ADVERTISEMENT

ವೇಗವಾಗಿ ಎಂಟು ಸಾವಿರ ರನ್‌ ಪೂರೈಸಿ ದಾಖಲೆ ಬರೆದ ವಿರಾಟ್‌ ಕೊಹ್ಲಿ

​ಪ್ರಜಾವಾಣಿ ವಾರ್ತೆ
Published 16 ಜೂನ್ 2017, 5:37 IST
Last Updated 16 ಜೂನ್ 2017, 5:37 IST
ವೇಗವಾಗಿ ಎಂಟು ಸಾವಿರ ರನ್‌ ಪೂರೈಸಿ ದಾಖಲೆ ಬರೆದ ವಿರಾಟ್‌ ಕೊಹ್ಲಿ
ವೇಗವಾಗಿ ಎಂಟು ಸಾವಿರ ರನ್‌ ಪೂರೈಸಿ ದಾಖಲೆ ಬರೆದ ವಿರಾಟ್‌ ಕೊಹ್ಲಿ   

ಬರ್ಮಿಂಗ್‌ಹ್ಯಾಮ್‌: ನಿರೀಕ್ಷೆ ಹುಸಿಯಾಗಲಿಲ್ಲ. ಅಚ್ಚರಿಯ ಫಲಿತಾಂಶ ನೀಡುವ ತಂಡ ಎಂದು ಹೆಸರು ಗಳಿಸಿರುವ ಬಾಂಗ್ಲಾದೇಶದ ಸವಾಲನ್ನು ಸುಲಭವಾಗಿ ಮೆಟ್ಟಿ ನಿಂತ ಭಾರತ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಪ್ರಶಸ್ತಿ ಸುತ್ತು ಪ್ರವೇಶಿಸಿತು.

ಎಜ್‌ಬಾಸ್ಟನ್‌ನಲ್ಲಿ ಗುರುವಾರ ನಡೆದ ಎರಡನೇ ಸೆಮಿಫೈನಲ್‌ನಲ್ಲಿ ಬಾಂಗ್ಲಾದೇಶ ಮುಂದಿಟ್ಟ 265 ರನ್‌ಗಳ ಗುರಿಯನ್ನು ಹಾಲಿ ಚಾಂಪಿಯನ್ನರು 40.1 ಓವರ್‌ಗಳಲ್ಲಿ ದಾಟಿದರು.

ಮೊದಲ ವಿಕೆಟ್‌ಗೆ ರೋಹಿತ್ ಶರ್ಮಾ ಮತ್ತು ಶಿಖರ್‌ ಧವನ್‌ ಸೇರಿಸಿದ 87 ರನ್‌ ಮತ್ತು ಮುರಿಯದ ಎರಡನೇ ವಿಕೆಟ್‌ಗೆ 178 ರನ್‌ ಸೇರಿಸಿದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರ ಅಮೋಘ ಆಟ ಭಾರತದ ಗೆಲುವನ್ನು ಸುಲಭವಾಗಿಸಿತು.

ADVERTISEMENT

ಬಾಂಗ್ಲಾದೇಶದ ವಿರುದ್ಧದ ಸೆಮಿಫೈನಲ್‌ನಲ್ಲಿ ಔಟಾಗದೆ 96 ರನ್‌ ಗಳಿಸಿದ ವಿರಾಟ್‌ ಕೊಹ್ಲಿ ಎಂಟು ಸಾವಿರ ರನ್‌ ಪೂರೈಸಿದ್ದರು.

ಶಬ್ಬೀರ್‌ ರಹಮಾನ್‌ ಹಾಕಿದ 39ನೇ ಓವರ್‌ನ ಮೂರನೇ ಎಸೆತದಲ್ಲಿ 1 ರನ್‌ ಗಳಿಸಿದಾಗ ಅವರ ವೈಯಕ್ತಿಕ ಸ್ಕೋರ್‌ 88 ಆಗುತ್ತಿದ್ದಂತೆ ಈ ಮೈಲುಗಲ್ಲು ತಲುಪಿದರು. ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ ಎಂಟು ಸಾವಿರ ರನ್‌ ಗಳಿಸಿದ ಸಾಧನೆಯೂ ಅವರದಾಯಿತು.

183 ಪಂದ್ಯಗಳನ್ನು ಆಡಿದ ಕೊಹ್ಲಿ 175 ಇನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದರೆ. ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್‌ 182  ಇನಿಂಗ್ಸ್‌ಗಳಲ್ಲಿ ಎಂಟು ಸಾವಿರ ರನ್‌ ಗಳಿಸಿದ್ದರು. ಭಾರತದ ಮಾಜಿ ನಾಯಕ ಸೌರವ್‌ ಗಂಗೂಲಿ 200 ಇನಿಂಗ್ಸ್‌ಗಳಲ್ಲಿ ಮತ್ತು ಸಚಿನ್‌ ತೆಂಡೂಲ್ಕರ್‌ 210 ಇನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದರು.

18ರಂದು ಫೈನಲ್‌: ಟೂರ್ನಿಯ ಫೈನಲ್ ಪಂದ್ಯ ಜೂನ್ 18ರಂದು ಕೆನ್ನಿಂಗ್ಟನ್‌ ಓವಲ್‌ನಲ್ಲಿ ನಡೆಯಲಿದೆ. ಭಾರತೀಯ ಕಾಲಮಾನ ಮಧ್ಯಾಹ್ನ ಮೂರು ಗಂಟೆಗೆ ನಡೆಯುವ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ಸೆಣಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.