ADVERTISEMENT

ಶತಕಗಳ ಶತಕದ ರಾಜ!

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2012, 19:30 IST
Last Updated 16 ಮಾರ್ಚ್ 2012, 19:30 IST

ಮೀರ್‌ಪುರ (ಪಿಟಿಐ): ಈ ಒಂದು ಅದ್ಭುತ ಕ್ಷಣಕ್ಕಾಗಿನ ಕಾಯುವಿಕೆಗೆ ಕೊನೆಗೂ ತೆರೆ ಬಿದ್ದಿದೆ. ಕಾರಣ ಬ್ಯಾಟಿಂಗ್ ಚಾಂಪಿಯನ್ ಸಚಿನ್ ತೆಂಡೂಲ್ಕರ್ ಶುಕ್ರವಾರ ಶತಕಗಳ ಶತಕದ ಮಿಂಚು ಹರಿಸಿಯೇ ಬಿಟ್ಟರು.
ಶೇರ್ ಎ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಈ ಸಾಧನೆ ಮೂಡಿಬಂತು. ಇದು ಏಕದಿನ ಕ್ರಿಕೆಟ್‌ನಲ್ಲಿ ಬಾಂಗ್ಲಾ ಎದುರು ಸಚಿನ್ ಗಳಿಸಿದ ಮೊದಲ ಶತಕ. ಈ ಪಂದ್ಯದಲ್ಲಿ ಮೂರಂಕಿ ದಾಟುತ್ತಿದ್ದಂತೆ ಕ್ರೀಡಾ ಪ್ರೇಮಿಗಳು ತಮ್ಮ ಮನದಲ್ಲೇ ಸಚಿನ್ ಆಟಕ್ಕೊಂದು ಅಭಿನಂದನೆ ಹೇಳಿದರು. ಕಾರಣ ತೆಂಡೂಲ್ಕರ್ ವಿಶ್ವದಾಖಲೆಯ ನೂರನೇ ಶತಕ ದಾಖಲಿಸಿದರು. ಇದು ಏಕದಿನ ಪಂದ್ಯಗಳಲ್ಲಿ ಅವರು ಗಳಿಸಿದ 49ನೇ ಶತಕ. ಆದರೆ ಅದಕ್ಕಾಗಿ ಒಂದು ವರ್ಷ ಕಾಯಬೇಕಾಯಿತು, 33 ಇನಿಂಗ್ಸ್‌ಗಳ ನಿರಾಶೆಯನ್ನು ಸಹಿಸಿಕೊಳ್ಳಬೇಕಾಯಿತು. ಆದರೆ ಈ ಪಂದ್ಯದಲ್ಲಿ ಬಾಂಗ್ಲಾ ಐದು ವಿಕೆಟ್‌ಗಳ ಗೆಲುವು ಸಾಧಿಸಿತು. 

ಬ್ಯಾಟಿಂಗ್ ಚಾಂಪಿಯನ್ ಸಚಿನ್ ತೆಂಡೂಲ್ಕರ್ ಶುಕ್ರವಾರ ವಿಶ್ವ ಕ್ರಿಕೆಟ್ ಬಾನಂಗಳದಲ್ಲಿ ಶತಕಗಳ ಶತಕದ ಹೊಂಗಿರಣ ಮೂಡಿಸಿಯೇ ಬಿಟ್ಟರು. ಇದೊಂದು ಕ್ರಿಕೆಟ್ ಜಗತ್ತಿನ ಅದ್ಭುತ ಸಾಧನೆ. ಕ್ರೀಡಾ ಪ್ರೇಮಿಗಳು ಎಂದೂ ಮರೆಯಲಾಗದ ಸುಮಧುರ ಕ್ಷಣ.

ಕಾರಣ ನೂರು ಶತಕಗಳನ್ನು ದಾಖಲಿಸಿದ ವಿಶ್ವದ ಮೊದಲ ಆಟಗಾರ ಎಂದು ತೆಂಡೂಲ್ಕರ್ ಕ್ರಿಕೆಟ್ ಇತಿಹಾಸದ ಪುಟದಲ್ಲಿ ದಾಖಲಾದರು. ಕ್ರೀಡಾಂಗಣದಲ್ಲಿದ್ದ ಪ್ರೇಕ್ಷಕರು ಎದ್ದು ನಿಂತು ಆ ಸಾಧನೆಯನ್ನು ಸವಿದರು. ಎದುರಾಳಿ ಆಟಗಾರರು ಹಸ್ತಲಾಘವ ಮಾಡಿ ಅಭಿನಂದಿಸಿದರು.

ಶೇರ್ ಎ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದ ಹಸಿರು ಹಾಸಿನ ಮೇಲೆ ತೆಂಡೂಲ್ಕರ್ ಅಂತಹದೊಂದು ಚರಿತ್ರಾರ್ಹ ಕ್ಷಣಕ್ಕೆ ಸಾಕ್ಷಿಯಾದರು. ಎಡಗೈ ಸ್ಪಿನ್ನರ್ ಶಕೀಬ್ ಅಲ್ ಹಸನ್ ಹಾಕಿದ 44ನೇ ಓವರ್‌ನ ಮೂರನೇ ಎಸೆತವನ್ನು ಸ್ಕ್ವೇರ್ ಲೆಗ್‌ನತ್ತ ತಳ್ಳಿ ಒಂಟಿ ರನ್ ಗಳಿಸುತ್ತಿದ್ದಂತೆ ಸಂಭ್ರಮ ಎಂಬುದು ತೂಬು ಬಿಚ್ಚಿಕೊಂಡ ಅಣೆಕಟ್ಟು. ಇಡೀ ವಿಶ್ವ ಕ್ರಿಕೆಟ್ ಮಾಸ್ಟರ್ ಬ್ಲಾಸ್ಟರ್ ಆಟಕ್ಕೆ ಮೆಚ್ಚುಗೆ ಸೂಚಿಸಿತು.

ಇಲ್ಲಿ ನಡೆಯುತ್ತಿರುವ ಏಷ್ಯಾಕಪ್ ಟೂರ್ನಿಯ ಬಾಂಗ್ಲಾದೇಶ ವಿರುದ್ಧದ ಏಕದಿನ ಪಂದ್ಯದಲ್ಲಿ ಈ ಸಾಧನೆ ಹೊರಹೊಮ್ಮಿತು. 138 ಎಸೆತಗಳಲ್ಲಿ ಅವರು ತಮ್ಮ 49ನೇ ಶತಕ ಬಾರಿಸಿದರು. ಟೆಸ್ಟ್ ನಲ್ಲಿ ಸಚಿನ್ 51 ಶತಕ ಗಳಿಸಿದ್ದಾರೆ.

ಆದರೆ ಶುಕ್ರವಾರ ಮಧ್ಯಾಹ್ನ ಭಾರತದಲ್ಲಿ ಕೇಂದ್ರದ ಬಜೆಟ್ ವೀಕ್ಷಿಸುತ್ತಿದ್ದವರ ಕಣ್ಣುಗಳೆಲ್ಲಾ ಒಮ್ಮೆಲೇ ಕ್ರಿಕೆಟ್‌ನತ್ತ ಹರಿಯುವಂತೆ ಮಾಡಿದ್ದು ಸಚಿನ್ ಆಟ. ತೆರಿಗೆ ಮಿತಿ ಎಷ್ಟು? ಯಾವ ವಸ್ತು ಅಗ್ಗ? ಎಂದು ಕೇಳುವ ಸಮಯದಲ್ಲಿ `ತೆಂಡೂಲ್ಕರ್ ಸ್ಕೋರ್ ಎಷ್ಟಾಯಿತು~ ಎಂಬ ಧ್ವನಿ ಜೋರಾಯಿತು!

ಸಚಿನ್ 90ರ ಗಡಿದಾಡುತ್ತಿದ್ದಂತೆ ಪ್ರತಿ ರನ್ ಗಳಿಸಿದಾಗಲೂ ಕ್ರಿಕೆಟ್ ಪ್ರೇಮಿಗಳ ಎದೆಯಲ್ಲಿ ನೂರು ಕುದುರೆಗಳ ಓಟ. ಆದರೆ ಮೂರಂಕಿ ಮುಟ್ಟುತ್ತಿದ್ದಂತೆ ಸಚಿನ್ ಎಂದಿನಂತೆ ಹೆಲ್ಮೆಟ್ ತೆಗೆದು ಮುಗಿಲಿನತ್ತ ದೃಷ್ಟಿ ಹರಿಸಿದರು. ಅಷ್ಟೇನು ಭಾವುಕರಾಗಲಿಲ್ಲ. ಕ್ರೀಸ್‌ನಲ್ಲಿದ್ದ ಸಹ ಆಟಗಾರ ಸುರೇಶ್ ರೈನಾ ಅವರನ್ನು ಅಪ್ಪಿಕೊಂಡು ನೂರನೇ ಶತಕವನ್ನು ಸಂಭ್ರಮಿಸಿದರು. ಇದು ಏಕದಿನ ಕ್ರಿಕೆಟ್‌ನಲ್ಲಿ ಬಾಂಗ್ಲಾ ಎದುರು ದಾಖಲಿಸಿದ ಮೊದಲ ಶತಕ.

ಸಚಿನ್ ಶತಕ ಗಳಿಸಿ ಸೋಮವಾರಕ್ಕೆ ಭರ್ತಿ ಒಂದು ವರ್ಷವಾಗಿತ್ತು. ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ 2011ರ ಮಾರ್ಚ್ 12ರಂದು ಸಚಿನ್ ದಕ್ಷಿಣ ಆಫ್ರಿಕಾ ವಿರುದ್ಧ ನಾಗಪುರದಲ್ಲಿ ಶತಕ ಗಳಿಸಿದ್ದರು.  ಈ ಅವಧಿಯಲ್ಲಿ ಅವರು 11 ಟೆಸ್ಟ್ ಹಾಗೂ 12 ಏಕದಿನ ಪಂದ್ಯಗಳಲ್ಲಿ ಆಡ್ದ್ದಿದರು. ಮುಂದಿನ ಏಪ್ರಿಲ್ 24ರಂದು ಸಚಿನ್ ತಮ್ಮ 39ನೇ ಜನ್ಮ ದಿನ ಆಚರಿಸಿಕೊಳ್ಳಲಿದ್ದಾರೆ.

`ಈ ದಾಖಲೆಯ ಬಗ್ಗೆ ನಾನು ಹೆಚ್ಚು ಯೋಚಿಸಿರಲಿಲ್ಲ. ಆದರೆ ಮಾಧ್ಯಮಗಳು ಈ ಬಗ್ಗೆ ಹೆಚ್ಚು ಪ್ರಚಾರ ನೀಡುತ್ತಿದ್ದವು. ನಾನು ಹೋದಲೆಲ್ಲಾ ಇದೇ ಮಾತು. ಅದು ರೆಸ್ಟೋರೆಂಟ್ ಇರಲಿ, ಹೋಟೆಲ್‌ನ ಕೊಠಡಿ ಸಿಬ್ಬಂದಿ ಆಗಿರಲಿ, ಎಲ್ಲರೂ ನೂರನೇ ಮಾತನಾಡುತ್ತಿದ್ದರು. ಆದರೆ 99ನೇ ಶತಕದ ಬಗ್ಗೆ ಯಾರೂ ಈ ರೀತಿ ಮಾತನಾಡಿರಲಿಲ್ಲ~ ಎಂದು ಸಚಿನ್ ಪಂದ್ಯದ ಬಳಿಕ ನುಡಿದರು.

147 ಎಸೆತಗಳನ್ನು ಎದುರಿಸಿದ ಅವರು ಒಂದು ಸಿಕ್ಸರ್ ಹಾಗೂ 12 ಬೌಂಡರಿ ಬಾರಿಸಿದರು. ಆದರೆ ಈ ಪಂದ್ಯದಲ್ಲಿ ಸಚಿನ್ (114) ನಿಧಾನವಾಗಿಯೇ ಇನಿಂಗ್ಸ್ ಕಟ್ಟಿದರು. 51 ರನ್‌ನಲ್ಲಿದ್ದಾಗ ಒಮ್ಮೆ ಸ್ಟಂಪ್ ಔಟ್‌ನಿಂದ ಪಾರಾಗಿದ್ದರು. ಆದರೆ ಈ ಪಂದ್ಯದಲ್ಲಿ ಭಾರತ ಸೋಲು ಕಂಡ ಕಾರಣ ಸಚಿನ್ ಸಾಧನೆ ತೂಕ ಕೊಂಚ ಕಡಿಮೆಯಾಯಿತು.

ಲಿಟಲ್ ಮಾಸ್ಟರ್‌ಗೆ ಜೈ!
ಬೆಂಗಳೂರು: ಮೀರ್‌ಪುರದಲ್ಲಿ ಸಚಿನ್ ಶತಕ ಗಳಿಸಿದರು. ಉದ್ಯಾನನಗರಿಯಲ್ಲಿ `ಕ್ರಿಕೆಟ್ ದೇವರ~ ಭಕ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು!

ಸಚಿನ್ `ಶತಕಗಳ ಶತಕ~ ಸಾಧನೆ ಮಾಡುತ್ತಿದ್ದಂತೆ ನಗರದಲ್ಲಿ ಸಂಭ್ರಮ. `ಲಿಟಲ್ ಮಾಸ್ಟರ್ ನಿಮಗೆ ಅಭಿನಂದನೆ~ ಎನ್ನುವ ಭಿತ್ತಿ ಚಿತ್ರ ಹಿಡಿದು  ಅಭಿಮಾನಿಗಳು ಸಂತಸ ಹಂಚಿಕೊಂಡರು. ಚಿಣ್ಣರಂತೂ ಸಚಿನ್ ಭಾವಚಿತ್ರಕ್ಕೆ ಸಿಹಿ ತಿನಿಸುವಂತೆ ಫೋಟೋಕ್ಕೂ ಫೋಸ್ ನೀಡಿದರು.

ಕರ್ನಾಟಕದ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ, ಮಾಜಿ ಕ್ರಿಕೆಟಿಗ ಎರ‌್ರಪಳ್ಳಿ ಪ್ರಸನ್ನ ಸೇರಿದಂತೆ ಇತರ ಗಣ್ಯರು ಸಾಧಕ ಆಟಗಾರನಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ನವದೆಹಲಿ ವರದಿ: ಲಿಟಲ್ ಮಾಸ್ಟರ್‌ಗೆ ಜೈ! ಸ್ಫೂರ್ತಿಯ ಚಿಲುಮೆಯಾಗಿರುವ ಸಚಿನ್ ಸಾಧನೆಗೆ ಮತ್ತೊಂದು ಶ್ರೇಯ. ಎಲ್ಲರ ಸಂಭ್ರಮಕ್ಕೆ ಕಾರಣವಾಗಿರುವ ಬಲಗೈ ಬ್ಯಾಟ್ಸ್‌ಮನ್‌ಗೆ ಅಭಿನಂದನೆಗಳು. ಸಚಿನ್‌ಗೆ ದೇಶಾದ್ಯಂತ ಹೀಗೆ ಅಭಿನಂದನೆಗಳ ಮಳೆ ಸುರಿಯುತ್ತಿವೆ. ಬಿಸಿಸಿಐ ಅಧ್ಯಕ್ಷ ಎನ್. ಶ್ರೀನಿವಾಸನ್, ಕಾರ್ಯದರ್ಶಿ ಸಂಜಯ್ ಜಗದಾಳೆ, ಐಸಿಸಿ ಸಿಇಒ ಹರೂನ್ ಲಾರ್ಗಟ್,  ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಸೇರಿದಂತೆ ವಿವಿಧ ರಾಜಕೀಯ ಮುಖಂಡರು ಅಭಿನಂದನೆ ಸಲ್ಲಿಸಿದ್ದಾರೆ.

ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್. ಕಿರಣ್ ಕುಮಾರ್ ರೆಡ್ಡಿ, ಕ್ರಿಕೆಟಿಗ ಅರ್ಜುನ್ ರಣತುಂಗಾ, ಬಿಜಿಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ, ಮಾಜಿ ಅಧ್ಯಕ್ಷ ರಾಜನಾಥ್ ಸಿಂಗ್, 1983ರಲ್ಲಿ ಭಾರತ ವಿಶ್ವಕಪ್ ಗೆದ್ದಾಗ ತಂಡದ ಮ್ಯಾನೇಜರ್ ಆಗಿದ್ದ ಪಿ.ಆರ್. ಮಾನಸಿಂಗ್, ಹರಿಯಾಣದ ಸಿ.ಎಂ. ಭೂಪಿಂದರ್ ಸಿಂಗ್ ಹೂಡಾ, ಭಾರತ ಒಲಿಂಪಿಕ್ಸ್ ಸಂಸ್ಥೆ (ಐಒಎ) ಅಧ್ಯಕ್ಷ ವಿಜಯ್ ಕುಮಾರ್ ಮಲ್ಹೋತ್ರಾ, ಮುಂಬೈ ತಂಡದ ಫ್ರಾಂಚೈಸ್ಸಿ ನೀತಾ ಅಂಬಾನಿ ಹೀಗೆ ಹಲವರು ಮುಂಬೈಕರ್ ಸಾಧನೆಗೆ ಶ್ಲಾಘಿಸಿದ್ದಾರೆ.



ಪ್ರತಿಕ್ರಿಯೆ...

ADVERTISEMENT

ಐತಿಹಾಸಿಕ ಸಾಧನೆ ಮಾಡಿದ ಸಚಿನ್‌ಗೆ ಅಭಿನಂದನೆಗಳು. ಅವರ ಪರಿಶ್ರಮವನ್ನು ಮೆಚ್ಚಲೇಬೇಕು
- ಮನಮೋಹನ್ ಸಿಂಗ್, ಪ್ರಧಾನಿ

ಇದೊಂದು ಐತಿಹಾಸಿಕ ಕ್ಷಣ. ಬಾಂಗ್ಲಾ ವಿರುದ್ಧದ ಇನಿಂಗ್ಸ್ ಅತ್ಯುತ್ತಮವಾದದ್ದು
- ದಿಲೀಪ್ ವೆಂಗ್‌ಸರ್ಕರ್

ಸಚಿನ್ ಸಾಧನೆ ಖುಷಿ ನೀಡಿದೆ. ಹೆಚ್ಚು ಮಾತನಾಡುವುದಿಲ್ಲ. ನಮ್ಮ ಜನರೊಂದಿಗೆ ನಾನೂ ಸಂಭ್ರಮಿಸುತ್ತೇನೆ
- ಪಿ.ಟಿ. ಉಷಾ, ಮಾಜಿ ಅಥ್ಲೀಟ್

ಸಚಿನ್ ವೈಫಲ್ಯ ಕಂಡಾಗ ಅನೇಕರು ಟೀಕೆ ಮಾಡಿದ್ದರು. ಟೀಕಾಕಾರರಿಗೆ ಅವರು ತಕ್ಕ ಉತ್ತರ ನೀಡಿದ್ದಾರೆ. - ಕೆ. ಶ್ರೀಕಾಂತ್, ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ

ಇದು ಮಾತನಾಡುವ ಸಮಯವಲ್ಲ. ಸಚಿನ್ ಸಾಧನೆಗೆ ಎಲ್ಲರೊಂದಿಗೆ ಸೇರಿ ಸಂಭ್ರಮಿಸುವ ಕ್ಷಣ.
- ಸೌರವ್ ಗಂಗೂಲಿ

ಕ್ರೀಡಾಕ್ಷೇತ್ರದಲ್ಲಿ ಈ ದಿನವನ್ನು ಸುವರ್ಣ ಅಕ್ಷರಗಳಲ್ಲಿ ಬರದಿಡಬೇಕು
- ಅಜಯ್ ಮಾಕನ್, ಕೇಂದ್ರ ಕ್ರೀಡಾ ಸಚಿವ

ಭಾರತ ತುಂಬಾ ಅದೃಷ್ಟ ಮಾಡಿದೆ. ಏಕೆಂದರೆ ಸಚಿನ್ ಅವರಂತಹ ಆಟಗಾರರನ್ನು ಹೊಂದಿದೆ.
- ಕಪಿಲ್ ದೇವ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.