ADVERTISEMENT

ವಿರಾಟ್ ಕೊಹ್ಲಿ ಪಡೆಗೆ ಜಯ ಅನಿವಾರ್ಯ

ಕ್ರಿಕೆಟ್: ವಿಶ್ವಾಸದಲ್ಲಿ ವೆಸ್ಟ್ ಇಂಡೀಸ್, ಸಂಕಷ್ಟದಲ್ಲಿ ಭಾರತ

​ಪ್ರಜಾವಾಣಿ ವಾರ್ತೆ
Published 4 ಜುಲೈ 2013, 19:59 IST
Last Updated 4 ಜುಲೈ 2013, 19:59 IST
ಮಹೇಂದ್ರ ಸಿಂಗ್ ದೋನಿ ಅನುಪಸ್ಥಿತಿಯಲ್ಲಿ ಭಾರತ ತಂಡವನ್ನು ಮುನ್ನಡೆಸುತ್ತಿರುವ ವಿರಾಟ್ ಕೊಹ್ಲಿ (ಎಡಬದಿ) ತ್ರಿಕೋನ ಏಕದಿನ ಸರಣಿಯಲ್ಲಿ ಮೊದಲ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.
ಮಹೇಂದ್ರ ಸಿಂಗ್ ದೋನಿ ಅನುಪಸ್ಥಿತಿಯಲ್ಲಿ ಭಾರತ ತಂಡವನ್ನು ಮುನ್ನಡೆಸುತ್ತಿರುವ ವಿರಾಟ್ ಕೊಹ್ಲಿ (ಎಡಬದಿ) ತ್ರಿಕೋನ ಏಕದಿನ ಸರಣಿಯಲ್ಲಿ ಮೊದಲ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.   

ಪೋರ್ಟ್ ಆಫ್ ಸ್ಪೇನ್ (ಪಿಟಿಐ): ಮೊದಲ ಎರಡೂ ಪಂದ್ಯಗಳಲ್ಲಿ ಸೋಲು ಕಂಡು ಟೂರ್ನಿಯಿಂದ ಹೊರಬೀಳುವ ಭೀತಿ ಎದುರಿಸುತ್ತಿರುವ ಭಾರತ ತಂಡ ತ್ರಿಕೋನ ಏಕದಿನ ಕ್ರಿಕೆಟ್ ಸರಣಿಯಲ್ಲಿ ಶುಕ್ರವಾರ ಆತಿಥೇಯ ವೆಸ್ಟ್ ಇಂಡೀಸ್ ತಂಡವನ್ನು ಎದುರಿಸಲಿದ್ದು, ವಿರಾಟ್ ಕೊಹ್ಲಿ ಪಡೆಗೆ ಗೆಲುವು ಅನಿವಾರ್ಯವಾಗಿದೆ.

ಕಳೆದ ತಿಂಗಳು ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಪ್ರಶಸ್ತಿ ಎತ್ತಿ ಹಿಡಿದ ಭಾರತ, ಕೆರಿಬಿಯನ್ ನಾಡಿನ ನೆಲದಲ್ಲಿ ನೀರಸ ಪ್ರದರ್ಶನ ತೋರುತ್ತಿದೆ. ಎರಡೂ ಪಂದ್ಯಗಳಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ತಂಡ ಕ್ರಮವಾಗಿ ವಿಂಡೀಸ್ ಹಾಗೂ ಶ್ರೀಲಂಕಾ ಎದುರು ಸೋಲು ಕಂಡಿತ್ತು. ಇದರ ಜೊತೆಗೆ ಆಟಗಾರರಲ್ಲಿ ಸ್ಫೂರ್ತಿ ತುಂಬಬಲ್ಲ ನಾಯಕ ಮಹೇಂದ್ರ ಸಿಂಗ್ ದೋನಿ ಟೂರ್ನಿಯಿಂದ ಹೊರಗುಳಿದಿರುವುದೂ ತಂಡಕ್ಕೆ ಕೊಂಚ  ಹಿನ್ನಡೆಯಾಗಿದೆ. ಸದ್ಯ ಕೊಹ್ಲಿ ತಂಡವನ್ನು ಮುನ್ನಡೆಸುತ್ತಿದ್ದಾರೆ.

ಆಡಿದ ಎರಡೂ ಪಂದ್ಯಗಳಲ್ಲಿ ಜಯ ಪಡೆದಿರುವ ಆತಿಥೇಯರು ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಇನ್ನೊಂದು ತಂಡ ಶ್ರೀಲಂಕಾ ಕೂಡಾ ಐದು ಪಾಯಿಂಟ್‌ಗಳನ್ನು ಹೊಂದಿದೆ. ಆದರೆ, ಭಾರತ ಇನ್ನೂ ಗೆಲುವಿನ ಖಾತೆ ತೆರೆದಿಲ್ಲ. ಆದ್ದರಿಂದ ಈ ಪಂದ್ಯ `ಮಾಡು ಇಲ್ಲವೇ ಮಡಿ' ಹೋರಾಟ ಎನಿಸಿದೆ.

ಫೈನಲ್ ಪ್ರವೇಶಿಸುವ ಸ್ಪರ್ಧೆಯಲ್ಲಿ ಉಳಿಯಬೇಕಾದರೆ, ಭಾರತ ಈ ಪಂದ್ಯದಲ್ಲಿ ತನ್ನ ಸಾಮರ್ಥ್ಯವನ್ನೆಲ್ಲಾ ಪಣಕ್ಕಿಟ್ಟು ಹೋರಾಡಬೇಕಿದೆ. ಕೊಹ್ಲಿ ಬಳಗ ಜುಲೈ 9ರಂದು ಶ್ರೀಲಂಕಾ ಎದುರು ಪೈಪೋಟಿ ನಡೆಸಲಿದೆ. ಈ ಎರಡೂ ಪಂದ್ಯಗಳಲ್ಲಿ ಗೆಲ್ಲುವ ಜೊತೆಗೆ ಉಳಿದ ತಂಡಗಳ ಫಲಿತಾಂಶದ ಆಧಾರದ ಮೇಲೆ ಭಾರತದ ಫೈನಲ್ ಪ್ರವೇಶದ ಹಾದಿ ನಿರ್ಧಾರವಾಗಲಿದೆ.

ಬಲಗೊಳ್ಳಬೇಕಿದೆ ಆರಂಭಿಕ ಜೋಡಿ: ಭಾರತ ತಂಡ ವಿಂಡೀಸ್ ಎದುರಿನ ಪಂದ್ಯದಲ್ಲಿ 229ರನ್ ಗಳಿಸಿದ್ದರೆ, ಲಂಕಾ ಎದುರು 187  ರನ್‌ಗೆ ಆಲ್‌ಔಟ್ ಆಗಿತ್ತು. ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮ ಮೊದಲ ಪಂದ್ಯದಲ್ಲಿ ಅರ್ಧಶತಕದ ಗಡಿ ದಾಟಿದರೆ, ಲಂಕಾ ಎದುರು ಎರಡಂಕಿಯ ಮೊತ್ತವೂ ಮುಟ್ಟಿರಲಿಲ್ಲ.

ಇನ್ನೊಬ್ಬ ಆಟಗಾರ ಶಿಖರ್ ಧವನ್ ಕೂಡಾ ವಿಫಲರಾಗಿದ್ದಾರೆ. ಆದ್ದರಿಂದ ಆರಂಭಿಕ ಜೋಡಿ ಬಲಗೊಳ್ಳುವುದು ಅನಿವಾರ್ಯ. ಇದರ ಜೊತೆಗೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ತಮ್ಮ ಜವಾಬ್ದಾರಿಗೆ ತಕ್ಕಂತೆ ಆಡಬೇಕಿದೆ. ವಿಂಡೀಸ್ ನೆಲದಲ್ಲಿ ಭಾರತದ ಬೌಲಿಂಗ್ ಪರಿಣಾಮಕಾರಿ ಎನಿಸಿಲ್ಲ. ಲಂಕಾ ಎದುರಿನ ಪಂದ್ಯವೇ ಇದಕ್ಕೆ ಸಾಕ್ಷಿ. ಈ ತಂಡ ತನ್ನ ಹಿಂದಿನ ಪಂದ್ಯದಲ್ಲಿ ಒಂದು ವಿಕೆಟ್ ಮಾತ್ರ ಕಳೆದುಕೊಂಡು 348 ರನ್ ಕಲೆ ಹಾಕಿತ್ತು.

ತವರು ನೆಲದ ಕ್ರೀಡಾಂಗಣದಲ್ಲಿ ಉತ್ತಮ ಪ್ರದರ್ಶನ ತೋರುತ್ತಿರುವ ವಿಂಡೀಸ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮತ್ತಷ್ಟು ಗಟ್ಟಿಯಾಗುವ ಲೆಕ್ಕಾಚಾರದಲ್ಲಿದೆ. ತೊಡೆಸಂಧು ನೋವಿನಿಂದ ಬಳಲಿದ ಕಾರಣ ಹಿಂದಿನ ಪಂದ್ಯದಿಂದ ಹೊರಗಿದ್ದ ನಾಯಕ ಡ್ವೇನ್ ಬ್ರಾವೊ ಮರಳುವ ನಿರೀಕ್ಷೆಯಿದೆ.

ಕ್ರಿಸ್ ಗೇಲ್, ಜೇಸನ್ ಹೋಲ್ಡರ್, ಜಾನ್ಸನ್ ಚಾರ್ಲ್ಸ್ ವಿಂಡೀಸ್‌ಗೆ ಬಲತುಂಬಬಲ್ಲ ಬ್ಯಾಟ್ಸ್‌ಮನ್‌ಗಳು. ಇವರನ್ನು ಕಟ್ಟಿ ಹಾಕುವ ಸವಾಲು ಭಾರತದ ಬೌಲರ್‌ಗಳ ಮೇಲಿದೆ. ಇದರ ಜೊತೆಗೆ ಭಾರತ  ತಂಡದ  ಭವಿಷ್ಯದ ನಾಯಕ ಎನಿಸಿಕೊಳ್ಳುತ್ತಿರುವ ಕೊಹ್ಲಿ ಸಂಕಷ್ಟದಲ್ಲಿರುವ ತಂಡವನ್ನು ಹೇಗೆ ಮೇಲಕ್ಕೇತ್ತುವರು ಎನ್ನುವ ಕುತೂಹಲವೂ ಇದೆ.

ಪಂದ್ಯ ಆರಂಭ: ರಾತ್ರಿ 7ಕ್ಕೆ (ಭಾರತೀಯ ಕಾಲಮಾನ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.