ADVERTISEMENT

ವಿಜೇಂದರ್ ಆರೋಪ ಮುಕ್ತ

ಬಾಕ್ಸಿಂಗ್: ಮದ್ದು ಸೇವನೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2013, 19:59 IST
Last Updated 16 ಏಪ್ರಿಲ್ 2013, 19:59 IST
ವಿಜೇಂದರ್ ಆರೋಪ ಮುಕ್ತ
ವಿಜೇಂದರ್ ಆರೋಪ ಮುಕ್ತ   

ನವದೆಹಲಿ (ಪಿಟಿಐ): ಮದ್ದು ಸೇವನೆ ಪ್ರಕರಣದಲ್ಲಿ ಬಾಕ್ಸರ್ ವಿಜೇಂದರ್ ಸಿಂಗ್ ಅವರನ್ನು ರಾಷ್ಟ್ರೀಯ ಉದ್ದೀಪನಾ ಮದ್ದು ತಡೆ ಘಟಕ (ನಾಡಾ) ಆರೋಪ ಮುಕ್ತಗೊಳಿಸಿದೆ. ಆದರೆ, ಈ ಪರೀಕ್ಷೆಗಳು ಹೆರಾಯಿನ್ ಸೇವನೆಗೆ ಕುರಿತಂತೆ ಮಾಡಿದ್ದಲ್ಲ ಎನ್ನಲಾಗಿದೆ.

ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ವೃದ್ಧಿಸಿಕೊಳ್ಳಲು ಮದ್ದು ಸೇವನೆ ಮಾಡಿದ ಆರೋಪದಡಿ ವಿಜೇಂದರ್ ಸಿಂಗ್ ಅವರ ರಕ್ತ ಮತ್ತು ಮೂತ್ರದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಆದರೆ, ವಿಜೇಂದರ್ ಮದ್ದು ಸೇವಿಸಿದ್ದು ಪರೀಕ್ಷೆಯಲ್ಲಿ ಕಂಡುಬಂದಿಲ್ಲ ಎಂದು ಮಂಗಳವಾರ ಕೇಂದ್ರ ಕ್ರೀಡಾ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ. ಇದೇ ರೀತಿ ಆರೋಪಕ್ಕೆ ಗುರಿಯಾಗಿದ್ದ ರಾಮ್ ಸಿಂಗ್ ಸೇರಿ ಇತರ ನಾಲ್ವರು ಬಾಕ್ಸರ್‌ಗಳ ವಿರುದ್ಧದ ಆರೋಪವೂ ಸಾಬೀತಾಗಿಲ್ಲ ಎಂು ಕ್ರೀಡಾ ಸಚಿವಾಲಯ ತಿಳಿಸಿದೆ.

`ವಿಜೇಂದರ್ ಸಿಂಗ್ ಹಾಗೂ ಇತರ ನಾಲ್ವರು ಬಾಕ್ಸರ್‌ಗಳ ರಕ್ತ ಮತ್ತು ಮೂತ್ರದ ಮಾದರಿಯನ್ನು ಪರೀಕ್ಷೆ ಮಾಡಲಾಗಿದೆ. ಆದರೆ, ಅವರು ಮದ್ದು ಸೇವಿಸಿದ್ದು ಪರೀಕ್ಷೆಯಲ್ಲಿ ಕಂಡುಬಂದಿಲ್ಲ ಎಂದು ತಿಳಿಸಲು ಕ್ರೀಡಾ ಸಚಿವಾಲಯಕ್ಕೆ ಸಂತಸವಾಗುತ್ತದೆ' ಎಂದು ಪ್ರಕಟಣೆ ಹೇಳಿದೆ. ಕಳೆದ ತಿಂಗಳು ತಮ್ಮ ವಿರುದ್ಧ ಆರೋಪ ಕೇಳಿಬಂದಾಗ ಆರಂಭದಲ್ಲಿ ಪರೀಕ್ಷೆಗೆ ಒಳಪಡಲು ವಿಜೇಂದರ್ ಸಿಂಗ್ ನಿರಾಕರಿಸಿದ್ದರು. ಕೊನೆಗೆ ಏಪ್ರಿಲ್ ಮೂರರಂದು ಎನ್‌ಎಡಿಎ ಅಧಿಕಾರಿಗಳು ವಿಜೇಂದರ್ ಸಿಂಗ್ ಅವರನ್ನು ಪರೀಕ್ಷೆಗೆ ಒಳಪಡಿಸುವಲ್ಲಿ ಯಶಸ್ವಿಯಾಗಿದ್ದರು.

ಘಟನೆ ಹಿನ್ನೆಲೆ: ಚಂಡೀಗಡ ಸಮೀಪದ ಜೀರಕ್‌ಪುರದ ಫ್ಲ್ಯಾಟ್ ಒಂದರ ಮೇಲೆ ದಾಳಿ ನಡೆಸಿದ್ದ ಪಂಜಾಬ್ ಪೊಲೀಸರು 26 ಕೆ.ಜಿ ಹೆರಾಯಿನ್ ವಶಪಡಿಸಿಕೊಂಡಿದ್ದರು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಮೌಲ್ಯ 130 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ದಾಳಿ ನಡೆದ ಫ್ಲ್ಯಾಟ್‌ನ ಎದುರು ಬಾಕ್ಸರ್ ವಿಜೇಂದರ್ ಅವರ ಪತ್ನಿಯ ಕಾರು ನಿಂತಿರುವುದು ಕಂಡುಬಂದಿತ್ತು. ಘಟನೆ ಸಂಬಂಧ ಪೊಲೀಸರು ಮಾರ್ಚ್ ಮೂರರಂದು ಅನಿವಾಸಿ ಭಾರತೀಯ ಅನೂಪ್‌ಸಿಂಗ್ ಕಹ್ಲೋನ್        ಎಂಬಾತನನ್ನು ಬಂಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.