ಚೆನ್ನೈ: ಇಂಗ್ಲೆಂಡ್ ಕ್ರಿಕೆಟ್ ತಂಡದ ಆಟಗಾರ ಕೆವಿನ್ ಪೀಟರ್ಸನ್ ಈ ವಿಶ್ವಕಪ್ ಚಾಂಪಿಯನ್‌ಷಿಪ್ ಮುಗಿದ ಬಳಿಕ ಲಂಡನ್‌ನಲ್ಲಿ ಹರ್ನಿಯಾ ಶಸ್ತ್ರ ಚಿಕಿತ್ಸೆಗೆ ಒಳಗಾಗಲಿದ್ದಾರೆ. ಈ ವಿಷಯವನ್ನು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ (ಇಸಿಬಿ) ತಿಳಿಸಿದೆ. ಆಸ್ಟ್ರೇಲಿಯಾ ವಿರುದ್ಧದ ಸರಣಿ ವೇಳೆ 30 ವರ್ಷ ವಯಸ್ಸಿನ ಪೀಟರ್ಸನ್‌ಗೆ ಈ ಸಮಸ್ಯೆ ಉದ್ಭವಿಸಿತ್ತು. ಆದರೆ ವಿಶ್ವಕಪ್‌ನ ಉಳಿದೆಲ್ಲಾ ಪಂದ್ಯಗಳಿಗೆ ಅವರು ಲಭ್ಯರಿರುತ್ತಾರೆ ಎಂದು ಇಸಿಬಿ ಮುಖ್ಯ ವೈದ್ಯಾಧಿಕಾರಿ ನಿಕೋಲಾಸ್ ಪೀರ್ಸ್ ತಿಳಿಸಿದ್ದಾರೆ.
‘ಪೀಟರ್ಸನ್ ಅವರ ಸದ್ಯದ ಪರಿಸ್ಥಿತಿ ಗಮನಿಸಿದರೆ ಈ ವಿಶ್ವಕಪ್‌ನ ಉಳಿದ ಪಂದ್ಯಗಳಲ್ಲಿ ಆಡಬಹುದು. ಆದರೆ ಅವರ ಆರೋಗ್ಯದಲ್ಲಿ ಉಂಟಾಗುತ್ತಿರುವ ಏರುಪೇರಿನ ಕಾರಣ ಶಸ್ತ್ರ ಚಿಕಿತ್ಸೆಗೆ ಒಳಗಾಗಬೇಕಾಗಿರುವುದು ಅನಿವಾರ್ಯ. ಶಸ್ತ್ರ ಚಿಕಿತ್ಸೆಗೆ ಒಳಗಾದ ಮೇಲೆ ಅವರಿಗೆ ಆರು ವಾರಗಳ ವಿಶ್ರಾಂತಿ ಅಗತ್ಯವಿದೆ’ ಎಂದು ಅವರು ಹೇಳಿದ್ದಾರೆ. ಈ ಕಾರಣ ಪೀಟರ್ಸನ್ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) ನಾಲ್ಕನೇ ಅವತರಣಿಕೆಗೆ ಲಭ್ಯರಾಗುವ ಸಾಧ್ಯತೆ ಕಡಿಮೆ.
ಅವರು ಜನವರಿಯಲ್ಲಿ ಬೆಂಗಳೂರಿನಲ್ಲಿ ನಡೆದ ಐಪಿಎಲ್ ಹರಾಜಿನಲ್ಲಿ ಮೂರು ಕೋಟಿ ರೂಪಾಯಿಗೆ ಡೆಕ್ಕನ್ ಚಾರ್ಜರ್ಸ್ ಹೈದರಾಬಾದ್ ತಂಡದ ಪಾಲಾಗಿದ್ದರು. ಚೆನ್ನೈನಲ್ಲಿ ಏಪ್ರಿಲ್ ಎಂಟಕ್ಕೆ ಐಪಿಎಲ್ ಶುರುವಾಗಲಿದೆ. ಈ ವಿಶ್ವಕಪ್‌ನಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಅವರು ಮೂರು ಪಂದ್ಯಗಳಿಂದ 129 ರನ್ ಪೇರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.