ADVERTISEMENT

ವಿಂಡೀಸ್‌ಗೆ ಭಾರಿ ಗೆಲುವು

ಕ್ರಿಕೆಟ್‌: ಎಡ್ವರ್ಡ್ಸ್, ಬ್ರಾವೊ ಶತಕ; ಸರಣಿ ಸಮಬಲ

​ಪ್ರಜಾವಾಣಿ ವಾರ್ತೆ
Published 8 ಜನವರಿ 2014, 19:30 IST
Last Updated 8 ಜನವರಿ 2014, 19:30 IST
ನ್ಯೂಜಿಲೆಂಡ್‌ ವಿರುದ್ಧದ ಪಂದ್ಯದಲ್ಲಿ ಶತಕ ಗಳಿಸಿದ ವಿಂಡೀಸ್‌ ತಂಡದ ಡರೆನ್‌ ಬ್ರಾವೊ ಬ್ಯಾಟ್‌ಗೆ ಮುತ್ತಿಕ್ಕಿ ಸಂಭ್ರಮಿಸಿದರು
ನ್ಯೂಜಿಲೆಂಡ್‌ ವಿರುದ್ಧದ ಪಂದ್ಯದಲ್ಲಿ ಶತಕ ಗಳಿಸಿದ ವಿಂಡೀಸ್‌ ತಂಡದ ಡರೆನ್‌ ಬ್ರಾವೊ ಬ್ಯಾಟ್‌ಗೆ ಮುತ್ತಿಕ್ಕಿ ಸಂಭ್ರಮಿಸಿದರು   

ಹ್ಯಾಮಿಲ್ಟನ್‌ (ಎಎಫ್‌ಪಿ): ಕರ್ಕ್‌ ಎಡ್ವರ್ಡ್ಸ್‌ (ಔಟಾಗದೆ 123) ಹಾಗೂ ಡ್ವೇನ್‌ ಬ್ರಾವೊ (106) ಅವರ ಶತಕಗಳ ನೆರವಿನಿಂದ ವೆಸ್ಟ್‌ಇಂಡೀಸ್‌ ತಂಡದವರು ಬುಧವಾರ ಇಲ್ಲಿ ನಡೆದ ಏಕದಿನ ಕ್ರಿಕೆಟ್‌ ಸರಣಿಯ ಐದನೇ ಹಾಗೂ ಕೊನೆಯ ಪಂದ್ಯದಲ್ಲಿ ನ್ಯೂಜಿಲೆಂಡ್‌ ಎದುರು 203 ರನ್‌ಗಳ ಭಾರಿ ಗೆಲುವು ಸಾಧಿಸಿದರು. ಇದರೊಂದಿಗೆ ಸರಣಿ 2–2 ಸಮಬಲವಾಯಿತು.

ಸೆಡಾನ್‌ ಪಾರ್ಕ್‌ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿಮೊದಲು ಬ್ಯಾಟ್‌ ಮಾಡಿದ ಪ್ರವಾಸಿ ವಿಂಡೀಸ್‌ 50 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 363 ರನ್‌ ಗಳಿಸಿತು. ಈ ಕಠಿಣ ಸವಾಲಿನ ಎದುರು ಕಿವೀಸ್‌ ಬಳಗ 29.5 ಓವರ್‌ಗಳಲ್ಲಿ 160 ರನ್‌ಗಳಿಗೆ ಎಲ್ಲಾ ವಿಕೆಟ್‌ ಕಳೆದುಕೊಂಡಿತು.

ಟಾಸ್‌ ಸೋತರೂ ಮೊದಲ ಬ್ಯಾಟ್‌ ಮಾಡಲು ಆಹ್ವಾನ ಪಡೆದ ಕೆರಿಬಿಯನ್‌ ಬಳಗಕ್ಕೆ ಉತ್ತಮ ಅಡಿಪಾಯ ಲಭಿಸಿತು. ಕೀರನ್‌ ಪೊವೆಲ್‌ ಹಾಗೂ ಜಾನ್ಸನ್‌ ಚಾರ್ಲ್ಸ್‌ ಮೊದಲ ವಿಕೆಟ್‌ಗೆ 95 ರನ್‌ ಸೇರಿಸಿದರು. ಬಿರುಸಿನ ಆಟವಾಡಿದ ಪೊವೆಲ್‌ 44 ಎಸೆತಗಳಲ್ಲಿ 73 ರನ್‌ ಗಳಿಸಿದರು. ಆದರೆ ನಾಲ್ಕನೇ ವಿಕೆಟ್‌ ಜೊತೆಯಾಟ ಪಂದ್ಯಕ್ಕೆ ಹೊಸ ತಿರುವು ನೀಡಿತು. ಎಡ್ವರ್ಡ್ಸ್ ಹಾಗೂ ಬ್ರಾವೊ 211 ರನ್‌ ಸೇರಿಸಿದರು.

108 ಎಸೆತಗಳನ್ನು ಎದುರಿಸಿದ ಎಡ್ವರ್ಡ್ಸ್‌ 12 ಬೌಂಡರಿ ಹಾಗೂ 4 ಸಿಕ್ಸರ್‌ ಗಳಿಸಿದರು. ಇದು ಅವರ ಚೊಚ್ಚಲ ಶತಕ. ಅವರಿಗೆ ಉತ್ತಮ ಬೆಂಬಲ ನೀಡಿದ ನಾಯಕ ಬ್ರಾವೊ 81 ಎಸೆತಗಳಲ್ಲಿ 12 ಬೌಂಡರಿ ಹಾಗೂ 3 ಸಿಕ್ಸರ್‌ ಎತ್ತಿದರು.

ಈ ಸವಾಲಿನ ಗುರಿ ಎದುರು ಆತಿಥೇಯ ನ್ಯೂಜಿಲೆಂಡ್‌ ಆರಂಭದಿಂದಲೇ ತಡವರಿಸಿತು. ಈ ತಂಡದವರಿಂದ ಅರ್ಧ ಶತಕ ಕೂಡ ಮೂಡಿಬರಲಿಲ್ಲ. ಜೇಸನ್‌ ಹೋಲ್ಡರ್‌ (35ಕ್ಕೆ2), ನಿಕಿತಾ ಮಿಲ್ಲರ್‌ (45ಕ್ಕೆ4) ಹಾಗೂ ಆ್ಯಂಡ್ರೆ ರಸೆಲ್‌ (31ಕ್ಕೆ2) ಪ್ರಭಾವಿ ಬೌಲಿಂಗ್‌ ದಾಳಿ ಸಂಘಟಿಸಿದರು.

ಪ್ರೇಕ್ಷಕನಿಗೆ 50.6 ಲಕ್ಷ: ಈ ಪಂದ್ಯ ವೀಕ್ಷಿಸಲು ಕ್ರೀಡಾಂಗಣಕ್ಕೆ ಬಂದಿದ್ದ ಪ್ರೇಕ್ಷಕನೊಬ್ಬನಿಗೆ ₨ 50.6 ಲಕ್ಷ ಬಹುಮಾನ ಲಭಿಸಿತು. ವಿಂಡೀಸ್‌ನ ಆರಂಭಿಕ ಬ್ಯಾಟ್ಸ್‌ಮನ್‌ ಪೊವೆಲ್‌ ಎತ್ತಿದ ಸಿಕ್ಸರ್‌ ನೇರವಾಗಿ ಈ ಪ್ರೇಕ್ಷಕನ ಕೈಸೇರಿತು. ಒಂದೇ ಕೈಯಲ್ಲಿ ಆತ ಕ್ಯಾಚ್‌ ಪಡೆದಿದ್ದು ವಿಶೇಷ. ಅದಕ್ಕಾಗಿ ಬಿಯರ್‌ ಕಂಪೆನಿಯೊಂದು ಈ ಬಹುಮಾನ ನೀಡಿದೆ.

ಸಂಕ್ಷಿಪ್ತ ಸ್ಕೋರ್‌: ವೆಸ್ಟ್‌ಇಂಡೀಸ್‌: 50 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 363 (ಕೀರನ್‌ ಪೊವೆಲ್‌ 73, ಜಾನ್ಸನ್‌ ಚಾರ್ಲ್ಸ್‌ 31, ಕರ್ಕ್‌ ಎಡ್ವರ್ಡ್ಸ್‌ ಔಟಾಗದೆ 123, ಡ್ವೇನ್‌ ಬ್ರಾವೊ 106; ಕೇನ್‌ ವಿಲಿಯಮ್ಸನ್‌ 30ಕ್ಕೆ1); ನ್ಯೂಜಿಲೆಂಡ್‌: 29.5 ಓವರ್‌ಗಳಲ್ಲಿ 160 (ಕೋರಿ ಜೆ.ಆ್ಯಂಡರ್ಸನ್‌ 29, ಕೀತ್‌ ಮಿಲ್ಸ್‌ 26; ಜೇಸನ್‌ ಹೋಲ್ಡರ್‌ 35ಕ್ಕೆ2, ನಿಕಿತಾ ಮಿಲ್ಲರ್‌ 45ಕ್ಕೆ4, ಆ್ಯಂಡ್ರೆ ರಸೆಲ್‌ 31ಕ್ಕೆ2). ಫಲಿತಾಂಶ: ವೆಸ್ಟ್‌ಇಂಡೀಸ್‌ಗೆ 203 ರನ್‌ಗಳ ಗೆಲುವು. ಸರಣಿ 2–2ರಲ್ಲಿ ಸಮಬಲ. ಪಂದ್ಯ ಶ್ರೇಷ್ಠ: ಡರೆನ್‌ ಬ್ರಾವೊ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.