ADVERTISEMENT

ಶುಭಾರಂಭದ ನಿರೀಕ್ಷೆಯಲ್ಲಿ ಸನ್‌ರೈಸರ್ಸ್‌

ಇಂದು ಟ್ರಿನಿಡಾಡ್‌ ಆ್ಯಂಡ್‌ ಟೊಬಾಗೊ ಜೊತೆ ಪೈಪೋಟಿ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2013, 19:59 IST
Last Updated 23 ಸೆಪ್ಟೆಂಬರ್ 2013, 19:59 IST

ಮೊಹಾಲಿ (ಪಿಟಿಐ): ಅರ್ಹತಾ ಹಂತದಲ್ಲಿ ಆಡುವ ಮೂಲಕ ಚಾಂಪಿಯನ್ಸ್‌ ಲೀಗ್‌ ಟ್ವೆಂಟಿ-20 ಕ್ರಿಕೆಟ್‌ ಟೂರ್ನಿಗೆ ಅವಕಾಶ ಪಡೆದಿದ್ದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ಮಂಗಳವಾರ ನಡೆಯುವ ತನ್ನ ಮೊದಲ ಪಂದ್ಯದಲ್ಲಿ ಟ್ರಿನಿಡಾಡ್‌ ಆ್ಯಂಡ್‌ ಟೊಬಾಗೊ ವಿರುದ್ಧ ಪೈಪೋಟಿ ನಡೆಸಲಿದೆ.

ಪಂಜಾಬ್‌ ಕ್ರಿಕೆಟ್‌ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿ ಶುಭಾರಂಭ ಮಾಡುವ ಲೆಕ್ಕಾಚಾರವನ್ನು ಶಿಖರ್‌ ಧವನ್‌ ನೇತೃತ್ವದ ತಂಡ ಹೊಂದಿದೆ.

ಸನ್‌ರೈಸರ್ಸ್‌ ತಂಡ ಅರ್ಹತಾ ಹಂತದಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ಎರಡರಲ್ಲಿ ಗೆಲುವು ಪಡೆದಿತ್ತು. ಧವನ್‌ ಅತ್ಯುತ್ತಮ ಆಟ ತೋರಿದ್ದರು. ಆದ್ದರಿಂದ ಇಂದಿನ ಪಂದ್ಯದಲ್ಲೂ ತಂಡ ಬ್ಯಾಟಿಂಗ್‌ನಲ್ಲಿ ಅವರನ್ನೇ ನೆಚ್ಚಿಕೊಂಡಿದೆ.

ಸನ್‌ರೈಸರ್ಸ್‌ ತಂಡ ಅರ್ಹತಾ ಹಂತದಲ್ಲಿ ಆಡಿದ ಹನ್ನೊಂದರ ಬಳಗವನ್ನೇ ಕಣಕ್ಕಿಳಿಸುವ ಸಾಧ್ಯತೆಯಿದೆ.  ಜೆಪಿ ಡುಮಿನಿ, ಕೆಮರಾನ್‌ ವೈಟ್‌ ಮತ್ತು ಡರೆನ್ ಸಮಿ ಮಧ್ಯಮ ಕ್ರಮಾಂಕಕ್ಕೆ ಬಲ ನೀಡಲಿದ್ದಾರೆ.

ದಕ್ಷಿಣ ಆಫ್ರಿಕಾದ ವೇಗಿ ಡೆಲ್‌ ಸ್ಟೇನ್‌ ಬೌಲಿಂಗ್‌ ವಿಭಾಗದ ಆಧಾರಸ್ತಂಭ ಎನಿಸಿದ್ದಾರೆ. ಅಮಿತ್‌ ಮಿಶ್ರಾ ಮತ್ತು ಇಶಾಂತ್‌ ಶರ್ಮ ಕೂಡಾ ಅರ್ಹತಾ ಹಂತದ ಪಂದ್ಯಗಳಲ್ಲಿ ಪ್ರಭಾವಿ ಆಟ ತೋರಿದ್ದರು. ಹೈದರಾಬಾದ್‌ನ ತಂಡ ಅರ್ಹತಾ ಪಂದ್ಯಗಳನ್ನು ಮೊಹಾಲಿ ಕ್ರೀಡಾಂಗಣದಲ್ಲೇ ಆಡಿತ್ತು. ಇದು ಕೂಡಾ ನೆರವಾಗಲಿದೆ.

ಟ್ರಿನಿಡಾಡ್‌ ತಂಡ ಮೊದಲ ಪಂದ್ಯದಲ್ಲಿ ಬ್ರಿಸ್ಬೇನ್‌ ಹೀಟ್‌ ವಿರುದ್ಧ ಗೆಲುವು ಪಡೆದಿತ್ತು. ರವಿ ರಾಂಪಾಲ್‌ ಮತ್ತು ಸುನಿಲ್‌ ನಾರಾಯಣ್‌ ಅವರನ್ನೊಳಗೊಂಡ ಈ ತಂಡದ ಬೌಲಿಂಗ್‌ ವಿಭಾಗ ಬಲಿಷ್ಠವಾಗಿದೆ.

ಕೆರಿಬಿಯನ್‌ ನಾಡಿನ ತಂಡ 2009ರ ಚೊಚ್ಚಲ ಚಾಂಪಿಯನ್ಸ್‌ ಲೀಗ್‌ ಟೂರ್ನಿಯಲ್ಲಿ ಫೈನಲ್‌ ಪ್ರವೇಶಿಸುವ ಮೂಲಕ ಎಲ್ಲರಿಗೂ ಅಚ್ಚರಿ ಉಂಟುಮಾಡಿತ್ತು. ಅಂದು ತೋರಿದ್ದ ಸಾಧನೆಯನ್ನು ಈ ಬಾರಿ ಪುನರಾವರ್ತಿಸುವ ವಿಶ್ವಾಸ ತಂಡಕ್ಕಿದೆ.

ಆದರೆ ಮೊದಲ ಪಂದ್ಯದಲ್ಲಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ್ದು ಟ್ರಿನಿಡಾಡ್‌ ತಂಡದ ಆತಂಕಕ್ಕೆ ಕಾರಣವಾಗಿದೆ. ನಾಯಕ ದಿನೇಶ್‌ ರಾಮ್ದಿನ್‌ ಅವರನ್ನು ಹೊರತುಪಡಿಸಿ ಇತರ ಯಾರೂ ಛಲದ ಆಟ ತೋರಿರಲಿಲ್ಲ. ಲೆಂಡ್ಲ್‌ ಸಿಮನ್ಸ್‌, ಡರೆನ್‌ ಬ್ರಾವೊ ಮತ್ತು ಶೆರ್ವಿನ್‌ ಗಂಗಾ ಅವರಿಂದ ಉತ್ತಮ ಪ್ರದರ್ಶನವನ್ನು ನಿರೀಕ್ಷಿಸುತ್ತಿದೆ.

ಬ್ರಿಸ್ಬೇನ್‌ ಎದುರಾಳಿ ಟೈಟಾನ್ಸ್‌: ಪಿಸಿಎ ಕ್ರೀಡಾಂಗಣದಲ್ಲಿ ಸಂಜೆ ನಡೆಯಲಿರುವ ಪಂದ್ಯದಲ್ಲಿ ಬ್ರಿಸ್ಬೇನ್‌ ಹೀಟ್‌ ಮತ್ತು ಟೈಟಾನ್ಸ್‌ ತಂಡಗಳು ಎದುರಾಗಲಿವೆ.

ಇವೆರಡು ತಂಡಗಳು ಮೊದಲ ಪಂದ್ಯದಲ್ಲಿ ಸೋಲು ಅನುಭವಿಸಿದ್ದವು.  ಆಸ್ಟ್ರೇಲಿಯದ ಬ್ರಿಸ್ಬೇನ್‌ ಹೀಟ್‌ ತಂಡ  ಟ್ರಿನಿಡಾಡ್‌ ಅಂಡ್‌ ಟೊಬಾಗೊ ಎದುರು 25 ರನ್‌ಗಳ ಸೋಲು ಅನುಭವಿಸಿದ್ದರೆ, ಟೈಟಾನ್ಸ್‌ ತಂಡ ಚೆನ್ನೈ ಸೂಪರ್ ಕಿಂಗ್ಸ್‌ ಕೈಯಲ್ಲಿ 4 ವಿಕೆಟ್‌ಗಳ ನಿರಾಸೆ ಅನುಭವಿಸಿತ್ತು. ಟೈಟಾನ್ಸ್‌ 185 ರನ್‌ಗಳ ಉತ್ತಮ ಮೊತ್ತ ಪೇರಿಸಿದ್ದರೂ, ಬೌಲಿಂಗ್‌ ವೈಫಲ್ಯದಿಂದಾಗಿ ಸೋಲು ಅನುಭವಿಸಿತ್ತು.

ಇಂದಿನ ಪಂದ್ಯಗಳು

ಬ್ರಿಸ್ಬೇನ್‌ ಹೀಟ್‌- ಟೈಟಾನ್ಸ್‌
ಸ್ಥಳ: ಮೊಹಾಲಿ, ಆರಂಭ: ಸಂಜೆ 4.00ಕ್ಕೆ

ಸನ್‌ರೈಸರ್ಸ್‌ ಹೈದರಾಬಾದ್‌- ಟ್ರಿನಿಡಾಡ್‌ ಆ್ಯಂಡ್‌ ಟೊಬಾಗೊ
ಸ್ಥಳ: ಮೊಹಾಲಿ, ಆರಂಭ: ರಾತ್ರಿ 8.00ಕ್ಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.