ADVERTISEMENT

ಶ್ರೀಶಾಂತ್‌, ಅಂಕಿತ್‌ಗೆ ಆಜೀವ ನಿಷೇಧ

ಐಪಿಎಲ್‌ ಸ್ಪಾಟ್‌ ಫಿಕ್ಸಿಂಗ್‌: ಕೊನೆಗೂ ಕಠಿಣ ಕ್ರಮ ಕೈಗೊಂಡ ಬಿಸಿಸಿಐ ಶಿಸ್ತು ಸಮಿತಿ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2013, 19:59 IST
Last Updated 13 ಸೆಪ್ಟೆಂಬರ್ 2013, 19:59 IST

ನವದೆಹಲಿ (ಪಿಟಿಐ/ಐಎಎನ್‌ಎಸ್‌):;  ಐಪಿಎಲ್‌ ಆರನೇ ಆವೃತ್ತಿಯ ವೇಳೆ ಸ್ಪಾಟ್‌ ಫಿಕ್ಸಿಂಗ್‌ ನಡೆಸಿದ ರಾಜಸ್ತಾನ ರಾಯಲ್ಸ್‌ ತಂಡದ ವೇಗಿ ಎಸ್‌. ಶ್ರೀಶಾಂತ್‌ ಮತ್ತು ಅಂಕಿತ್‌ ಚವಾಣ್‌ ವಿರುದ್ಧ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ ಕೊನೆಗೂ ಕಠಿಣ ಕ್ರಮ ಕೈಗೊಂಡಿದ್ದು, ಇಬ್ಬರೂ ಆಟಗಾರರ ಮೇಲೆ ಆಜೀವ ನಿಷೇಧ ಹೇರಿದೆ.

ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದ್ದ ಬಿಸಿಸಿಐ ಶಿಸ್ತು ಸಮಿತಿ ಸಭೆ ಶುಕ್ರವಾರ ಮಹತ್ವದ ಈ ನಿರ್ಧಾರ ತೆಗೆದುಕೊಂಡಿತು.  ಈ ಪ್ರಕರಣದಲ್ಲಿ ಕಳಂಕ ಹೊತ್ತಿರುವ ಅಮಿತ್‌ ಸಿಂಗ್‌ಗೆ ಐದು ವರ್ಷ ಮತ್ತು ಗುಜರಾತ್‌ನ ಸಿದ್ದಾರ್ಥ್‌ ತ್ರಿವೇದಿಗೆ ಒಂದು ವರ್ಷ ನಿಷೇಧ ಶಿಕ್ಷೆ ಹೇರಲಾಗಿದೆ.  ಎನ್‌. ಶ್ರೀನಿವಾಸನ್‌ ಅಧ್ಯಕ್ಷತೆಯಲ್ಲಿ ಈ ಸಭೆ ನಡೆಯಿತು.

ರಾಯಲ್ಸ್‌ ತಂಡದ ಮಾಜಿ ಆಟಗಾರ ಹಾಗೂ ಎಡಗೈ ಸ್ಪಿನ್ನರ್‌ ಹರ್ಮಿತ್‌ ಸಿಂಗ್‌ಗೆ ಎಚ್ಚರಿಕೆ ನೀಡಿ ಅವರನ್ನು ಖುಲಾಸೆ ಗೊಳಿಸಲಾಗಿದೆ. ದಾಖಲೆಗಳು ಲಭ್ಯವಾಗದ ಕಾರಣ ಹರ್ಮಿತ್‌ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಸ್ಪಾಟ್‌ ಫಿಕ್ಸಿಂಗ್‌ನಲ್ಲಿ ಭಾಗಿಯಾದ ಇನ್ನೊಬ್ಬ ಆಟಗಾರ ರಾಯಲ್ಸ್‌ ತಂಡದ ಅಜಿತ್‌ ಚಾಂಡಿಲ ಮೇಲೆ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು. ಈ ಕುರಿತು ಇನ್ನಷ್ಟು ವಿಚಾರಣೆ ನಡೆಯಲಿದೆ ಎಂದು ಬಿಸಿಸಿಐ ಶಿಸ್ತು ಸಮಿತಿ ತಿಳಿಸಿದೆ. ಅಜಿತ್‌ ಚಾಂಡಿಲ ಸದ್ಯಕ್ಕೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.

‘ಸ್ಪಾಟ್‌ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿ ಕ್ರಿಕೆಟ್‌ಗೆ ಕಳಂಕ ತಂದಿರುವ ಶ್ರೀಶಾಂತ್‌ ಮತ್ತು ಅಂಕಿತ್‌ ಚವಾಣ್‌ ಮೇಲೆ ಆಜೀವ ನಿಷೇಧ ಶಿಕ್ಷೆ ಹೇರುವ ತೀರ್ಮಾನ ಕೈಗೊಳ್ಳಲಾಯಿತು’ ಎಂದು ಬಿಸಿಸಿಐ ಉಪಾಧ್ಯಕ್ಷ ನಿರಂಜನ್‌ ಷಾ ಸಭೆಯ ಬಳಿಕ ಮಾಧ್ಯಮದವರಿಗೆ ತಿಳಿಸಿದರು.
‘ನಿಷೇಧ ಹೇರಲಾಗಿರುವ ಇಬ್ಬರೂ ಆಟಗಾರರ ವಿರುದ್ಧ ದಾಖಲೆಗಳು ಲಭ್ಯವಾಗಿವೆ. ರವಿ ಸವಾನಿ ನೀಡಿರುವ ವರದಿಯ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ. ಇದನ್ನು ಈ ತಿಂಗಳ ಅಂತ್ಯದಲ್ಲಿ ನಡೆಯಲಿರುವ ವಾರ್ಷಿಕ ಸಾಮಾನ್ಯ ಸಭೆ ಅಥವಾ ಯಾವುದೇ ಸಭೆಯಲ್ಲಿ ಈ ಕುರಿತು ಅನುಮೋದನೆ ಪಡೆಯುವ ಅಗತ್ಯವಿಲ್ಲ. ಬಿಸಿಸಿಐ ಕೈಗೊಂಡಿರುವ ಈ ನಿರ್ಧಾರವೇ ಅಂತಿಮ’ ಎಂದು ಬಿಸಿಸಿಐ ಉಪಾಧ್ಯಕ್ಷ ಅರುಣ್‌ ಜೇಟ್ಲಿ ಹೇಳಿದರು.

ಐಪಿಎಲ್ ಸ್ಪಾಟ್‌ ಫಿಕ್ಸಿಂಗ್‌ನಲ್ಲಿ ಆಟಗಾರರು ಭಾಗಿಯಾದ ಆರೋಪ ಕೇಳಿ ಬಂದಾಗ ಬಿಸಿಸಿಐ ರವಿ ಸವಾನಿ ನೇತೃತ್ವದ ಏಕವ್ಯಕ್ತಿ ತನಿಖಾ ಆಯೋಗವನ್ನು ರಚಿಸಿತ್ತು. ಕಳೆದ ತಿಂಗಳು ಕೋಲ್ಕತ್ತದಲ್ಲಿ ನಡೆದ ಸಭೆಯಲ್ಲಿ ಸವಾನಿ ವರದಿ ಸಲ್ಲಿಸಿದ್ದರು. ‘ಆಟಗಾರರನ್ನು ತನಿಖೆಗೆ ಒಳಪಡಿಸಿ ಹಾಗೂ ಲಭಿಸಿದ ದಾಖಲೆಗಳನ್ನು ಪರಿಶೀಲಿಸಿ ಈ ಕ್ರಮ ಕೈಗೊಳ್ಳಲಾಗಿದೆ. ಸಿದ್ಧಾರ್ಥ್‌ ತ್ರಿವೇದಿಗೆ ಒಂದು ವರ್ಷದ ಅವಧಿಗೆ ನಿಷೇಧ ಶಿಕ್ಷೆ ಹೇರಲಾಗಿದೆ. ಈ ಅವಧಿಯಲ್ಲಿ ಯಾವುದೇ ಟೂರ್ನಿಯಲ್ಲಿ ಅವರು ಆಡುವಂತಿಲ್ಲ ಬಿಸಿಸಿಐನಿಂದ ಮಾನ್ಯತೆ ಹೊಂದಿದ ಕ್ರಿಕೆಟ್‌ ಸಂಸ್ಥೆಗಳ ಟೂರ್ನಿಗಳಲ್ಲಿ ಪಾಲ್ಗೊಳ್ಳುವಂತಿಲ್ಲ’ ಎಂದು ಬಿಸಿಸಿಐ ಕಾರ್ಯದರ್ಶಿ ಸಂಜಯ್‌ ಪಟೇಲ್‌ ತಿಳಿಸಿದರು.

‘ಶಿಸ್ತು ಸಮಿತಿ ನನ್ನ ವರದಿಯನ್ನು ಅಧ್ಯಯನ ನಡೆಸಿದೆ. ಆಟಗಾರರು ಕಳ್ಳಾಟದಲ್ಲಿ  ಭಾಗಿಯಾಗಿದ್ದು ಭಾರತದ ಕೋಟ್ಯಂತರ ಕ್ರಿಕೆಟ್‌ ಪ್ರಿಯರಿಗೆ ಆಘಾತ ಉಂಟು ಮಾಡಿತ್ತು. ಕಳ್ಳಾಟದಲ್ಲಿ ಭಾಗಿಯಾಗದಂತೆ ಆಟಗಾರರಿಗೆ ತಿಳಿ ಹೇಳಬೇಕು. ಅವರಿಗೆ ಶಿಕ್ಷಣ ನೀಡಬೇಕು’ ಎಂದು ಸವಾನಿ ನುಡಿದರು. ಸ್ಪಾಟ್‌ ಫಿಕ್ಸಿಂಗ್‌ ಪ್ರಕರಣ ಬಯಲಿಗೆ ಬಂದಾಗ ರಾಯಲ್ಸ್‌ ತಂಡದ ಮೂವರು ಆಟಗಾರರು ಮತ್ತು 11 ಬುಕ್ಕಿಗಳನ್ನು ಬಂಧಿಸಲಾಗಿತ್ತು. ನಂತರ ಬಿಸಿಸಿಐ   ಇಂತಹ ಘಟನೆಗಳನ್ನು ತಡೆಯಲು ಕ್ರಮ ಕೈಗೊಂಡಿತ್ತು. ಈ ಘಟನೆ ನಡೆದ ಆರಂಭದಲ್ಲಿ ಬಿಸಿಸಿಐ ಸಾಕಷ್ಟು ಮುಜುಗರಕ್ಕೆ ಒಳಗಾಗಿತ್ತು.

ಸಭೆ ಅಧ್ಯಕ್ಷತೆ ವಹಿಸಿದ್ದ ಶ್ರೀನಿವಾಸನ್‌
ನವದೆಹಲಿ (ಐಎಎನ್‌ಎಸ್‌): ಬಿಸಿಸಿಐ ಶಿಸ್ತು ಸಮಿತಿಯ ಸಭೆಗೆ ಎನ್‌. ಶ್ರೀನಿವಾಸನ್ ಅಧ್ಯಕ್ಷತೆ ವಹಿಸಿದ್ದರು. ಸ್ಪಾಟ್‌ ಫಿಕ್ಸಿಂಗ್‌ ಮತ್ತು ಬೆಟ್ಟಿಂಗ್‌ ಪ್ರಕರಣದಲ್ಲಿ ಶ್ರೀನಿವಾಸನ್‌ ಅಳಿಯ ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ‘ಸಿಇಒ’ ಗುರುನಾಥನ್‌ ಮೇಯಪ್ಪನ್‌ ಅವರನ್ನು ಪೊಲೀಸರು ಬಂಧಿಸಿದ್ದ ಕಾರಣ ಅವರು ಮಂಡಳಿಯ ಕಾರ್ಯ ಚಟುವಟಿಕೆಗಳಿಂದ ಹಿಂದೆ ಸರಿದಿದ್ದರು. ಅವರ ಬದಲಾಗಿ ಜಗಮೋಹನ್‌ ದಾಲ್ಮಿಯ ಅವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು.

ಇದರ ಜೊತೆಗೆ ಸ್ಪಾಟ್‌ ಫಿಕ್ಸಿಂಗ್‌ ಪ್ರಕರಣ ಕುರಿತು ತನಿಖೆ ನಡೆಸಲು ರಚಿಸಲಾಗಿರುವ ಆಂತರಿಕ ತನಿಖಾ ಆಯೋಗವನ್ನು ಬಾಂಬೆ ಹೈಕೋರ್ಟ್‌ ಅಸಾಂವಿಧಾನಿಕ ಮತ್ತು ಕಾನೂನು ಬಾಹಿರ ಎಂದು ಹೇಳಿದೆ. ಈ ತೀರ್ಪನ್ನು ಪ್ರಶ್ನಿಸಿ ಬಿಸಿಸಿಐ ಸುಪ್ರೀಂಕೋರ್ಟ್‌ ಮೊರೆ ಹೋಗಿದೆ. ಹೀಗಿರುವಾಗಲೂ ಶ್ರೀನಿವಾಸನ್‌ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಶುಕ್ರವಾರ ಬೆಳಿಗ್ಗೆ ಸಭೆ ಆರಂಭವಾಗುವ ಕೊಂಚ ಹೊತ್ತಿನ ಮುನ್ನ ಶ್ರೀನಿವಾಸನ್‌ ಇಲ್ಲಿಗೆ ಬಂದರು. ‘ಶಿಸ್ತು ಸಮಿತಿ ಸಭೆ ಅಧ್ಯಕ್ಷತೆಯನ್ನು ನಾನೇ ವಹಿಸುತ್ತೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT