ADVERTISEMENT

ಶಿಸ್ತು ಸಮಿತಿ ರಚಿಸಿದ ಐಬಿಎಫ್

ಬಾಕ್ಸಿಂಗ್: ಆಯ್ಕೆ ಟ್ರಯಲ್ಸ್‌ನಲ್ಲಿ ಮೋಸದ ಆರೋಪ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2013, 19:59 IST
Last Updated 2 ಸೆಪ್ಟೆಂಬರ್ 2013, 19:59 IST

ನವದೆಹಲಿ (ಪಿಟಿಐ): ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ಗೆ ತಂಡ ಆಯ್ಕೆ ಮಾಡಲು ನಡೆಸಿದ ಆಯ್ಕೆ ಟ್ರಯಲ್ಸ್‌ನಲ್ಲಿ ಮೋಸ ನಡೆದಿದೆ ಎಂಬ ಆರೋಪದ ಬಗ್ಗೆ ವಿಚಾರಣೆ ನಡೆಸಲು ಭಾರತ ಬಾಕ್ಸಿಂಗ್ ಫೆಡರೇಷನ್ (ಐಬಿಎಫ್) ಶಿಸ್ತು ಸಮಿತಿ ರಚಿಸಿದೆ.

ಶಿಸ್ತು ಸಮಿತಿಯಲ್ಲಿ ಫೆಡರೇಷನ್‌ನ ಉಪಾಧ್ಯಕ್ಷರಾದ ಐ.ಡಿ.ನಾನಾವತಿ, ನಿರ್ವಾಣ್ ಮುಖರ್ಜಿ ಹಾಗೂ ಐಬಿಎಫ್‌ನ ರಿಂಗ್ ಅಧಿಕಾರಿಗಳ  ಆಯೋಗದ ಮುಖ್ಯಸ್ಥ ನರೋತ್ತಮ ಸಿಂಗ್ ರಾವತ್ ಇದ್ದಾರೆ.

ಕಜಕಸ್ತಾನದ ಅಲ್ಮಟಿಯಲ್ಲಿ ಅಕ್ಟೋಬರ್ 11ರಿಂದ 27ವರೆಗೆ ನಡೆಯಲಿರುವ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ಗೆ ಭಾರತ ತಂಡ ಆಯ್ಕೆ ಮಾಡಲು ಪಟಿಯಾಲದಲ್ಲಿ ಆಯೋಜಿಸಲಾಗಿದ್ದ ಟ್ರಯಲ್ಸ್‌ನಲ್ಲಿ ತಾರತಮ್ಯ ಎಸಗಲಾಗಿದೆ ಎಂದು ಅರ್ಜುನ ಪ್ರಶಸ್ತಿ ಪುರಸ್ಕೃತ ದಿನೇಶ್ ಕುಮಾರ್ (91 ಕೆ.ಜಿ.), ದಿಲ್ಬಾಗ್ ಸಿಂಗ್ (69 ಕೆ.ಜಿ.) ಹಾಗೂ ಪ್ರವೀಣ್ ಕುಮಾರ್ (91 ಕೆ.ಜಿ.) ಆರೋಪಿಸಿದ್ದರು.

`ಮಂಗಳವಾರ ನಡೆಯಲಿರುವ ಸಭೆಯ ಬಳಿಕ ಈ ಮೂವರಿಗೂ ಷೋಕಾಸ್ ನೋಟಿಸ್ ನೀಡಲಾಗುವುದು. ಆ ಬಳಿಕ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು. ಈ ಬಾಕ್ಸರ್‌ಗಳು ಪ್ರಕರಣದ ಬಗ್ಗೆ ನಮಗೆ ಸಂಪೂರ್ಣ ಮಾಹಿತಿ ನೀಡಬೇಕು. ಅಕಸ್ಮಾತ್ ಆರೋಪ ಸುಳ್ಳು ಎಂಬುದು ಗೊತ್ತಾದರೆ ಶಿಕ್ಷೆ ಅನುಭವಿಸಲು ಸಿದ್ಧರಿರಬೇಕು' ಎಂದು ಫೆಡರೇಷನ್‌ನ ಅಧ್ಯಕ್ಷ ಅಭಿಷೇಕ್ ತಿಳಿಸಿದ್ದಾರೆ.

`ಈ ಮೂವರು ಬಾಕ್ಸರ್‌ಗಳನ್ನು ಅಮಾನತಿನಲ್ಲಿಡುವ ಉದ್ದೇಶ ನಮಗಿಲ್ಲ. ಅಕಸ್ಮಾತ್ ಆರೋಪವನ್ನು ಸಾಬೀತುಪಡಿಸಲು ಸಾಧ್ಯವಾಗದಿದ್ದರೆ ಲಿಖಿತವಾಗಿ ಕ್ಷಮೆ ಕೋರಬೇಕು ಹಾಗೂ ಈ ರೀತಿ ಹೇಳಿಕೆ ನೀಡಲು ಕಾರಣರಾದವರು ಯಾರು ಎಂಬುದರ    ಬಗ್ಗೆ ಮಾಹಿತಿ ನೀಡಬೇಕು' ಎಂದೂ ಅವರು ಹೇಳಿದ್ದಾರೆ.

ಈ ಮೂವರು ಬಾಕ್ಸರ್‌ಗಳ ಬದಲಿಗೆ ಏಷ್ಯನ್ ಕ್ರೀಡಾಕೂಟದ ಬೆಳ್ಳಿ ಪದಕ ವಿಜೇತ ಮನ್‌ಪ್ರೀತ್ ಸಿಂಗ್ (91 ಕೆ.ಜಿ), ಏಷ್ಯನ್ ಚಾಂಪಿಯನ್‌ಷಿಪ್ ಬೆಳ್ಳಿ ಪದಕ ವಿಜೇತ ಮನ್‌ದೀಪ್ ಜಾಂಗ್ರಾ ಹಾಗೂ  ರಾಷ್ಟ್ರೀಯ ಹಾಲಿ ಚಾಂಪಿಯನ್ ಸತೀಶ್ (+91 ಕೆ.ಜಿ) ಅವರನ್ನು ಪರಿಗಣಿಗಣಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.