ADVERTISEMENT

ಶ್ರೀರಾಮ್ ಸರ್ಜಾ ಚಾಂಪಿಯನ್

ರಾಜ್ಯ 25 ವರ್ಷದ ಒಳಗಿನವರ ಚೆಸ್

​ಪ್ರಜಾವಾಣಿ ವಾರ್ತೆ
Published 7 ಜುಲೈ 2013, 19:59 IST
Last Updated 7 ಜುಲೈ 2013, 19:59 IST
ದಾವಣಗೆರೆಯಲ್ಲಿ ಭಾನುವಾರ ಮುಕ್ತಾಯಗೊಂಡ 25 ವರ್ಷದ ಒಳಗಿನವರ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ಮೊದಲ ನಾಲ್ಕು ಸ್ಥಾನಗಳನ್ನು ಪಡೆದುಕೊಂಡ ಶ್ರೀರಾಮ್ ಸರ್ಜಾ, ಎ.ಬಾಲಕಿಶನ್, ಎ.ಆಗಸ್ಟಿನ್ ಹಾಗೂ ಕೇದಾರ್ ಉಮೇಶ್ ವಝೆ.
ದಾವಣಗೆರೆಯಲ್ಲಿ ಭಾನುವಾರ ಮುಕ್ತಾಯಗೊಂಡ 25 ವರ್ಷದ ಒಳಗಿನವರ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ಮೊದಲ ನಾಲ್ಕು ಸ್ಥಾನಗಳನ್ನು ಪಡೆದುಕೊಂಡ ಶ್ರೀರಾಮ್ ಸರ್ಜಾ, ಎ.ಬಾಲಕಿಶನ್, ಎ.ಆಗಸ್ಟಿನ್ ಹಾಗೂ ಕೇದಾರ್ ಉಮೇಶ್ ವಝೆ.   

ದಾವಣಗೆರೆ: ಅಗ್ರ ಶ್ರೇಯಾಂಕದ ಶ್ರೀರಾಮ್ ಸರ್ಜಾ ಅಜೇಯ ಸಾಧನೆಯೊಡನೆ ಭಾನುವಾರ ಮುಕ್ತಾಯಗೊಂಡ  25 ವರ್ಷದ ಒಳಗಿನವರ ರಾಜ್ಯ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡರು.

ಅಭಿನವ ರೇಣುಕಾ ಮಂದಿರದಲ್ಲಿ ನಡೆದ 9 ಸುತ್ತುಗಳ ಈ ಚಾಂಪಿಯನ್‌ಷಿಪ್‌ನಲ್ಲಿ ತೀರ್ಥಹಳ್ಳಿಯ ಸರ್ಜಾ 8 ಪಾಯಿಂಟ್ ಸಂಗ್ರಹಿಸಿದರು.ಕಳೆದ ಬಾರಿಯ ಚಾಂಪಿಯನ್ ಬೆಂಗಳೂರಿನ ಎ.ಬಾಲಕಿಶನ್ ಕೂಡ 8 ಪಾಯಿಂಟ್ ಸಂಗ್ರಹಿಸಿದರೂ, ಟೈ ಬ್ರೇಕರ್ ಆಧಾರದ ಮೇಲೆ ಎರಡನೇ ಸ್ಥಾನಕ್ಕೆ ಸರಿಯಬೇಕಾಯಿತು.

ಎರಡು ವರ್ಷಗಳ ಹಿಂದೆ ಚಾಂಪಿಯನ್ ಆಗಿದ್ದ ಕೊಡಗಿನ ಎ.ಆಗಸ್ಟಿನ್ 7.5 ಪಾಯಿಂಟ್‌ಗಳೊಡನೆ ಮೂರನೇ ಸ್ಥಾನ ಪಡೆದರು. ಶಿವಮೊಗ್ಗದ ಕೇದಾರ್ ಉಮೇಶ್ ವಝೆ, ಮಂಗಳೂರಿನ ಆಂಡ್ರಿಯಾ ಡಿಸೋಜಾ, ದಾವಣಗೆರೆಯ ಲಿಖಿತ್ ಚಿಲುಕುರಿ, ಬೆಂಗಳೂರಿನ ಅಮಿತ್.ಎ ತಲಾ 7 ಪಾಯಿಂಟ್ ಗಳಿಸಿದರೂ, ಟೈ ಬ್ರೇಕ್ ಆಧಾರದಲ್ಲಿ ಕ್ರಮವಾಗಿ ನಾಲ್ಕರಿಂದ 7ರವರೆಗಿನ ಸ್ಥಾನಗಳನ್ನು ಪಡೆದರು.

ಮೊದಲ ನಾಲ್ಕು ಸ್ಥಾನ ಪಡೆದ ಆಟಗಾರರು ಕೇರಳದಲ್ಲಿ ಅಕ್ಟೋಬರ್‌ನಲ್ಲಿ ನಡೆಯಲಿರುವ ರಾಷ್ಟ್ರೀಯ 25 ವರ್ಷದೊಳಗಿನವರ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವ ಅರ್ಹತೆ ಪಡೆದರು. 9ನೇ ಹಾಗೂ ಅಂತಿಮ ಸುತ್ತಿನಲ್ಲಿ ಶ್ರೀರಾಮ್ ಸರ್ಜಾ 22 ನಡೆಗಳ ನಂತರ ಕಿಶನ್ ಗಂಗೊಳ್ಳಿ(6.5) ಜತೆ ಡ್ರಾ ಮಾಡಿಕೊಂಡರು. ಮೊದಲ ಬೋರ್ಡ್‌ನಲ್ಲಿ  ಬಾಲಕಿಶನ್ ಗೆಲುವಿಗೆ ಪ್ರಯತ್ನ ನಡೆಸಿರೂ ಬಿಳಿ ಕಾಯಿಗಳಲ್ಲಿ ಆಡಿದ ಎ.ಅಗಸ್ಟಿನ್ ಎದುರು ಪಾಯಿಂಟ್ ಹಂಚಿಕೊಳ್ಳುವುದಕ್ಕೆ ತೃಪ್ತಿ ಪಡಬೇಕಾಯಿತು.

ಕೇದಾರ್ ಮತ್ತು ಬೆಂಗಳೂರಿನ ಓಜಸ್ ಕುಲಕರ್ಣಿ (6.5) ಜತೆ; ಶಿವಮೊಗ್ಗದ ಅಜಯ್ (6.5), ಶಿವಮೊಗ್ಗದ ಆರ್ ಶ್ರೀಧರ್ (6.5) ಜತೆ ಡ್ರಾ ಮಾಡಿಕೊಂಡರು. ಆಂಡ್ರಿಯಾ ಡಿಸೋಜಾ ಮತ್ತು ಎ ಅಮಿತ್ ಕ್ರಮವಾಗಿ ಪ್ರತೀಕ್ ಹೆಗಡೆ (6) ಮತ್ತು ಬಿ.ನರೇಶ್ (6) ವಿರುದ್ಧ ಜಯ ಗಳಿಸಿದರು.ನ್ಯೂ ದಾವಣಗೆರೆ ಚೆಸ್ ಅಸೋಸಿಯೇಷನ್ ಆಶ್ರಯದಲ್ಲಿ ನಡೆದ ಈ ಕೂಟದಲ್ಲಿ 122 ಆಟಗಾರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.