ADVERTISEMENT

ವಿಶ್ವ ಅಥ್ಲೆಟಿಕ್ಸ್‌ಗೆ ಅಶ್ವಿನಿ ತೆರಳುವುದು ಖಚಿತ

​ಪ್ರಜಾವಾಣಿ ವಾರ್ತೆ
Published 19 ಜುಲೈ 2013, 19:59 IST
Last Updated 19 ಜುಲೈ 2013, 19:59 IST

ನವದೆಹಲಿ (ಪಿಟಿಐ): ಕರ್ನಾಟಕದ ಅಶ್ವಿನಿ ಅಕ್ಕುಂಜಿ ಮುಂದಿನ ತಿಂಗಳು ಮಾಸ್ಕೊದಲ್ಲಿ ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್
ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲಿರುವ ಭಾರತ ತಂಡದಲ್ಲಿ ಸ್ಥಾನ ಪಡೆಯುವುದು ಬಹುತೇಕ ಖಚಿತವಾದಂತಾಗಿದೆ.

ಶುಕ್ರವಾರ ಸಂಜೆ ಪಟಿಯಾಲದಲ್ಲಿ ನಡೆದ 4ಗಿ400 ಮೀಟರ್ಸ್ ರಿಲೆ ಓಟದ ಟ್ರಯಲ್ಸ್‌ನಲ್ಲಿ ಪಾಲ್ಗೊಂಡಿದ್ದ ಅಶ್ವಿನಿ ಅವರು 54.70 ಸೆಕೆಂಡುಗಳಲ್ಲಿ ಓಡಿದರು. ಅನಿಲ್ದಾ ಥಾಮಸ್ ಕೂಡಾ ಅಷ್ಟೇ ಸಮಯದಲ್ಲಿ ಗುರಿ ಮುಟ್ಟಿದರು. ಆದರೆ ಐದು ಓಟಗಾರ್ತಿಯರು ಪಾಲ್ಗೊಂಡಿದ್ದ ಈ ಟ್ರಯಲ್ಸ್‌ನಲ್ಲಿ ನಿರ್ಮಲಾ 54.60ಸೆಕೆಂಡುಗಳಲ್ಲಿ ಗುರಿ ತಲುಪಿದರು. ನಿರ್ಮಲಾ ಅವರು ಇದೇ ತಿಂಗಳ ಮೊದಲ ವಾರ ಪುಣೆಯಲ್ಲಿ ನಡೆದ ಏಷ್ಯಾ ಅಥ್ಲೆಟಿಕ್ಸ್‌ನ 4ಗಿ400 ಮೀಟರ್ಸ್ ರಿಲೆ ಓಟದಲ್ಲಿ ಚಿನ್ನ ಗೆದ್ದ ಭಾರತ ತಂಡದಲ್ಲಿದ್ದರು. ಸರಿತಾ (55.80ಸೆ.) ನಾಲ್ಕನೇ ಸ್ಥಾನ ಪಡೆದರೆ, ಪ್ರಿಯಾಂಕಾ (56.20ಸೆ.) ಐದನೇ ಸ್ಥಾನಕ್ಕಿಳಿದರು.

ಭಾರತ ಅಥ್ಲೆಟಿಕ್ಸ್ ಫೆಡರೇಷನ್‌ನ ಅಧಿಕಾರಿಗಳು, ಕೋಚ್ ಎನ್.ರಮೇಶ್ ಮುಂತಾದವರ ಸಮ್ಮುಖದಲ್ಲಿ ಈ ಆಯ್ಕೆ ಟ್ರಯಲ್ಸ್ ನಡೆಯಿತು.

ಅಕ್ಕುಂಜಿ ಅವರು 2010ರ ಏಷ್ಯನ್ ಕ್ರೀಡಾ ಕೂಟ ಮತ್ತು ಕಾಮನ್‌ವೆಲ್ತ್ ಕ್ರೀಡಾಕೂಟಗಳಲ್ಲಿ ಬಂಗಾರದ ಸಾಧನೆ ತೋರಿದವರು. ಆದರೆ ಆ ನಂತರ ಉದ್ದೀಪನಾ ಮದ್ದು ಸೇವಿಸಿರುವ ವಿವಾದಕ್ಕೆ ಸಿಲುಕಿ, ಎರಡು ವರ್ಷಗಳ ಅಮಾನತು ಶಿಕ್ಷೆ ಅನುಭವಿಸಿದ್ದಾರೆ. ಇದೇ ಜುಲೈ 3ರಂದು ಅವರು ಅಮಾನತು ಅವಧಿ ಮುಗಿದಿದೆ.

ವಿಶ್ವ ಅಥ್ಲೆಟಿಕ್ಸ್‌ನಲ್ಲಿ ಪಾಲ್ಗೊಳ್ಳಲಿರುವ ರಿಲೆ ತಂಡದಲ್ಲಿ ಈಗಾಗಲೇ ಕರ್ನಾಟಕದ ಎಂ.ಆರ್.ಪೂವಮ್ಮ, ಅನು ಮರಿಯಮ್ ಜೋಸ್, ಟಿಂಟು ಲುಕಾ ಮತ್ತು ನಿರ್ಮಲಾ ಸ್ಥಾನ ಪಡೆದಿದ್ದಾರೆ. ಅಲ್ಲಿಗೆ ಒಟ್ಟು ಆರು ಮಂದಿಯನ್ನು ಕಳುಹಿಸಲಿರುವುದರಿಂದ ಇದೀಗ ಸಹಜವಾಗಿಯೇ ಅಶ್ವಿನಿ ಅಕ್ಕುಂಜಿ ಮಾಸ್ಕೊಗೆ ರಹದಾರಿ ಪಡೆದಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.