ಮುಂಬೈ (ಪಿಟಿಐ): ಮೊದಲ ಪಂದ್ಯದಲ್ಲಿ ಗೆಲುವಿನ ಸಿಹಿ ಅನುಭವಿಸಿರುವ ಮುಂಬೈ ಇಂಡಿಯನ್ಸ್ ಮತ್ತೊಂದು ಜಯ ಪಡೆಯುವ ವಿಶ್ವಾಸದಲ್ಲಿದೆ. ವಾಂಖೇಡೆ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆಯುವ ಪುಣೆ ವಾರಿಯರ್ಸ್ ವಿರುದ್ಧದ ಪಂದ್ಯ ಇದಕ್ಕೆ ವೇದಿಕೆಯಾಗಿದೆ.
ಉದ್ಘಾಟನಾ ಪಂದ್ಯದಲ್ಲಿ ಬುಧವಾರ ಮುಂಬೈ ಕಳೆದ ಸಲದ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಎದುರು ಎಂಟು ವಿಕೆಟ್‌ಗಳ ಭರ್ಜರಿ ಗೆಲುವು ಪಡೆದಿತ್ತು. ಈ ಗೆಲುವು ಹರಭಜನ್ ಬಳಗಕ್ಕೆ ಸಾಕಷ್ಟು ವಿಶ್ವಾಸ ತಂದು ಕೊಟ್ಟಿದೆ. ಈ ವಿಶ್ವಾಸ ಇನ್ನೊಂದು ಗೆಲುವನ್ನು ತನ್ನದಾಗಿಸಿಕೊಳ್ಳಬೇಕು ಎನ್ನುವ ಕನಸನ್ನೂ ಮೂಡಿಸಿದೆ.
ಮೊದಲ ಪಂದ್ಯದಲ್ಲಿ ಉತ್ತಮ ಬೌಲಿಂಗ್ ಮಾಡಿದ ಮುಂಬೈ ತಂಡದ ವೇಗಿ ಲಸಿತ್ ಮಾಲಿಂಗ, ಕೀರನ್ ಪೊಲಾರ್ಡ್ ಹಾಗೂ ಪ್ರಗ್ಯಾನ್ ಓಜಾ ಬೌಲಿಂಗ್ ಬಲ ಎನಿಸಿದ್ದಾರೆ. ಕೇವಲ 35 ಎಸೆತಗಳಲ್ಲಿ ಅರ್ಧಶತಕ ಗಳಿಸಿ ಗಮನ ಸೆಳೆದ ರಿಚರ್ಡ್ ಲೆವಿ ಚೆನ್ನೈ ವಿರುದ್ಧದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಆದರೆ, ಈ ಪಂದ್ಯದ ವೇಳೆ ಸಚಿನ್ ತೆಂಡೂಲ್ಕರ್ ಬೆರಳಿಗೆ ಗಾಯ ಮಾಡಿಕೊಂಡಿದ್ದಾರೆ.
`ಮೊದಲ ಪಂದ್ಯದಲ್ಲಿ ಚುರುಕಾದ ಬೌಲಿಂಗ್ ಹಾಗೂ ಕ್ಷೇತ್ರ ರಕ್ಷಣೆಯ ಮೂಲಕ ಚೆನ್ನೈ ತಂಡಕ್ಕೆ ಕಡಿವಾಣ ಹಾಕಿದೆವು. ಇದು ನಮ್ಮ ತಂಡದ ಗೆಲುವಿಗೆ ಪ್ರಧಾನ ಕಾರಣವಾಯಿತು. ಎದುರಾಳಿ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕಿದ್ದರಿಂದ ಗೆಲುವು ಸುಲಭವಾಯಿತು~ ಎಂದು ನಾಯಕ ಹರಭಜನ್ ಹೇಳಿದರು.
ಈ ಸಲದ ಟೂರ್ನಿಯಲ್ಲಿ ಮೊದಲ ಪಂದ್ಯ ಆಡುತ್ತಿರುವ ಪುಣೆ ಶುಭಾರಂಭ ಮಾಡುವ ಕಾತರ ಹೊಂದಿದೆ. ಆದರೆ ಪ್ರಮುಖ ಆಟಗಾರರ ಅನುಪಸ್ಥಿತಿ ಈ ತಂಡವನ್ನು ಕಾಡುತ್ತಿದೆ. ನಾಲ್ಕನೇ ಆವೃತ್ತಿಯಲ್ಲಿ ಪುಣೆ ತಂಡವನ್ನು ಮುನ್ನಡೆಸಿದ್ದ ಯುವರಾಜ್ ಸಿಂಗ್ ಈ ಸಲ ಆಡುತ್ತಿಲ್ಲ. ಅವರು ಕ್ಯಾನ್ಸರ್‌ನಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಆದ್ದರಿಂದ ಸೌರವ್ ಗಂಗೂಲಿ ತಂಡವನ್ನು ಮುನ್ನಡೆಸಲಿದ್ದಾರೆ. `ಯುವಿ~ ಕಳೆದ ಸಲ 14 ಪಂದ್ಯಗಳಿಂದ 343 ರನ್ ಗಳಿಸಿ, 9 ವಿಕೆಟ್ ಪಡೆದಿದ್ದರು.
ಯುವರಾಜ್ ಬದಲು ತಂಡದಲ್ಲಿ ಸ್ಥಾನ ಪಡೆದಿರುವ ಆಸ್ಟ್ರೇಲಿಯಾ ತಂಡದ ನಾಯಕ ಮೈಕಲ್ ಕ್ಲಾರ್ಕ್ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯ ನಂತರ, ಏಪ್ರಿಲ್ 27ಕ್ಕೆ ತಂಡವನ್ನು ಸೇರಿಕೊಳ್ಳಲಿದ್ದಾರೆ. ಶ್ರೀಲಂಕಾದ ಆ್ಯಂಜಲೋ ಮ್ಯಾಥೂಸ್ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಆಡುತ್ತಿದ್ದಾರೆ. ಈ ಸರಣಿಯ ನಂತರ ಅವರು ತಂಡಕ್ಕೆ ಬರಲಿದ್ದಾರೆ. ಆದ್ದರಿಂದ ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ಪುಣೆ ಮೊದಲ ಗೆಲುವಿಗಾಗಿ ಹೋರಾಟ ನಡೆಸಬೇಕಿದೆ.
ಗಾಯದ ಕಾರಣದಿಂದ 2011ರ ಐಪಿಎಲ್‌ನಿಂದ ಹೊರಗುಳಿದಿದ್ದ ವೇಗಿ ಆಶಿಶ್ ನೆಹ್ರಾ ಈ ಸಲ ತಂಡಕ್ಕೆ ಲಭ್ಯವಾಗಿದ್ದಾರೆ. ಟ್ವೆಂಟಿ-20ಯಲ್ಲಿ ಪರಿಣತಿ ಹೊಂದಿರುವ ರಾಬಿನ್ ಉತ್ತಪ್ಪ, ಬಾಂಗ್ಲಾದೇಶದ ತಮೀಮ್ ಇಕ್ಬಾಲ್, ಮನೀಷ್ ಪಾಂಡೆ ಪುಣೆ ತಂಡಕ್ಕೆ ಬಲ ತಂದುಕೊಡಬಲ್ಲ ಆಟಗಾರರು.
ತಂಡಗಳು
ಮುಂಬೈ ಇಂಡಿಯನ್ಸ್: ಹರಭಜನ್ ಸಿಂಗ್ (ನಾಯಕ), ಸಚಿನ್ ತೆಂಡೂಲ್ಕರ್, ಅಭಿ ನೆಚಿಮ್, ಅಮಿತೇಜ್ ಸಿಂಗ್, ಏಡನ್ ಬ್ಲಿಜಾರ್ಡ್, ಜೇಮ್ಸ ಫ್ರಾಂಕ್ಲಿನ್, ಕೀರನ್ ಪೊಲಾರ್ಡ್, ಹರ್ಷೆಲ್ ಗಿಬ್ಸ್, ಡೇವಿ ಜೇಕಬ್ಸ್, ರಿಚರ್ಡ್ ಲೆವಿ, ದಿನೇಶ್ ಕಾರ್ತಿಕ್, ಧವಳ್ ಕುಲಕರ್ಣಿ, ಕೆ. ಯಾದವ್, ಲಸಿತ್ ಮಾಲಿಂಗ, ಪ್ರಗ್ಯಾನ್ ಓಜಾ, ಮುನಾಫ್ ಪಟೇಲ್, ರಾಬಿನ್ ಪೀಟರ್ಸನ್, ಸುಜಿತ್ ನಾಯಕ್, ರೋಹಿತ್ ಶರ್ಮ, ರುದ್ರ ಪ್ರತಾಪ್ ಸಿಂಗ್.
ಪುಣೆ ವಾರಿಯರ್ಸ್: ಸೌರವ್ ಗಂಗೂಲಿ (ನಾಯಕ), ಅಶೋಕ್ ದಿಂಡಾ, ಎ. ತ್ರಿವೇದಿ, ರೈಪೆ ಗೋಮೆಜ್, ಹರಪ್ರೀತ್ ಸಿಂಗ್, ಧೀರಜ್ ಯಾದವ್, ಕಮ್ರಾನ್ ಖಾನ್, ಮುರಳಿ ಕಾರ್ತಿಕ್, ಹರ್ಷದ್ ಖಾಡಿವಾಲೆ, ಮಹೇಶ್ ರಾವತ್, ಮಿಥುನ್ ಮನ್ಹಾಸ್, ರಾಹುಲ್ ಶರ್ಮ, ಅಲಿ ಮುರ್ತುಜಾ, ಮೋನಿಶ್ ಮಿಶ್ರಾ, ಆಶಿಶ್ ನೆಹ್ರಾ, ಮನೀಷ್ ಪಾಂಡೆ, ರಾಬಿನ್ ಉತ್ತಪ್ಪ, ವೇಯ್ನ ಪಾರ್ನೆಲ್, ಜೆಸ್ಸಿ ರೈಡರ್, ಮರ್ಲಾನ್ ಸ್ಯಾಮಯೆಲ್ಸ್, ಅಲ್ಪನೊಸೊ ಥಾಮಸ್, ತಮೀಮ್ ಇಕ್ಬಾಲ್, ಶ್ರೀಕಾಂತ್ ವಾಗ್, ಲುಕೆ ರೈಟ್ ಹಾಗೂ ಕಾಲಮ್ ಫರ್ಗ್ಯುಸನ್.
ಪಂದ್ಯ ಆರಂಭ: ಸಂಜೆ 4 ಗಂಟೆಗೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.