ADVERTISEMENT

ವಿರಾಟ್, ಎಬಿಡಿ ಜೊತೆ ಆಡಲು ಸಂತಸ: ಬ್ರೆಂಡನ್

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2018, 19:56 IST
Last Updated 11 ಏಪ್ರಿಲ್ 2018, 19:56 IST
ವಿರಾಟ್, ಎಬಿಡಿ ಜೊತೆ ಆಡಲು ಸಂತಸ: ಬ್ರೆಂಡನ್
ವಿರಾಟ್, ಎಬಿಡಿ ಜೊತೆ ಆಡಲು ಸಂತಸ: ಬ್ರೆಂಡನ್   

ಬೆಂಗಳೂರು: ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ಲೀಗ್‌ಗಳಲ್ಲಿ ಆಡು ವು ದರಿಂದ ಲಭಿಸಿರುವ ಅನುಭವ ಅಮೂಲ್ಯವಾದದ್ದು. ಆರ್‌ಸಿಬಿ ತಂಡದಲ್ಲಿ ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್‌ ಜೊತೆಗೆ ಆಡಲು ಖುಷಿಯಾಗುತ್ತದೆ ಎಂದು ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಆಟಗಾರ ಬ್ರೆಂಡನ್ ಮೆಕ್ಲಮ್ ಹೇಳಿದರು.

ಬುಧವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭ್ಯಾಸ ಮಾಡುವ ಮುನ್ನ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಬೆಂಗಳೂರು ನನ್ನ ಅಚ್ಚುಮೆಚ್ಚಿನ ನಗರಿ. ಇಲ್ಲಿ ದಶಕದ ಹಿಂದೆ ಹೊಡೆದಿದ್ದ ಶತಕ ಮನದಲ್ಲಿ ಅಚ್ಚಳಿಯದೇ ಉಳಿದಿದೆ. ಇದೀಗ ಆರ್‌ಸಿಬಿಯಲ್ಲಿ ಆಡುವ ಅವಕಾಶ ಸಿಕ್ಕಿರುವುದು ಸಂತಸ ತಂದಿದೆ’ ಎಂದರು.

ADVERTISEMENT

ಈಚೆಗೆ ಕೋಲ್ಕತ್ತದಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ಆರ್‌ಸಿಬಿ ತಂಡವು ಕೋಲ್ಕತ್ತ ನೈಟ್‌ ರೈಡರ್ಸ್‌ ಎದುರು ಸೋಲನುಭವಿಸಿತ್ತು. ಆ
ಪಂದ್ಯದಲ್ಲಿ ಮೆಕ್ಲಮ್ ಅವರು ಕ್ವಿಂಟನ್ ಡಿ ಕಾಕ್ ಅವರೊಂದಿಗೆ ಇನಿಂಗ್ಸ್‌ ಆರಂಭಿಸಿದ್ದರು. ಅವರು 43 ರನ್‌ ಗಳಿಸಿದ್ದರು.

‘ಇನಿಂಗ್ಸ್‌ ಆರಂಭಿಸಲು ಸಿಕ್ಕಿರುವುದು ದೊಡ್ಡ ಅವಕಾಶವಾಗಿದೆ. ನನ್ನ ನೈಜ ಆಟವನ್ನು ಆಡಲು ಇದು ವೇದಿಕೆಯಾಗಲಿದೆ. ತಂಡಕ್ಕೆ ಉತ್ತಮ ನೀಡುವುದು ಸವಾಲಿನ ಕೆಲಸ. ಉತ್ತಮ ಬೌಲಿಂಗ್‌ ಎದುರಿಸಿ ನಿಲ್ಲಬೇಕು. ಚೆನ್ನಾಗಿ ಆಡಬೇಕು. ಮೂರು ಮತ್ತು ನಾಲ್ಕನೇ ಕ್ರಮಾಂಕದಲ್ಲಿ ಕ್ರಮವಾಗಿ ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್‌ ಅವರು ಇರುವುದರಿಂದ ನನ್ನ ಮೇಲೆ ಒತ್ತಡ ಕಡಿಮೆ ಇದೆ. ಆದ್ದರಿಂದ ನಿರ್ಭೀತಿಯಿಂದ ಆಡಬಹುದು’ ಎಂದರು.

ಬೆಂಗಳೂರಿಗೆ ಬಂದ ಗೇಲ್: ಉದ್ಯಾನನಗರಿಯಲ್ಲಿ ನೂರಾರು ಅಭಿಮಾನಿಗಳನ್ನು ಹೊಂದಿರುವ ಕ್ರಿಸ್‌ ಗೇಲ್  ಮತ್ತೆ ಬೆಂಗಳೂರಿಗೆ ಬಂದಿದ್ದಾರೆ. ಈ ಬಾರಿ ಅವರು ಕಿಂಗ್ಸ್‌ ಇಲೆವನ್ ಪಂಜಾಬ್ ಎದುರು ಆಡಲಿಧ್ದಾರೆ. ಕಳೆದ ವರ್ಷ ಅವರು ಆರ್‌ಸಿಬಿ ಯಲ್ಲಿದ್ದರು.

ಬುಧವಾರ ಸಂಜೆ ಕ್ರೀಡಾಂಗಣದಲ್ಲಿ  ತಮ್ಮನ್ನು ಕೂಗಿದ ಅಭಿಮಾನಿಗಳತ್ತ ನೋಡದೇ ಹಾಗೆ ಹೋದರು. ಆದರೆ ಮೈದಾನದೊಳಗೆ ಭೇಟಿಯಾದ ಆರ್‌ಸಿಬಿಯ ಅಧಿಕಾರಿಯೊಬ್ಬರನ್ನು ತಬ್ಬಿಕೊಂಡರು. ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ  ಮತ್ತು ಎಬಿ ಡಿವಿಲಿಯರ್ಸ್‌ ಅವರು ಅಭ್ಯಾಸ ಮುಗಿಸಿ ನಿರ್ಗಮಿಸಿದ ನಂತರ ಗೇಲ್ ಬಂದರು. ಇದರಿಂದಾಗಿ ಹಳೆಯ ಗೆಳೆಯರು ಮುಖಾ ಮುಖಿಯಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.