ADVERTISEMENT

ಶ್ರೀನಿವಾಸನ್‌ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2013, 19:59 IST
Last Updated 25 ಸೆಪ್ಟೆಂಬರ್ 2013, 19:59 IST

ನವದೆಹಲಿ (ಪಿಟಿಐ):  ಬಿಸಿಸಿಐ ಅಧ್ಯಕ್ಷ ಎನ್‌.ಶ್ರೀನಿವಾಸನ್‌ ವಿರುದ್ಧ ಲಲಿತ್‌ ಮೋದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾರತದ ಕ್ರಿಕೆಟ್‌ ನಾಶಪಡಿಸಲು ಶ್ರೀನಿವಾಸನ್‌ಗೆ ಅವಕಾಶ ನೀಡುವುದಿಲ್ಲ ಎಂದಿದ್ದಾರೆ.

‘ಇವತ್ತು ಮಂಡಳಿಯ ದಿನವಾಗಿರಬಹುದು. ಆದರೆ ಅಂತಿಮ ನಿರ್ಧಾರ ನನ್ನದು. ನಾನು ಎಲ್ಲಿಗೂ ಹೋಗುವುದಿಲ್ಲ. ಇಲ್ಲೇ ಇದ್ದು ಹೋರಾಡುತ್ತೇನೆ’ ಎಂದು ಆಜೀವ ನಿಷೇಧಕ್ಕೆ ಒಳಗಾಗಿರುವ ಮೋದಿ ಲಂಡನ್‌ನಿಂದ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಖಡಕ್ಕಾಗಿ ನುಡಿದಿದ್ದಾರೆ.

‘ಲೀಗ್‌ ಸೃಷ್ಟಿಗೆ ಕಾರಣವಾದ ವ್ಯಕ್ತಿಯ ಮೇಲೆ ನಿಷೇಧ ಹೇರಿದ್ದಾರೆ. ಆದರೆ ಕಳ್ಳಾಟವಾಡಲು ಪ್ರೋತ್ಸಾಹಿಸುತ್ತಾ ಮಂಡಳಿ ಕಾರ್ಯಚಟುವಟಿಕೆ ನಡೆಸುತ್ತಿರುವ ವ್ಯಕ್ತಿಗಳನ್ನು ಸದಸ್ಯರು ರಕ್ಷಿಸುತ್ತಿದ್ದಾರೆ’ ಎಂದು ಕಿಡಿಕಾರಿದ್ದಾರೆ.

‘ಐಪಿಎಲ್‌ ಬ್ರ್ಯಾಂಡ್‌ ಎಲ್ಲರಿಗಿಂತ ದೊಡ್ಡದು. ಆದರೆ ನನ್ನ ಹೆಸರು ಐಪಿಎಲ್‌ನೊಂದಿಗೆ ಬೆಸೆದುಕೊಂಡಿದೆ. ಐಪಿಎಲ್‌ ಸೃಷ್ಟಿಕರ್ತ ನಾನು. ಇದೊಂದು ಕಷ್ಟಕರ ಕನಸಾಗಿತ್ತು. ಅದನ್ನು  ನಾನು ನನಸು ಮಾಡಿದ್ದೆ. ಬಿಸಿಸಿಐಗೆ ಎಂಟು ಬಿಲಿಯನ್‌ ಡಾಲರ್‌ ಆದಾಯ ತಂದುಕೊಟ್ಟೆ’ ಎಂದಿದ್ದಾರೆ.

‘ಐಪಿಎಲ್‌ನಿಂದ ನನ್ನನ್ನು ಹೊರಹಾಕಿದ ಮೇಲೆ ಎರಡು ಫ್ರಾಂಚೈಸ್‌ಗಳು (ಡೆಕ್ಕನ್‌ ಚಾರ್ಜರ್ಸ್‌ ಹಾಗೂ ಕೊಚ್ಚಿ ಟಸ್ಕರ್ಸ್) ಒಪ್ಪಂದ ಕಡಿದುಕೊಂಡವು. ಬಿಸಿಸಿಐ ಸುಮಾರು 700 ಮಿಲಿಯನ್‌ ಡಾಲರ್‌ ಹಣ ನಷ್ಟ ಅನುಭವಿಸಿತು. ಅವರ ತಾಳಕ್ಕೆ ಕುಣಿಯಲು ಒಪ್ಪದಿದ್ದಾಗ ನನ್ನ ಮೇಲೆ ಹಣಕಾಸಿನ ಅವ್ಯವಹಾರ ಆರೋಪ ಹೊರಿಸಿದರು’ ಎಂದು ಮೋದಿ ಟೀಕಾ ಪ್ರಹಾರ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.