ADVERTISEMENT

`ವೈಯಕ್ತಿಕ ಪ್ರದರ್ಶನವೂ ಮುಖ್ಯ'

ಅಜ್ಮಲ್‌ಗೆ ಇತರ ಬೌಲರ್‌ಗಳ ಬೆಂಬಲ ಅಗತ್ಯ: ಹಫೀಜ್

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2012, 19:59 IST
Last Updated 24 ಡಿಸೆಂಬರ್ 2012, 19:59 IST

ಬೆಂಗಳೂರು: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ವೇಳೆ ಪಿಚ್ ಹಾಗೂ ಅಂಗಳದ ಪರಿಸ್ಥಿತಿಯ ಬಗ್ಗೆ ಮಹೇಂದ್ರ ಸಿಂಗ್ ದೋನಿ ಹೇಳಿದ್ದ ಕೆಲವು ಮಾತುಗಳು ವಿವಾದಕ್ಕೆ ಕಾರಣವಾಗಿದ್ದವು. ಆದ್ದರಿಂದ ಈ ಬಾರಿ `ಮಹಿ' ಅಂತಹ ವಿವಾದಕ್ಕೆ ಆಸ್ಪದ ನೀಡಲಿಲ್ಲ.
ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೋನಿ ಪಿಚ್ ಹಾಗೂ ಅಂಗಳದ ಪರಿಸ್ಥಿತಿಯ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಂತೆ ಕಾಣಲಿಲ್ಲ. ಅದರ ಬದಲು ಆಟಗಾರ ಪ್ರದರ್ಶನದ ಕುರಿತು ಒತ್ತು ನೀಡಿದರು.

`ಗೆಲುವು ಸಾಧಿಸಲು ಆಟಗಾರರ ವೈಯಕ್ತಿಕ ಪ್ರದರ್ಶನವೂ ಮುಖ್ಯ. ಎರಡೂ ತಂಡಗಳು ಸಮತೋಲನದಿಂದ ಕೂಡಿವೆ. ಶ್ರೇಷ್ಠ ಆಟ ತೋರುವ ತಂಡ ಗೆಲುವು ಪಡೆಯುತ್ತದೆ' ಎಂದು ದೋನಿ ನುಡಿದರು.`ಟ್ವೆಂಟಿ-20 ಪಂದ್ಯದ ಪರಿಸ್ಥಿತಿಗೆ ಹೊಂದಿಕೊಳ್ಳುವುದು ಕಷ್ಟ. ಇಲ್ಲಿ ಗೆಲುವು ಪಡೆಯಲು ಒಂದಿಬ್ಬರು ಅಸಾಮಾನ್ಯ ಪ್ರದರ್ಶನ ನೀಡಬೇಕು. ಇಂಗ್ಲೆಂಡ್ ವಿರುದ್ಧದ ಎರಡು ಟಿ-20 ಪಂದ್ಯಗಳು ನಮಗೆ ಹೆಚ್ಚಿನ ನೆರವು ನೀಡಿತು' ಎಂದರು.

ಬೌಲರ್‌ಗಳ ಮೇಲೆ ವಿಶ್ವಾಸ: ಪಾಕ್ ತಂಡದ ನಾಯಕ ಮೊಹಮ್ಮದ್ ಹಫೀಜ್ ತಮ್ಮ ಬೌಲರ್‌ಗಳ ಮೇಲೆ ವಿಶ್ವಾಸವನ್ನಿರಿಸಿಕೊಂಡು ಕಣಕ್ಕಿಳಿಯಲಿದ್ದಾರೆ. `ನಮ್ಮ ತಂಡ ವೇಗಿಗಳು ಹಾಗೂ ಸ್ಪಿನ್ನರ್‌ಗಳನ್ನು ಒಳಗೊಂಡಿವೆ. ಭಾರತದ ಬಲಿಷ್ಠ ಬ್ಯಾಟಿಂಗ್‌ಗೆ ಸವಾಲು ನೀಡಲು ಸಾಧ್ಯ' ಎಂದು ಹಫೀಜ್ ತಿಳಿಸಿದರು.

`ಸಯೀದ್ ಅಜ್ಮಲ್ ನಮ್ಮ ತಂಡದ ಪ್ರಮುಖ ಅಸ್ತ್ರ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಅದೇ ವೇಳೆ ಅವರ ಮೇಲೆ ಅತಿಯಾದ ಒತ್ತಡ ಹೇರಬಾರದು. ಇತರ ಬೌಲರ್‌ಗಳು ಅವರಿಗೆ ತಕ್ಕ ಬೆಂಬಲ ನೀಡಬೇಕು' ಎಂದರು.`ಭಾರತದಲ್ಲಿ ಆಡುವುದು ವಿಶೇಷ ಅನುಭವ ನೀಡಲಿದೆ. ಇಲ್ಲಿ ಸಹಜವಾಗಿ ಒತ್ತಡ ಎದುರಾಗುತ್ತದೆ. ಆದರೆ ಅದನ್ನು ನಿಭಾಯಿಸುವುದು ಮುಖ್ಯ. ಯುವ ಹಾಗೂ ಅನುಭವಿ ಆಟಗಾರರು ನಮ್ಮ ತಂಡದಲ್ಲಿದ್ದಾರೆ. ಶಾಹಿದ್ ಆಫ್ರಿದಿ, ಶೋಯಬ್ ಮಲಿಕ್ ಮತ್ತು ಉಮರ್ ಅಕ್ಮಲ್ ತಂಡದ ಬಲ ಹೆಚ್ಚಿಸಲಿದ್ದಾರೆ' ಎಂದು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.