ADVERTISEMENT

ವಿಜಯ್‌ ಬದಲು ಧವನ್‌ಗೆ ಸ್ಥಾನ

ಶ್ರೀಲಂಕಾ ವಿರುದ್ಧದ ಟೆಸ್ಟ್‌ ಸರಣಿಗೆ ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡದಲ್ಲಿ ಬದಲಾವಣೆ

ಪಿಟಿಐ
Published 17 ಜುಲೈ 2017, 20:21 IST
Last Updated 17 ಜುಲೈ 2017, 20:21 IST
ಮುರಳಿ ವಿಜಯ್‌, ಶಿಖರ್ ಧವನ್‌
ಮುರಳಿ ವಿಜಯ್‌, ಶಿಖರ್ ಧವನ್‌   

ನವದೆಹಲಿ: ಗಾಯದಿಂದ ಚೇತರಿಸಿಕೊಳ್ಳದ ಆರಂಭಿಕ ಆಟಗಾರ ಮುರಳಿ ವಿಜಯ್‌ ಅವರು ಮುಂಬರುವ ಶ್ರೀಲಂಕಾ ವಿರುದ್ಧದ ಟೆಸ್ಟ್‌ ಸರಣಿಗೆ ಅಲಭ್ಯರಾಗಿದ್ದಾರೆ. ಅವರ ಬದಲಿಗೆ ಶಿಖರ್‌ ಧವನ್‌ ಅವರನ್ನು 16 ಸದಸ್ಯರ ತಂಡಕ್ಕೆ ಆಯ್ಕೆ ಮಾಡಲಾಗಿದೆ.

‘ಮುರಳಿ ವಿಜಯ್‌ ಅವರು ಮಣಿ ಕಟ್ಟಿಗೆ ಆಗಿದ್ದ ಗಾಯದಿಂದ ಗುಣಮುಖರಾಗಿಲ್ಲ. ಹೀಗಾಗಿ ಅವರ ಬದಲಿಗೆ ಶಿಖರ್‌ ಧವನ್‌ ಅವರನ್ನು ಶ್ರೀಲಂಕಾ ವಿರುದ್ಧದ ಟೆಸ್ಟ್‌ ಸರಣಿಗೆ ಭಾರತ ತಂಡಕ್ಕೆ ಆಯ್ಕೆ ಮಾಡಲಾಗಿದೆ’ ಎಂದು ಬಿಸಿಸಿಐ ಕಾರ್ಯದರ್ಶಿ ಅಮಿತಾಭ್‌ ಚೌಧರಿ ತಿಳಿಸಿದ್ದಾರೆ.

‘ಆಸ್ಟ್ರೇಲಿಯಾ ಪ್ರವಾಸದ ವೇಳೆ ವಿಜಯ್‌ ಅವರ ಬಲ ಮಣಿಕಟ್ಟಿಗೆ ಬಲವಾದ ಪೆಟ್ಟು ಬಿದ್ದಿತ್ತು. ಅಭ್ಯಾಸ ನಡೆಸುವ ವೇಳೆ ಮತ್ತೆ ನೋವು ಕಾಣಿಸಿಕೊಂಡಿದೆ ಎಂದು ಮುರಳಿ ತಿಳಿಸಿದ್ದಾರೆ. ಬಿಸಿಸಿಐ ವೈದ್ಯಕೀಯ ಸಿಬ್ಬಂದಿಗಳ ತಂಡ ಕೂಡ ವಿಜಯ್‌ ಇನ್ನಷ್ಟು ಸಮಯ ವಿಶ್ರಾಂತಿ ಪಡೆಯಬೇಕು ಎಂದು ಸಲಹೆ ನೀಡಿದೆ. ಹೀಗಾಗಿ ಅವರನ್ನು ತಂಡದಿಂದ ಕೈಬಿಡಲಾಗಿದೆ’ ಎಂದು ಅಮಿತಾಭ್‌ ನುಡಿದಿದ್ದಾರೆ.

ADVERTISEMENT

ಎಡಗೈ ಬ್ಯಾಟ್ಸ್‌ಮನ್‌ ಧವನ್‌ ಅವರು 23 ಟೆಸ್ಟ್‌ ಪಂದ್ಯಗಳನ್ನು ಆಡಿದ್ದು 38.52ರ ಸರಾಸರಿಯಲ್ಲಿ 1,464ರನ್‌ ಗಳಿಸಿದ್ದಾರೆ. ಇದರಲ್ಲಿ ನಾಲ್ಕು ಶತಕಗಳು ಸೇರಿವೆ. ದೆಹಲಿಯ ಧವನ್‌ ಅವರು 2016ರಲ್ಲಿ ನ್ಯೂಜಿಲೆಂಡ್‌ ವಿರುದ್ಧ ನಡೆದಿದ್ದ ಸರಣಿಯ ಬಳಿಕ ಟೆಸ್ಟ್‌ ಆಡಿರಲಿಲ್ಲ.

ಲಂಕಾ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್‌ ಸರಣಿ ಜುಲೈ 26ರಿಂದ ಶುರುವಾಗಲಿದೆ. ಇದಾದ ನಂತರ ವಿರಾಟ್‌ ಕೊಹ್ಲಿ ಪಡೆ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಆಗಸ್ಟ್‌ 20ರಿಂದ ಈ ಸರಣಿ ಆರಂಭ ವಾಗಲಿದೆ. ಸೆಪ್ಟೆಂಬರ್‌ 6 ರಂದು ಭಾರತ ಮತ್ತು ಲಂಕಾ ನಡುವಣ ಏಕೈಕ ಟಿ–20 ಪಂದ್ಯ ನಿಗದಿಯಾಗಿದೆ.

ತಂಡ ಇಂತಿದೆ: ವಿರಾಟ್‌ ಕೊಹ್ಲಿ (ನಾಯಕ), ಶಿಖರ್‌ ಧವನ್‌, ಕೆ.ಎಲ್‌. ರಾಹುಲ್‌, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ (ಉಪ ನಾಯಕ), ರೋಹಿತ್‌ ಶರ್ಮಾ, ಆರ್‌. ಅಶ್ವಿನ್‌, ರವೀಂದ್ರ ಜಡೇಜ, ವೃದ್ಧಿಮಾನ್‌ ಸಹಾ(ವಿಕೆಟ್‌ ಕೀಪರ್‌), ಇಶಾಂತ್‌ ಶರ್ಮಾ, ಉಮೇಶ್‌ ಯಾದವ್‌, ಹಾರ್ದಿಕ್‌ ಪಾಂಡ್ಯ, ಭುವನೇಶ್ವರ ಕುಮಾರ್‌, ಮೊಹಮ್ಮದ್‌ ಶಮಿ, ಕುಲದೀಪ್‌ ಯಾದವ್‌ ಮತ್ತು ಅಭಿನವ್‌ ಮುಕುಂದ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.