ADVERTISEMENT

ಶಿಕ್ಷೆ ಮುಗಿಸಿದ ಸೂಪರ್ ಕಿಂಗ್ಸ್‌, ರಾಯಲ್ಸ್

ಐಪಿಎಲ್‌ಗೆ ಮರಳಲಿರುವ ತಂಡಗಳಿಗೆ ಬಿಸಿಸಿಐ ಸ್ವಾಗತ: ಅಭಿಮಾನಿಗಳಲ್ಲಿ ಸಂಭ್ರಮ

ಪಿಟಿಐ
Published 15 ಜುಲೈ 2017, 8:55 IST
Last Updated 15 ಜುಲೈ 2017, 8:55 IST
ಶಿಕ್ಷೆ ಮುಗಿಸಿದ ಸೂಪರ್ ಕಿಂಗ್ಸ್‌, ರಾಯಲ್ಸ್
ಶಿಕ್ಷೆ ಮುಗಿಸಿದ ಸೂಪರ್ ಕಿಂಗ್ಸ್‌, ರಾಯಲ್ಸ್   

ಚೆನ್ನೈ: ಎರಡು ವರ್ಷಗಳ ಅಮಾನತು ಶಿಕ್ಷೆ ಪೂರೈಸಿದ ಚೆನ್ನೈ ಸೂಪರ್‌ ಕಿಂಗ್ಸ್‌ (ಸಿಎಸ್‌ಕೆ) ಮತ್ತು ರಾಜಸ್ಥಾನ ರಾಯಲ್ಸ್‌ (ಆರ್‌ಆರ್‌) ತಂಡಗಳು ಇಂಡಿಯನ್ ಪ್ರೀಮಿಯರ್‌ ಲೀಗ್ (ಐಪಿಎಲ್) ಟೂರ್ನಿಗೆ ಮರಳಲಿವೆ.

2013ರಲ್ಲಿ ನಡೆದಿದ್ದ ಸ್ಪಾಟ್ ಫಿಕ್ಸಿಂಗ್ ಪ್ರಕರರಣದಲ್ಲಿ ಈ ತಂಡಗಳ ಆಡಳಿತ ಮಂಡಳಿಯಲ್ಲಿರುವವರು ಮತ್ತು ಕೆಲವು ಆಟಗಾರರು ಭಾಗಿಯಾಗಿದ್ದರು. ಆದ್ದರಿಂದ ಎರಡೂ ತಂಡಗಳಿಗೆ 2015ರಲ್ಲಿ ಸುಪ್ರೀಂ ಕೋರ್ಟ್ ಎರಡು ವರ್ಷಗಳ ಅಮಾನತು ಶಿಕ್ಷೆ ವಿಧಿಸಿತ್ತು. ಜುಲೈ 14ರಂದು ಈ ಶಿಕ್ಷೆ ಸಂಪೂರ್ಣಗೊಂಡಿತ್ತು.

ಸಿಎಎಸ್‌ಕೆ ಫ್ರ್ಯಾಂಚೈಸ್ ಪದಾಧಿಕಾರಿಯಾಗಿದ್ದ ಗುರುನಾಥ್ ಮೇಯ ಪ್ಪನ್ ಮತ್ತು ರಾಜಸ್ಥಾನ್ ರಾಯಲ್ಸ್ ಫ್ರ್ಯಾಂಚೈಸ್‌ ಸಹಮಾಲೀಕರಾದ ರಾಜ್ ಕುಂದ್ರಾ ಅವರ ಮೇಲೆ ಆಜೀವ ನಿಷೇಧ ಶಿಕ್ಷೆ ವಿಧಿಸಲಾಗಿತ್ತು.

ADVERTISEMENT

‘ಅಮಾನತು ಶಿಕ್ಷೆಯು ಮುಗಿದಿದೆ. ಐಪಿಎಲ್‌ಗೆ ನಾವು ಮರಳಿ ಬರುತ್ತಿದ್ದೇವೆ. 2015ರಲ್ಲಿ ಇದ್ದ ಆಟಗಾರರನ್ನೇ ನಮ್ಮ ತಂಡದಲ್ಲಿ ಮರಳಿ ಸೇರ್ಪಡೆ ಗೊಳಿಸಿಕೊಳ್ಳಲು ಪ್ರಯತ್ನಿಸುತ್ತೇವೆ’ ಎಂದು ಸಿಎಸ್‌ಕೆ ನಿರ್ದೇಶಕರಲ್ಲೊಬ್ಬ ರಾದ ಜಾರ್ಜ್ ಜಾನ್ ತಿಳಿಸಿದ್ದಾರೆ.

2008ರಲ್ಲಿ ಐಪಿಎಲ್ ಆರಂಭವಾದಾಗಿನಿಂದಲೂ ಸಿಎಸ್‌ಕೆ ಮತ್ತು ಆರ್.ಆರ್. ತಂಡಗಳು ಇದ್ದವು.

ಇಂಡಿಯಾ ಸಿಮೆಂಟ್ಸ್‌ ಮಾಲೀಕತ್ವದ ಚೆನ್ನೈ ಸೂಪರ್‌ ಕಿಂಗ್ಸ್ ತಂಡಕ್ಕೆ ಮಹೇಂದ್ರಸಿಂಗ್ ದೋನಿ ನಾಯಕರಾಗಿದ್ದರು.

‘ಸಾಮಾಜಿಕ ಜಾಲತಾಣಗಳಲ್ಲಿ ಈಗಿನಿಂದಲೇ ಪ್ರಚಾರ ಕಾರ್ಯಗಳು ಆರಂಭಗೊಂಡಿವೆ. ಐಪಿಎಲ್‌ನಲ್ಲಿ ನಮ್ಮ ತಂಡವು ಅತಿ ಹೆಚ್ಚು ಬಾರಿ ಪ್ರಶಸ್ತಿ ಗೆದ್ದು ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿತ್ತು’ ಎಂದು ಜಾರ್ಜ್ ಹೇಳಿದ್ದಾರೆ.

‘ಇದುವರೆಗೂ ನಾವು ದೋನಿ ಅವರೊಂದಿಗೆ ಮಾತನಾಡಿಲ್ಲ. ಪುಣೆ ಸೂಪರ್‌ ಜೈಂಟ್ ತಂಡದೊಂದಿಗಿನ ಅವರ ಒಪ್ಪಂದವು ಇದೇ ವರ್ಷ ಮುಗಿಯಲಿದೆ.  ಅವರೊಂದಿಗೆ ಚರ್ಚೆ ನಡೆಸುತ್ತೇವೆ’ ಎಂದಿದ್ದಾರೆ.

ಆದರೆ ಈ ಎರಡೂ ತಂಡಗಳ ಅಮಾನತಿನ ನಂತರ ಐಪಿಎಲ್‌ಗೆ ಸೇರ್ಪಡೆಯಾಗಿದ್ದ ರೈಸಿಂಗ್ ಪುಣೆ ಸೂಪರ್‌ ಜೈಂಟ್ಸ್‌ ಮತ್ತು ಗುಜರಾತ್ ಲಯನ್ಸ್‌ ತಂಡಗಳ ಅವಧಿಯು ಈ ವರ್ಷ ಅಂತ್ಯಗೊಳ್ಳಲಿದೆ. ಎರಡು ವರ್ಷಗಳ ಅವಧಿಗೆ ಫ್ರಾಂಚೈಸ್‌ಗಳು ಐಪಿಎಲ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದವು.

ಸ್ವಾಗತಿಸಿದ ಬಿಸಿಸಿಐ: ‘ಐಪಿಎಲ್‌ಗೆ ಮರಳುತ್ತಿರುವ ಸಿಎಸ್‌ಕೆ ಮತ್ತು ಆರ್‌ಆರ್‌ ತಂಡಗಳನ್ನು ಸ್ವಾಗತಿಸು ತ್ತೇವೆ. ಈ ಎರಡೂ ತಂಡಗಳು ಪುನ ರಾಗಮನದಿಂದ ಐಪಿಎಲ್ ಟೂರ್ನಿಯು ಮತ್ತಷ್ಟು ಶ್ರೀಮಂತಗೊಂಡಿದೆ. ಉಭಯ ತಂಡಗಳಿಗೆ ದೊಡ್ಡ ಪ್ರಮಾ ಣದ ಅಭಿಮಾನಿಗಳ ಬಳಗವಿದೆ. ಅದ ರಿಂದಾಗಿ ಟೂರ್ನಿಯ ಜನಪ್ರಿಯತೆ ಸಾಕಷ್ಟು ಹೆಚ್ಚಲಿದೆ’ ಎಂದು ಬಿಸಿಸಿಐ ಹಂಗಾಮಿ ಅಧ್ಯಕ್ಷ ಸಿ.ಕೆ. ಖನ್ನಾ ಹೇಳಿದ್ದಾರೆ.

‘ಐಪಿಎಲ್‌ಗೆ ಮರಳುತ್ತಿರುವ ಎರಡೂ ತಂಡಗಳಿಗೆ ಸ್ವಾಗತವಿದೆ. ಹನ್ನೊಂದನೆ ಆವೃತ್ತಿಯಲ್ಲಿ ಈ ಎರಡೂ ತಂಡಗಳು ಆಡಿದರೆ ಬಹಳಷ್ಟು ಅಭಿಮಾನಿಗಳು ಸಂಭ್ರಮಿಸಲಿದ್ದಾರೆ’ ಎಂದು ಐಪಿಎಲ್ ಆಡಳಿತ ಮಂಡಳಿ ಅಧ್ಯಕ್ಷ ರಾಜೀವ್ ಶುಕ್ಲಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.