ADVERTISEMENT

ಶ್ರೀಶಾಂತ್‌ ಪ್ರಕರಣ: ಶೀಘ್ರ ನಿರ್ಧಾರಕ್ಕೆ ಸೂಚನೆ

ಪಿಟಿಐ
Published 15 ಮೇ 2018, 19:30 IST
Last Updated 15 ಮೇ 2018, 19:30 IST
ಎಸ್‌.ಶ್ರೀಶಾಂತ್‌
ಎಸ್‌.ಶ್ರೀಶಾಂತ್‌   

ನವದೆಹಲಿ: ಐಪಿಎಲ್‌ ಸ್ಪಾಟ್‌ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದ ಮೇಲ್ಮನವಿ ಕುರಿತು ಶೀಘ್ರ ನಿರ್ಧಾರ ಕೈಗೊಳ್ಳಬೇಕು ಎಂದು ದೆಹಲಿ ನ್ಯಾಯಾಲಯಕ್ಕೆ ಸುಪ್ರೀಂ ಕೋರ್ಟ್‌ ಮಂಗಳವಾರ ಸೂಚಿಸಿದೆ.

2013ರಲ್ಲಿ ನಡೆದಿದೆ ಎನ್ನಲಾದ ಸ್ಪಾಟ್‌ ಫಿಕ್ಸಿಂಗ್ ಹಗರಣದಲ್ಲಿ 36 ಮಂದಿಯ ಮೇಲೆ ಆರೋಪ ಹೊರಿಸಲಾಗಿತ್ತು. ಎಸ್‌.ಶ್ರೀಶಾಂತ್, ಅಜಿತ್ ಚಾಂಡಿಲಾ ಮತ್ತು ಅಂಕಿತ್ ಚೌಹಾಣ್‌ ಅವರನ್ನು ದೆಹಲಿ ಪೊಲೀಸರು 2013ರಲ್ಲಿ ಬಂಧಿಸಿದ್ದರು.

ನ್ಯಾಯಾಲಯವು 2015ರಲ್ಲಿ ಈ ಮೂವರನ್ನು ಆರೋಪಮುಕ್ತಗೊಳಿಸಿತ್ತು. ನಂತರ ಶ್ರೀಶಾಂತ್ ಅವರ ಮೇಲೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಜೀವ ನಿಷೇಧ ಹೇರಿತ್ತು. ಇದನ್ನು ಕೇರಳ ಹೈಕೋರ್ಟ್ ಕಳೆದ ವರ್ಷದ ಆಗಸ್ಟ್‌ನಲ್ಲಿ ತೆರವುಗೊಳಿಸಿತ್ತು.

ADVERTISEMENT

ನಂತರ ಬಿಸಿಸಿಐ ಮನವಿಯನ್ನು ಪುರಸ್ಕರಿಸಿದ್ದ ದೆಹಲಿ ಹೈಕೋರ್ಟ್‌ನ ವಿಭಾಗೀಯ ಪೀಠ ನಿಷೇಧವನ್ನು ಎತ್ತಿಹಿಡಿದಿತ್ತು. ಇದನ್ನು ಪ್ರಶ್ನಿಸಿ ಅವರು ಮೇಲ್ಮನವಿ ಸಲ್ಲಿಸಿದ್ದರು. ಇಂಗ್ಲಿಷ್ ಕೌಂಟಿ ಕ್ರಿಕೆಟ್‌ ಆಡಲು ಶ್ರೀಶಾಂತ್‌ಗೆ ಬಿಸಿಸಿಐ ನಿರಾಕ್ಷೇಪಣಾ ಪತ್ರ ನೀಡಿರಲಿಲ್ಲ. ಹೀಗಾಗಿ ಮಧ್ಯಂತರ ನಿರ್ದೇಶನ ನೀಡುವಂತೆ ಅವರು ಸುಪ್ರೀಂ ಕೋರ್ಟ್ ಅನ್ನು ಕೋರಿದ್ದರು.

ಮಂಗಳವಾರ ಈ ಕುರಿತು ನಿರ್ದೇಶನ ನೀಡಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ‘ಕ್ರಿಕೆಟ್ ಆಡಲು ಆಟಗಾರನ ಮನಸ್ಸು ತುಡಿಯುತ್ತಿದೆ ಎಂಬುದು ನ್ಯಾಯಾಲಯಕ್ಕೆ ತಿಳಿದಿದೆ. ಆದರೆ ಹೈಕೋರ್ಟ್ ಆದೇಶ ಬಾರದೆ ಏನೂ ಮಾಡಲಾಗದು. ಆದ್ದರಿಂದ ಮೇ ಅಂತ್ಯದೊಳಗೆ ಸೂಕ್ತ ನಿರ್ಧಾರ ಕೈಗೊಳ್ಳಬೇಕು’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.