ADVERTISEMENT

ವಿರಾಟ್ ಆಟಕ್ಕೆ ಹೊಸ ರೂಪ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2011, 18:30 IST
Last Updated 19 ಫೆಬ್ರುವರಿ 2011, 18:30 IST
ವಿರಾಟ್ ಆಟಕ್ಕೆ ಹೊಸ ರೂಪ
ವಿರಾಟ್ ಆಟಕ್ಕೆ ಹೊಸ ರೂಪ   

ಢಾಕಾ: ‘ಕ್ರಿಕೆಟ್‌ನಲ್ಲಿ ಸೊಕ್ಕು ಮಾಡಿದರೆ ಆಟವೇ ಬುದ್ಧಿ ಕಲಿಸುತ್ತದೆ’ ಎಂಬ ಮಾತಿದೆ.ಇಂದಿನ ಕ್ರಿಕೆಟ್‌ನಲ್ಲಿ ಹಣ ಮತ್ತು ಖ್ಯಾತಿ ಬೇಗ ಯುವ ಆಟಗಾರರ ತಲೆ ತಿರುಗಿಸುತ್ತದೆ.ಅದರಿಂದ ಹೊರಬಂದಾಗ ಯಶಸ್ಸು ತಾನೇತಾನಾಗಿ ಬರುತ್ತದೆ ಎಂಬುದೂ ಆಟಗಾರರಿಗೆ ಗೊತ್ತಿದೆ.22 ವರ್ಷ ವಯಸ್ಸಿನ ವಿರಾಟ್ ಕೊಹ್ಲಿ ಬಹಳ ಬೇಗ ಅದನ್ನು ಅರಿತಿದ್ದರಿಂದಲೇ ಪಂದ್ಯದಿಂದ ಪಂದ್ಯಕ್ಕೆ ಉತ್ತಮಗೊಳ್ಳುತ್ತಿದ್ದಾರೆ.

ಮೊದಲು ಅವರ ವರ್ತನೆಯಲ್ಲಿ ಒರಟುತನ ಇತ್ತು.ಈಗ ಮೊದಲಿನಂತೆ ಸಿಟ್ಟು ಸೆಡವುಗಳನ್ನು ಬಿಟ್ಟಿರುವ ವಿರಾಟ್ ಚೆನ್ನಾಗಿ ಆಡುತ್ತಿದ್ದಾರೆ ಎಂಬುದಕ್ಕೆ ಶನಿವಾರದ ಅವರ ಅಜೇಯ ಶತಕವೇ ನಿದರ್ಶನ.ಒಮ್ಮೆ ಮಾತ್ರ ಅವರು ಮಧ್ಯಮ ವೇಗದ ಬೌಲರ್ ರುಬೇನ್ ಹುಸೇನ್ ವಿರುದ್ಧ ತಾಳ್ಮೆ ಕಳೆದುಕೊಂಡು ಸಿಟ್ಟಿನಿಂದ ಏನೋ ಹೇಳಿದರಾದರೂ ಅದನ್ನು ಮುಂದುವರಿಸಲಿಲ್ಲ.

ವಿರಾಟ್ 46 (ಶನಿವಾರದ ಪಂದ್ಯ ಸೇರಿ) ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ.ಅದರೆ ವಿಶ್ವಕಪ್ ಪಂದ್ಯ ಇದೇ ಮೊದಲು.45 ಪಂದ್ಯಗಳಲ್ಲಿ ನಾಲ್ಕು ಶತಕ ಹಾಗೂ 12 ಅರ್ಧಶತಕಗಳಿದ್ದವು.ಚೊಚ್ಚಲು ವಿಶ್ವಕಪ್ ಪಂದ್ಯದಲ್ಲೇ ಶತಕ ಗಳಿಸಿದ್ದು ಅವರಲ್ಲಿ ಮೂಡಿರುವ ವಿಶ್ವಾಸಕ್ಕೆ ನಿದರ್ಶನ. ಅವರು ಒಟ್ಟು 46 ಪಂದ್ಯಗಳಲ್ಲಿ 1,772 ರನ್ ಗಳಿಸಿದ್ದಾರೆ.

ವಿರಾಟ್‌ಗಿಂತ ಹತ್ತು ವರ್ಷ ದೊಡ್ಡವರಾದ ವೀರೇಂದ್ರ ಸೆಹ್ವಾಗ್ ಅವರನ್ನು  ಕಂಡರೆ ಎಲ್ಲ ಬೌಲರುಗಳಿಗೂ ಹೆದರಿಕೆ.ಆರಂಭದಲ್ಲೇ ಅವರ ಕೈ ಕುದುರಿಬಿಟ್ಟರೆ ರನ್‌ಗಳ ಪ್ರವಾ ಹವೇ ಹರಿಯುತ್ತದೆ.ಶನಿವಾರ ಅವರು ಇನ್ನೂ 14 ರನ್ ಹೊಡೆದಿದ್ದರೆ, ಭಾರತ ತಂಡದ ಕೋಚ್ ಆಗಿರುವ ಗ್ಯಾರಿ ಕರ್ಸ್ಟೆನ್ ಅವರ ಹೆಸರಲ್ಲಿರುವ 188 ರನ್‌ಗಳ ದಾಖಲೆಯನ್ನು ಅಳಿಸಿಹಾಕಬಹುದಿತ್ತು. ಈ ವಿಶ್ವ ಕಪ್ ನೊಂದಿಗೇ ಸ್ವದೇಶಕ್ಕೆ ವಾಪಸ್ಸಾಗಲಿರುವ ಕರ್ಸ್ಟೆನ್ ಅವರಿಗೆ ವೀರೂ ಕೊಡುವ ದೊಡ್ಡ ಉಡುಗೊರೆ ಅದಾಗಬಹುದಿತ್ತು.

ಸೆಹ್ವಾಗ್ ಶನಿವಾರದ ಪಂದ್ಯವೂ ಸೇರಿ 229 ಪಂದ್ಯಗಳಲ್ಲಿ 14 ಶತಕ, 36 ಅರ್ಧಶತಕಗಳಿರುವ 7,555 ರನ್ ಗಳಿಸಿದ್ದಾರೆ.ಆದರೆ 15 ವಿಶ್ವ ಕಪ್ ಪಂದ್ಯಗಳಲ್ಲಿ ಅವರು ಗಳಿಸಿದ್ದು ಎರಡೇ ಶತಕ.ಹಿಂದಿನ 14 ಪಂದ್ಯಗಳಲ್ಲಿ ಅವರು ಬರ್ಮುಡಾ ವಿರುದ್ಧ 2003 ರಲ್ಲಿ ಗಳಿಸಿದ್ದ ಶತಕ (114) ಇದುವರೆಗಿನ ಏಕೈಕ ಶತಕವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.