ADVERTISEMENT

ವಿಶ್ವ ಅಥ್ಲೆಟಿಕ್ಸ್: ಮಯೂಖಾಗೆ ಒಂಬತ್ತನೇ ಸ್ಥಾನ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2011, 19:30 IST
Last Updated 28 ಆಗಸ್ಟ್ 2011, 19:30 IST
ವಿಶ್ವ ಅಥ್ಲೆಟಿಕ್ಸ್: ಮಯೂಖಾಗೆ ಒಂಬತ್ತನೇ ಸ್ಥಾನ
ವಿಶ್ವ ಅಥ್ಲೆಟಿಕ್ಸ್: ಮಯೂಖಾಗೆ ಒಂಬತ್ತನೇ ಸ್ಥಾನ   

ಡೇಗು, (ದಕ್ಷಿಣ ಕೊರಿಯಾ): ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಎಂಟು ವರ್ಷಗಳ ಬಳಿಕ ಪದಕದ ಭರವಸೆ ಮೂಡಿಸಿದ್ದ ಭಾರತದ ಮಯೂಖಾ ಜಾನಿ ನಿರಾಶೆಗೆ ಕಾರಣರಾಗಿದ್ದಾರೆ.

ಇಲ್ಲಿ  ನಡೆಯುತ್ತಿರುವ 13ನೇ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ ಮಹಿಳೆಯರ ಲಾಂಗ್ ಜಂಪ್ ಸ್ಪರ್ಧೆಯ ಫೈನಲ್‌ನಲ್ಲಿ ಕೇರಳದ ಮಯೂಖಾ ಒಂಬತ್ತನೇ ಸ್ಥಾನ ಪಡೆದಿದ್ದಾರೆ. ಅರ್ಹತಾ ಸುತ್ತಿನಲ್ಲಿ ತೋರಿದ ಪ್ರದರ್ಶನವನ್ನು ಪುನರಾವರ್ತಿಸುವಲ್ಲಿ ಅವರು ವಿಫಲರಾಗಿದ್ದಾರೆ.

ಭಾನುವಾರ ಡೇಗು ಕ್ರೀಡಾಂಗಣದಲ್ಲಿ ನಡೆದ ಫೈನಲ್‌ನಲ್ಲಿ ಮಯೂಖಾ ಮೊದಲ ಅವಕಾಶದಲ್ಲಿ 6.37 ಮೀಟರ್ ದೂರ ಜಿಗಿದರು. ಬಳಿಕದ ಅವಕಾಶಗಳಲ್ಲಿ ಅವರ ಪ್ರದರ್ಶನದಲ್ಲಿ ಸುಧಾರಣೆ ಕಾಣಲಿಲ್ಲ. ಅರ್ಹತಾ ಸುತ್ತಿನಲ್ಲಿಯೇ ಅವರು 6.53ಮೀ. ದೂರ ಜಿಗಿದು 10ನೇ ಸ್ಥಾನ ಪಡೆದಿದ್ದರು. ಆ ಮೂಲಕ ವೈಯಕ್ತಿಕ ವಿಭಾಗದಲ್ಲಿ ಫೈನಲ್ ತಲುಪಿದ ಭಾರತದ ಮೂರನೇ ಅಥ್ಲೀಟ್ ಎನಿಸಿದ್ದರು.

ಈ ವಿಭಾಗದ ಚಿನ್ನದ ಪದಕ ಅಮೆರಿಕದ ಬ್ರಿಟೆನಿಯಾ ರೀಸೆ (6.83ಮೀ.) ಪಾಲಾಯಿತು. ರಷ್ಯಾದ ಓಲ್ಗಾ ಕುಚೆರೆಂಕೊ (6.77 ಮೀ.) ಬೆಳ್ಳಿ ಹಾಗೂ ಲ್ಯಾಟಿವಿಯಾನದ ಇನೆಟಾ ರಾಡೆವಿಕಾ (6.76 ಮೀ.) ಕಂಚಿನ ಪದಕ ಜಯಿಸಿದರು.

2003ರಲ್ಲಿ ಪ್ಯಾರಿಸ್‌ನಲ್ಲಿ ನಡೆದ ಐಎಎಫ್‌ಎಫ್ ವಿಶ್ವ ಚಾಂಪಿಯನ್‌ಷಿಪ್‌ನ ಲಾಂಗ್ ಜಂಪ್‌ನಲ್ಲಿ ಅಂಜು ಬಾಬಿ ಜಾರ್ಜ್ ಕಂಚಿನ ಪದಕ ಜಯಿಸಿದ್ದರು. ಆ ಬಳಿಕ ಭಾರತದ ಯಾರೂ ಪದಕ ಗೆದ್ದಿಲ್ಲ.

`ಶನಿವಾರ ಫೈನಲ್‌ಗೆ ಅರ್ಹತೆ ಪಡೆದ ಬಳಿಕ ಮಯೂಖಾ ಅವರನ್ನು ಉದ್ದೀಪನ ಮದ್ದು ಪರೀಕ್ಷೆಗೆ ಒಳಪಡಿಸಿದರು. ನಾವು ಅಥ್ಲೀಟ್ಸ್ ಗ್ರಾಮಕ್ಕೆ ತೆರಳಿದಾಗ ಮಧ್ಯರಾತ್ರಿ ಕಳೆದಿತ್ತು~ ಎಂದು ಮಯೂಖಾ ಕೋಚ್ ಶ್ಯಾಮ್ ಕುಮಾರ್ ನುಡಿದರು. ಮಯೂಖಾ ಈ ಚಾಂಪಿಯನ್‌ಷಿಪ್‌ನಲ್ಲಿ ಟ್ರಿಪಲ್ ಜಂಪ್‌ನಲ್ಲಿಯೂ ಸ್ಪರ್ಧಿಸಲಿದ್ದಾರೆ.

ನಿರಾಸೆ ಮೂಡಿಸಿದ ಗುರ್ಮೀತ್: 20 ಕಿ.ಮೀ. ನಡಿಗೆ ಸ್ಪರ್ಧೆಯಲ್ಲಿ ಕೂಡ ಭಾರತ ನಿರಾಸೆ ಅನುಭವಿಸಿತು. ಗುರ್ಮೀತ್ ಸಿಂಗ್ ಹಾಗೂ ಬಾಬುಭಾಯಿ ಕೇಶರಭಾಯಿ ಪಣುಚಾ ಕ್ರಮವಾಗಿ 30 ಹಾಗೂ 31ನೇ ಸ್ಥಾನ ಪಡೆದರು. ಇದರಲ್ಲಿ ರಷ್ಯಾದ ಅಥ್ಲೀಟ್‌ಗಳು ಪಾರಮ್ಯ ಮೆರೆದರು.

ಬೋಲ್ಟ್‌ಗೆ ಆಘಾತ: 2009ರಲ್ಲಿ ಬರ್ಲಿನ್‌ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ವಿಶ್ವ ದಾಖಲೆ ನಿರ್ಮಿಸಿದ್ದ ಜಮೈಕಾದ ಉಸೇನ್ ಬೋಲ್ಟ್ ಇಲ್ಲಿ ಆಘಾತ ಅನುಭವಿಸಿದರು.

100 ಮೀ. ದೂರದ ಓಟದ ಫೈನಲ್‌ನ ಆರಂಭದಲ್ಲಿಯೇ ವಿಶ್ವದ ವೇಗದ ಓಟಗಾರ ಬೋಲ್ಟ್ ಎಡವಿದರು. ಕಿಕ್ಕಿರಿದು ತುಂಬಿದ್ದ ಕ್ರೀಡಾಂಗಣದಲ್ಲಿ ತಪ್ಪು ಆರಂಭ ಪಡೆದರು. ಹಾಗಾಗಿ ಅವರನ್ನು ಅನರ್ಹಗೊಳಿಸಲಾಯಿತು. ಇದು ಕ್ರೀಡಾ ಪ್ರೇಮಿಗಳಿಗೂ ನಿರಾಸೆ ಉಂಟು ಮಾಡಿತು.

ಐದು ನಿಮಿಷಗಳ ಲಘು ವ್ಯಾಯಾಮದ ಬಳಿಕ ಬೋಲ್ಟ್ ಐದನೇ ಲೇನ್‌ನಲ್ಲಿ ಓಡಲು ಸಿದ್ಧರಾದರು. ಆದರೆ ತೀರ್ಪುಗಾರರು ಗುಂಡು ಹಾರಿಸುವ ಮೊದಲೇ ಓಡಿದರು. ಸ್ವಲ್ಪ ದೂರ ಓಡಿದ ಅವರು ನಿರಾಸೆಯಲ್ಲಿ ಶರ್ಟ್ ಬಿಚ್ಚಿ ಎಸೆದು, ತಲೆ ಮೇಲೆ ಕೈಇಟ್ಟುಕೊಂಡರು.

ಮತ್ತೊಮ್ಮೆ ಸ್ಪರ್ಧೆ ನಡೆಸಿದಾಗ ಅದರಲ್ಲಿ ಜಮೈಕಾದವರೇ ಆದ ಯೊಹಾನ್ ಬ್ಲೇಕ್ ಮೊದಲ ಸ್ಥಾನ ಪಡೆದು ವೇಗದ ಓಟಗಾರ ಎನಿಸಿದರು. ಅವರು 9.92 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿದರು. ಅಮೆರಿಕದ ವಾಲ್ಟರ್ ಡಿಕ್ಸ್ (10.8 ಸೆ.) ಬೆಳ್ಳಿ ಪದಕ ಗೆದ್ದರು. ಸೇಂಟ್ ಕಿಟ್ಸ್ ಅಂಡ್ ನೇವಿಸ್‌ನ ಕಿಮ್ ಕೊಲಿನ್ಸ್ (10.9 ಸೆ.) ಮೂರನೇ ಸ್ಥಾನ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.