ADVERTISEMENT

ವಿರಾಟ್ ಕೊಹ್ಲಿ ಶತಕ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2011, 19:30 IST
Last Updated 16 ಸೆಪ್ಟೆಂಬರ್ 2011, 19:30 IST

ಕಾರ್ಡಿಫ್: ವಿರಾಟ್ ಕೊಹ್ಲಿ (107) ಸಿಡಿಸಿದ ಸೊಗಸಾದ ಶತಕದ ನೆರವಿನಿಂದ ಭಾರತ ತಂಡ ಐದನೇ ಹಾಗೂ ಅಂತಿಮ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಗೆಲುವಿಗೆ ಸವಾಲಿನ ಗುರಿ ನೀಡಿದೆ.

ಸೋಫಿಯಾ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಶುಕ್ರವಾರ ಮೊದಲು ಬ್ಯಾಟ್ ಮಾಡಿದ ಮಹೇಂದ್ರ ಸಿಂಗ್ ದೋನಿ ಬಳಗ 50 ಓವರ್‌ಗಳಲ್ಲಿ 6 ವಿಕೆಟ್‌ಗೆ 304 ರನ್ ಪೇರಿಸಿತು.

ಅಂತಿಮ ಏಕದಿನ ಪಂದ್ಯವನ್ನಾಡಿದ ರಾಹುಲ್ ದ್ರಾವಿಡ್ (69, 79 ಎಸೆತ, 4 ಬೌಂ)  ಮತ್ತು ನಾಯಕ ಮಹೇಂದ್ರ ಸಿಂಗ್ ದೋನಿ (ಅಜೇಯ 50, 26 ಎಸೆತ, 5 ಬೌಂ, 2 ಸಿಕ್ಸರ್) ಅವರೂ ಭಾರತದ ಉತ್ತಮ ಮೊತ್ತಕ್ಕೆ ಕಾರಣರಾದರು.

ಇಂಗ್ಲೆಂಡ್ ಪ್ರವಾಸದಲ್ಲಿ ಭಾರತ ಇದುವರೆಗೆ ಒಂದೂ ಗೆಲುವು ಪಡೆದಿಲ್ಲ. ಇದೀಗ ಅಂತಿಮ ಪಂದ್ಯದಲ್ಲಿ ಜಯದ ಕನಸು ಕಾಣುತ್ತಿದೆ.

ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಅಲಿಸ್ಟರ್ ಕುಕ್ ಎದುರಾಳಿ ತಂಡವನ್ನು ಬ್ಯಾಟಿಂಗ್‌ಗೆ ಕಳುಹಿಸಿದರು. ಮಳೆಯ ಕಾರಣ ಪಂದ್ಯ ಅಲ್ಪ ತಡವಾಗಿ ಆರಂಭವಾಯಿತು. ಆ ಬಳಿಕ ಭಾರತದ ಬ್ಯಾಟ್ಸ್‌ಮನ್‌ಗಳು ರನ್‌ಗಳ ಮಳೆ ಹರಿಸಿದರು.

ಭಾರತ ತಂಡದ ಸವಾಲಿನ ಮೊತ್ತಕ್ಕೆ ಕಾರಣ ವಿರಾಟ್ ಕೊಹ್ಲಿ. ಎಲ್ಲ ಕ್ರೆಡಿಟ್ ದೆಹಲಿಯ ಈ ಬ್ಯಾಟ್ಸ್‌ಮನ್‌ಗೆ ಸಲ್ಲಬೇಕು. ಏಕದಿನ ಕ್ರಿಕೆಟ್‌ನಲ್ಲಿ ತಮ್ಮ ಆರನೇ ಶತಕ ಗಳಿಸಿದ ಕೊಹ್ಲಿ ಸೊಗಸಾದ ಇನಿಂಗ್ಸ್ ಕಟ್ಟಿದರು. 93 ಎಸೆತಗಳನ್ನು ಎದುರಿಸಿದ ಅವರು 9 ಬೌಂಡರಿ ಹಾಗೂ ಒಂದು ಸಿಕ್ಸರ್ ಗಳಿಸಿದರು.

ಆರಂಭದಲ್ಲಿ ಅಲ್ಪ ಪರದಾಟ ನಡೆಸಿದರೂ ಪರಿಸ್ಥಿತಿಗೆ ಹೊಂದಿಕೊಂಡ ಬಳಿಕ ಇಂಗ್ಲೆಂಡ್ ಬೌಲರ್‌ಗಳ ಮೇಲೆ ದಂಡೆತ್ತಿ ಹೋದರು. ಅವರಿಗೆ ವೃತ್ತಿಜೀವನದ ಕೊನೆಯ ಏಕದಿನ ಪಂದ್ಯವನ್ನಾಡಿದ ದ್ರಾವಿಡ್ ಉತ್ತಮ ಸಾಥ್ ನೀಡಿದರು. ಇವರಿಬ್ಬರು ಮೂರನೇ ವಿಕೆಟ್‌ಗೆ 170 ರನ್ ಸೇರಿಸಿದರು.

ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಪಾರ್ಥಿವ್ ಪಟೇಲ್ (19) ಮತ್ತು ಆಜಿಂಕ್ಯ ರಹಾನೆ (26) 57 ರನ್ ಗಳಿಸುವಷ್ಟರಲ್ಲಿ ಪೆವಿಲಿಯನ್‌ಗೆ ಮರಳಿದರು. ಉತ್ತಮ ಆರಂಭ ಪಡೆದರೂ ಇವರು ಅಧಿಕ ಹೊತ್ತು ಕ್ರೀಸ್ ಬಳಿ ನಿಲ್ಲಲಿಲ್ಲ. ಈ ಹಂತದಲ್ಲಿ ಜೊತೆಗೂಡಿದ ಕೊಹ್ಲಿ ಮತ್ತು ದ್ರಾವಿಡ್ ತಂಡಕ್ಕೆ ಆಸರೆಯಾದರು.

ದ್ರಾವಿಡ್ ತಮ್ಮ ಕೊನೆಯ ಏಕದಿನ ಇನಿಂಗ್ಸ್‌ನಲ್ಲೂ ಇಂಗ್ಲೆಂಡ್ ಬೌಲರ್‌ಗಳನ್ನು ಕಾಡಿದರು. ಕೊಹ್ಲಿ ಶತಕ ಪೂರೈಸಿದ ಬಳಿಕ ಹೆಚ್ಚುಹೊತ್ತು ನಿಲ್ಲಲಿಲ್ಲ. ಅವರು ಔಟಾದ ರೀತಿಯೂ ವಿಭಿನ್ನವಾಗಿತ್ತು. ಗ್ರೇಮ್ ಸ್ವಾನ್ ಎಸೆತವನ್ನು ಎದುರಿಸುವ ಪ್ರಯತ್ನದಲ್ಲಿ ಅವರ ಕಾಲು ವಿಕೆಟ್‌ಗೆ ತಾಗಿ ಬೇಲ್ಸ್ ಬಿದ್ದಿತು. `ಹಿಟ್‌ವಿಕೆಟ್~ ರೂಪದಲ್ಲಿ ಔಟಾದರು.

ಕೊನೆಯಲ್ಲಿ ನಾಯಕ ಮಹೇಂದ್ರ ಸಿಂಗ್ ದೋನಿ ಅಬ್ಬರದ ಆಟವಾಡಿದರು. ಇದರಿಂದ ತಂಡದ ಮೊತ್ತ 300 ರನ್‌ಗಳ ಗಡಿ ದಾಟಿತು. ಬ್ರೆಸ್ನನ್ ಎಸೆದ 47ನೇ ಓವರ್‌ನಲ್ಲಿ ದೋನಿ 17 ರನ್ ಕಲೆಹಾಕಿದರು. 34 ರನ್‌ಗಳಿಗೆ ಮೂರು ವಿಕೆಟ್ ಪಡೆದ ಗ್ರೇಮ್ ಸ್ವಾನ್ ಮಾತ್ರ ಇಂಗ್ಲೆಂಡ್ ಪರ ಪ್ರಭಾವಿ ಎನಿಸಿದರು.

ಐದು ಪಂದ್ಯಗಳ ಸರಣಿಯನ್ನು ಈಗಾಗಲೇ ಇಂಗ್ಲೆಂಡ್ 2-0 ರಲ್ಲಿ ಗೆದ್ದುಕೊಂಡಿದೆ. ಮೊದಲ ಪಂದ್ಯ ಮಳೆಯಿಂದ ರದ್ದುಗೊಂಡಿದ್ದರೆ, ನಾಲ್ಕನೇ ಪಂದ್ಯ `ಟೈ~ನಲ್ಲಿ ಅಂತ್ಯಗೊಂಡಿತ್ತು.

ಸ್ಕೋರ್ ವಿವರ:
ಭಾರತ:
50 ಓವರ್‌ಗಳಲ್ಲಿ 6 ವಿಕೆಟ್‌ಗೆ 304
ಪಾರ್ಥಿವ್ ಪಟೇಲ್ ಸಿ ಬ್ರೆಸ್ನನ್ ಬಿ ಗ್ರೇಮ್ ಸ್ವಾನ್  19
ಆಜಿಂಕ್ಯ ರಹಾನೆ ಸಿ ಫಿನ್ ಬಿ ಜೇಡ್ ಡೆರ್ನ್‌ಬಾಕ್  26
ರಾಹುಲ್ ದ್ರಾವಿಡ್ ಬಿ ಗ್ರೇಮ್ ಸ್ವಾನ್  69
ವಿರಾಟ್ ಕೊಹ್ಲಿ ಹಿಟ್ ವಿಕೆಟ್ ಬಿ ಗ್ರೇಮ್ ಸ್ವಾನ್  107
ಸುರೇಶ್ ರೈನಾ ಸಿ ಬ್ರೆಸ್ನನ್ ಬಿ ಸ್ಟೀವನ್ ಫಿನ್  15
ಮಹೇಂದ್ರ ಸಿಂಗ್ ದೋನಿ ಔಟಾಗದೆ  50
ರವೀಂದ್ರ ಜಡೇಜ ಸಿ ಬೋಪಾರ ಬಿ ಜೇಡ್ ಡೆರ್ನ್‌ಬಾಕ್ 00
ಆರ್. ಅಶ್ವಿನ್ ಔಟಾಗದೆ  00
ಇತರೆ: (ಬೈ-1, ಲೆಗ್‌ಬೈ-11, ವೈಡ್-6) 18
ವಿಕೆಟ್ ಪತನ: 1-52 (ರಹಾನೆ; 12.1), 2-57 (ಪಾರ್ಥಿವ್; 15.2), 3-227 (ದ್ರಾವಿಡ್; 41.6), 4-236 (ಕೊಹ್ಲಿ; 43.3), 5-284 (ರೈನಾ; 48.5), 6-288 (ಜಡೇಜ; 49.1)
ಬೌಲಿಂಗ್: ಟಿಮ್ ಬ್ರೆಸ್ನನ್ 9-0-62-0, ಸ್ಟೀವನ್ ಫಿನ್ 10-1-44-1, ಜೇಡ್ ಡೆರ್ನ್‌ಬಾಕ್ 10-0-73-2, ಗ್ರೇಮ್ ಸ್ವಾನ್ 9-0-34-3, ಸಮಿತ್ ಪಟೇಲ್ 8-0-55-0, ರವಿ ಬೋಪಾರ 4-0-24-0

ADVERTISEMENT

 ಇಂಗ್ಲೆಂಡ್‌ಗೆ 270 ರನ್‌ಗಳ ಗುರಿ
ಪಂದ್ಯಕ್ಕೆ ಮಳೆ ಅಡ್ಡಿಯಾದ ಕಾರಣ ಇಂಗ್ಲೆಂಡ್‌ಗೆ ಪರಿಷ್ಕೃತ ಗುರಿ ನೀಡಲಾಗಿದ್ದು, ಗೆಲುವಿಗಾಗಿ 40 ಓವರ್‌ಗಳಲ್ಲಿ 270 ರನ್ ಗಳಿಸಬೇಕಾಗಿದೆ.

ಇಂಗ್ಲೆಂಡ್ 9.1 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 53 ರನ್ ಗಳಿಸಿದ್ದಾಗ ಮತ್ತೆ ಮಳೆ ಬಂತು. ಪತ್ರಿಕೆ ಮುದ್ರಣಕ್ಕೆ ಹೋಗುವ ವೇಳೆ ಪಂದ್ಯ ಇನ್ನೂ ಆರಂಭವಾಗಿರಲಿಲ್ಲ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.