಂಟಿ-20 ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯ ಭಾನುವಾರದ ಪಂದ್ಯದಲ್ಲಿ ಮಹೇಂದ್ರ ಸಿಂಗ್‌ ದೋನಿ ಬಳಗ ವೆಸ್ಟ್‌ ಇಂಡೀಸ್‌ ಜೊತೆ ಪೈಪೋಟಿ ನಡೆಸಲಿದೆ. ಈ ಪಂದ್ಯ ಸ್ಫೋಟಕ ಬ್ಯಾಟ್ಸ್‌ಮನ್‌ ಗೇಲ್‌ ಹಾಗೂ ಭಾರತದ ಬೌಲರ್‌ಗಳ ನಡುವಿನ ಹೋರಾಟ ಎನಿಸಿಕೊಂಡಿದೆ.

ಐಪಿಎಲ್‌ ಒಳಗೊಂಡಂತೆ ಟ್ವೆಂಟಿ-20 ಪಂದ್ಯಗಳಲ್ಲಿ ಅಬ್ಬರದ ಆಟದ ಮೂಲಕ ಮಿಂಚಿರುವ ಕ್ರಿಸ್‌ ಗೇಲ್‌ ಭಾರತಕ್ಕೆ ತಲೆನೋವಾಗಿ ಪರಿಣಮಿಸುವ ಸಾಧ್ಯತೆಯಿದೆ. ಒಂದೆರಡು ಓವರ್‌ಗಳಲ್ಲಿ ಪಂದ್ಯದ ಗತಿಯನ್ನೇ ಬದಲಿಸಲು ತಾಕತ್ತು ಗೇಲ್‌ ಬಾಹುಗಳಲ್ಲಿ ಅಡಗಿದೆ. ಗೇಲ್‌ ಅಲ್ಲದೆ ಡ್ವೇನ್‌ ಸ್ಮಿತ್‌, ಡ್ವೇನ್‌ ಬ್ರಾವೊ ಮತ್ತು ಮಾರ್ಲೊನ್‌ ಸ್ಯಾಮುಯೆಲ್ಸ್‌ ಅವರೂ ಅಬ್ಬರದ ಆಟವಾಡುವ ಸಾಮರ್ಥ್ಯ ಹೊಂದಿದ್ದಾರೆ.

ಆದ್ದರಿಂದ ಭಾರತದ ಬೌಲರ್‌ಗಳಿಗೆ ಇಂದಿನ ಪಂದ್ಯ ಅಗ್ನಿಪರೀಕ್ಷೆ ಎನಿಸಿದೆ. ಪಾಕ್‌ ವಿರುದ್ಧ ಶುಕ್ರವಾರ ತೋರಿದ ಪ್ರದರ್ಶನದಿಂದ ಬೌಲರ್‌ಗಳ ಆತ್ಮವಿಶ್ವಾಸ ಹೆಚ್ಚಿಸಿರುವುದು ನಿಜ. ಪಾಕ್‌ ತಂಡದಲ್ಲೂ ಶಾಹಿದ್‌ ಅಫ್ರಿದಿ ಮತ್ತು ಉಮರ್‌ ಅಕ್ಮಲ್‌ ಅವರಂತಹ ಅಪಾಯಕಾರಿ ಬ್ಯಾಟ್ಸ್‌ಮನ್‌ ಗಳಿದ್ದರು. ಆದರೆ ಭಾರತದ ಸ್ಪಿನ್ನರ್‌ಗಳು ಸಮರ್ಥ ದಾಳಿ ನಡೆಸಿದ್ದರು.

ಇದೀಗ ಗೇಲ್‌ ಒಳಗೊಂಡಂತೆ ವಿಂಡೀಸ್‌ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕುವ ಸವಾಲು ಬೌಲರ್‌ಗಳ ಮುಂದಿದೆ. ಆರ್‌. ಅಶ್ವಿನ್‌, ಅಮಿತ್‌ ಮಿಶ್ರಾ ಮತ್ತು ರವೀಂದ್ರ ಜಡೇಜ ಈ ಪಂದ್ಯದಲ್ಲಿ ನಿರ್ಣಾಯಕ ಪಾತ್ರ ವಹಿಸುವ ಸಾಧ್ಯತೆಯಿದೆ. ಭಾರತದ ಸ್ಪಿನ್‌ ದಾಳಿಯನ್ನು ಎದುರಿಸಲು ಗೇಲ್‌ ಯಾವ ತಂತ್ರ ರೂಪಿಸುವರು ಎಂಬುದನ್ನು ನೋಡಬೇಕು.

ವೇಗದ ಬೌಲರ್‌ಗಳಾದ ಭುವನೇಶ್ವರ್‌ ಕುಮಾರ್‌ ಮತ್ತು ಮೊಹಮ್ಮದ್‌ ಶಮಿ ಕೂಡಾ ಶಿಸ್ತಿನ ದಾಳಿ ನಡೆಸಿದರೆ ವಿಂಡೀಸ್‌ಗೆ ಬೃಹತ್‌ ಮೊತ್ತ ಪೇರಿಸುವುದು ಸುಲಭವಲ್ಲ.

ಬ್ಯಾಟ್ಸ್‌ಮನ್‌ಗಳ ಮೇಲೆ ಭರವಸೆ: ಭಾರತ ತಂಡ ಈ ಪಂದ್ಯದಲ್ಲೂ ಬ್ಯಾಟ್ಸ್‌ಮನ್‌ಗಳ ಮೇಲೆ ಭರವಸೆ ಇಟ್ಟುಕೊಂಡು ಕಣಕ್ಕಿಳಿಯಲಿದೆ. ಏಕೆಂದರೆ ತಂಡದ ಶಕ್ತಿ ಅಡಗಿರುವುದು ಬ್ಯಾಟಿಂಗ್‌ನಲ್ಲಿ.

ಪಾಕ್‌ ವಿರುದ್ಧದ ಪಂದ್ಯದಲ್ಲಿ ಮಿಂಚಿದ್ದ ವಿರಾಟ್‌ ಕೊಹ್ಲಿ ಮತ್ತು ಸುರೇಶ್‌ ರೈನಾ ಅವರನ್ನು ತಂಡ ನೆಚ್ಚಿಕೊಂಡಿದೆ. ಕೊಹ್ಲಿ ಅವರ ಸಾಮರ್ಥ್ಯ ಏನೆಂಬುದು ಎಲ್ಲರಿಗೂ ತಿಳಿದಿದೆ. ರೈನಾ ಕೂಡಾ ಲಯ ಕಂಡುಕೊಂಡಿರುವುದು ನಾಯಕ ದೋನಿ ಮೊಗದಲ್ಲಿ ನಗು ಮೂಡಿಸಿದೆ. ಈ ಎಡಗೈ ಬ್ಯಾಟ್ಸ್‌ಮನ್‌ ಪಾಕ್‌ ವಿರುದ್ಧ ಅಜೇಯ 35 ರನ್‌ ಗಳಿಸಿದ್ದರು. ಅದಕ್ಕೂ ಮುನ್ನ ನಡೆದಿದ್ದ ಎರಡು ಅಭ್ಯಾಸ ಪಂದ್ಯಗಳಲ್ಲಿ ಕ್ರಮವಾಗಿ 41 ಹಾಗೂ 54 ರನ್‌ ಪೇರಿಸಿದ್ದರು.

ಶಿಖರ್‌ ಧವನ್‌ ಮತ್ತು ರೋಹಿತ್‌ ಶರ್ಮ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ತಂಡಕ್ಕೆ ಉತ್ತಮ ಆರಂಭ ನೀಡಿದ್ದರು. ಆದರೆ ಇವರಿಂದ ದೊಡ್ಡ ಮೊತ್ತ ಮೂಡಿಬಂದಿಲ್ಲ.ಪಾಕ್‌ ಎದುರು ವೈಫಲ್ಯ ಅನುಭವಿಸಿದ್ದ ಯುವರಾಜ್‌ ಸಿಂಗ್‌ಗೆ ಈ ಪಂದ್ಯ ಮಹತ್ವದ್ದಾಗಿದೆ. ಏಕೆಂದರೆ ಅಜಿಂಕ್ಯ ರಹಾನೆ  ಮತ್ತು ಸ್ಟುವರ್ಟ್‌ ಬಿನ್ನಿ ಅವರು ಅಂತಿಮ ಇಲೆವೆನ್‌ನಲ್ಲಿ ಸ್ಥಾನ ಪಡೆಯಲು ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ‘ಯುವಿ’ ಇನ್ನೊಂದು ವೈಫಲ್ಯ ಅನುಭವಿಸಿದರೆ ಅಂತಿಮ ಇಲೆವೆನ್‌ನಲ್ಲಿ ಸ್ಥಾನಕ್ಕೆ ಕುತ್ತುಂಟಾಗುವ ಸಾಧ್ಯತೆಯಿದೆ.

ಭಾರತದ ಬ್ಯಾಟ್ಸ್‌ಮನ್‌ಗಳು ಸ್ಪಿನ್ನರ್‌ ಸುನಿಲ್‌ ನಾರಾಯಣ ಅವರನ್ನು ಹೇಗೆ ಎದುರಿಸುವರು ಎಂಬುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ವೇಗದ ಬೌಲರ್‌ ರವಿ ರಾಂಪಾಲ್‌ ಕೂಡಾ ‘ಮಹಿ’ ಬಳಗಕ್ಕೆ ಸವಾಲಾಗಿ ಪರಿಣಮಿಸಿದರೆ ಅಚ್ಚರಿಯಿಲ್ಲ.

ತಂಡಗಳು ಇಂತಿವೆ
ಭಾರತ: ಮಹೇಂದ್ರ ಸಿಂಗ್‌ ದೋನಿ (ನಾಯಕ), ಶಿಖರ್‌ ಧವನ್‌, ರೋಹಿತ್‌ ಶರ್ಮ, ವಿರಾಟ್‌ ಕೊಹ್ಲಿ, ಸುರೇಶ್‌ ರೈನಾ, ಯುವರಾಜ್‌ ಸಿಂಗ್‌, ಅಜಿಂಕ್ಯ ರಹಾನೆ, ರವೀಂದ್ರ ಜಡೇಜ, ರವಿಚಂದ್ರನ್‌ ಅಶ್ವಿನ್‌, ಭುವನೇಶ್ವರ್‌ ಕುಮಾರ್‌, ಮೊಹಮ್ಮದ್‌ ಶಮಿ, ಸ್ಟುವರ್ಟ್‌ ಬಿನ್ನಿ, ಅಮಿತ್‌ ಮಿಶ್ರಾ, ಮೋಹಿತ್‌ ಶರ್ಮ, ವರುಣ್‌ ಆ್ಯರನ್‌

ವೆಸ್ಟ್‌ ಇಂಡೀಸ್‌: ಡರೆನ್‌ ಸಮಿ (ನಾಯಕ), ಸ್ಯಾಮುಯೆಲ್‌ ಬದ್ರಿ, ಡ್ವೇನ್‌ ಬ್ರಾವೊ, ಜಾನ್ಸನ್‌ ಚಾರ್ಲ್ಸ್‌, ಶೆಲ್ಡನ್‌ ಕಾಟ್ರೆಲ್‌, ಆ್ಯಂಡ್ರೆ ಫ್ಲೆಚರ್‌, ಕ್ರಿಸ್‌ ಗೇಲ್‌, ಸುನಿಲ್‌ ನಾರಾಯಣ, ದಿನೇಶ್‌ ರಾಮ್ದಿನ್‌, ರವಿ ರಾಂಪಾಲ್‌, ಆ್ಯಂಡ್ರೆ ರಸೆಲ್‌, ಮಾರ್ಲೊನ್‌ ಸ್ಯಾಮುಯೆಲ್ಸ್‌, ಕ್ರಿಷ್ಮರ್‌ ಸ್ಯಾಂಟೊಕಿ, ಲೆಂಡ್ಲ್‌ ಸಿಮನ್ಸ್‌, ಡ್ವೇನ್‌ ಸ್ಮಿತ್‌
ಪಂದ್ಯದ ಆರಂಭ: ರಾತ್ರಿ 7.00ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT