ADVERTISEMENT

ಶ್ರೇಯಲ್, ಅರ್ಚನಾಗೆ ಪ್ರಶಸ್ತಿ

ರಾಜ್ಯ ರ‍್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿ

​ಪ್ರಜಾವಾಣಿ ವಾರ್ತೆ
Published 23 ಜೂನ್ 2013, 19:59 IST
Last Updated 23 ಜೂನ್ 2013, 19:59 IST

ಮೈಸೂರು: ಬೆಂಗಳೂರಿನ ಬಿಎನ್‌ಎಂ ಕ್ಲಬ್‌ನ ಶ್ರೇಯಲ್ ಕೆ. ತೆಲಂಗ್ ಮತ್ತು ಎಂಟಿಟಿಎದ ಅರ್ಚನಾ ಕಾಮತ್ ಪಿರಿಯಾಪಟ್ಟಣ ತಾಲ್ಲೂಕಿನ ಗುಡ್ಡೇನಹಳ್ಳಿಯ  ನಳಂದ ಗುರುಕುಲದಲ್ಲಿ  ನಡೆದ ರಾಜ್ಯ ರ‌್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಭಾನುವಾರ ಪ್ರಶಸ್ತಿ `ಡಬಲ್' ಸಾಧನೆ ಮಾಡಿದರು. ಇದರೊಂದಿಗೆ ಟೂರ್ನಿಯಲ್ಲಿ ಇವರಿಬ್ಬರೂ ಒಟ್ಟು ಮೂರು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು.

ಮೈಸೂರು ಟೇಬಲ್ ಟೆನಿಸ್ ಸಂಸ್ಥೆಯ ಆಶ್ರಯದಲ್ಲಿ ನಡೆದ ಟೂರ್ನಿಯ ಕೊನೆಯ ದಿನ ಶ್ರೇಯಲ್ ಪುರುಷ ಮತ್ತು ಯೂತ್ ಬಾಲಕರ ವಿಭಾಗದ ಪ್ರಶಸ್ತಿ ಗೆದ್ದರು. ಅವರು ಶನಿವಾರ ಜೂನಿಯರ್ ಬಾಲಕರ ವಿಭಾಗದ ಪ್ರಶಸ್ತಿ ಗಳಿಸಿದ್ದರು. ಟೂರ್ನಿಯಲ್ಲಿ ಸಬ್ ಜೂನಿಯರ್ ಬಾಲಕಿಯರ ಪ್ರಶಸ್ತಿ ಗಳಿಸಿದ್ದ ಅರ್ಚನಾ ಕಾಮತ್ ಇವತ್ತು ಮಹಿಳೆಯರ ಮತ್ತು ಯೂತ್ ಬಾಲಕಿಯರ ವಿಭಾಗದಲ್ಲಿ ಪಾರಮ್ಯ ಮೆರೆದರು.

ಪುರುಷರ ವಿಭಾಗದ ಫೈನಲ್‌ನಲ್ಲಿ ಅಗ್ರಶ್ರೇಯಾಂಕದ ಆಟಗಾರ ಶ್ರೇಯಲ್  ತೆಲಂಗ್ 13-11, 12-14, 11-6, 15-13, 11-5ರಿಂದ ಎಜಿಎಸ್‌ನ ಸಿ.ಕೆ. ಯತೀಶ್ ವಿರುದ್ಧ ಪ್ರಯಾಸದ ಜಯ ಗಳಿಸಿದರು. 

ಸೆಮಿಫೈನಲ್‌ನಲ್ಲಿ ತೆಲಂಗ್ 11-9, 11-6, 9-11, 3-11, 11-8, 11-7ರಿಂದ ನೈಋತ್ಯ ರೈಲ್ವೆ ಆಟಗಾರ ಸಗೈರಾಜ್ ಅವರನ್ನು ಮಣಿಸಿದರು. ಇನ್ನೊಂದು ಪಂದ್ಯದಲ್ಲಿ ಸಿ.ಕೆ. ಯತೀಶ್ 13-11, 11-8, 8-11, 11-9, 3-11, 8-11, 11-8 ಕೆನರಾ ಬ್ಯಾಂಕಿನ ಅನಿರ್ಬನ್ ತರಫದಾರ್ ಅವರನ್ನು ಸೋಲಿಸಿದರು.

ಯೂತ್ ಬಾಲಕರ ವಿಭಾಗದಲ್ಲಿಯೂ ಅಗ್ರಶ್ರೇಯಾಂಕದ ಆಟಗಾರರಾಗಿರುವ ತೇಲಂಗ್ 11-6, 9-11, 11-9, 11-7, 11-9ರಿಂದ ವಿದ್ಯಾಸ್‌ನ ವೇದಾಂತ್ ಎಂ. ಅರಸ್ ವಿರುದ್ಧ ಜಯಸಿದರು. ಸೆಮಿಫೈನಲ್‌ನಲ್ಲಿ ತೆಲಂಗ್ 5-11, 11-5, 11-4, 11-7, 13-11ರಿಂದ ಎಂಟಿಟಿಎದ ಶ್ರೇಯಸ್ ಕುಲಕರ್ಣಿ ವಿರುದ್ಧ; ವೇದಾಂತ್ ಎಂ. ಅರಸ್ 11-8, 11-6, 9-11, 11-7, 6-11, 11-8ರಿಂದ ಎಂಟಿಟಿಎದ ಎಸ್. ಕೇಶವರಾಜ್ ಅವರನ್ನು ಪರಾಭವಗೊಳಿಸಿದರು.

ಅರ್ಚನಾ ಜಯಭೇರಿ: ಮಹಿಳೆಯರ ವಿಭಾಗದ ಫೈನಲ್‌ನಲ್ಲಿ ಶ್ರೇಯಾಂಕರಹಿತ ಆಟಗಾರ್ತಿ ಅರ್ಚನಾ ಕಾಮತ್ 8-11, 11-4, 11-6, 11-6, 11-7ರಿಂದ ಎರಡನೇ ಶ್ರೇಯಾಂಕ ಆಟಗಾರ್ತಿ ಬಿಎನ್‌ಎಂನ ಐಶ್ವರ್ಯಾ ಬಿದರಿ ಅವರನ್ನು ಸೋಲಿಸಿದರು. ನಾಲ್ಕರ ಹಂತದ ಪಂದ್ಯಗಳಲ್ಲಿ; ಅರ್ಚನಾ 4-0ಯಿಂದ ಹರ್ಷ ಟೇಬಲ್ ಟೆನಿಸ್ ಸಂಸ್ಥೆಯ ರಿಧಿ ರೋಹಿತ್ ವಿರುದ್ಧ; ಐಶ್ವರ್ಯಾ ಬಿದರಿ 4-2ರಿಂದ ಎಂಟಿಟಿಎದ ವಿ. ಖುಷಿ ವಿರುದ್ಧ ಜಯಗಳಿಸಿದರು.

ಯೂತ್ ಬಾಲಕಿಯರ ವಿಭಾಗದ ಫೈನಲ್‌ನಲ್ಲಿ ಐದನೇ ಶ್ರೇಯಾಂಕದ ಅರ್ಚನಾ ಕಾಮತ್ 11-9, 8-11, 11-9, 11-5, 11-6ರಿಂದ ವಿ. ಖುಷಿ ವಿರುದ್ಧ ಗೆದ್ದರು. ಸೆಮಿಫೈನಲ್‌ಗಳಲ್ಲಿ ಅರ್ಚನಾ ಕಾಮತ್ 13-11, 11-9, 13-11, 11-6ರಿಂದ ದ್ವಿತೀಯ ಶ್ರೇಯಾಂಕದ ಐಶ್ವರ್ಯಾ ಬಿದರಿ ವಿರುದ್ಧ; ಖುಷಿ 12-10, 11-7, 11-6, 11-6ರಿಂದ ಅಗ್ರಶ್ರೇಯಾಂಕದ ಆಟಗಾರ್ತಿ ಎಚ್‌ಟಿಟಿಎದ ರಿಧಿ ರೋಹಿತ್‌ಗೆ ಆಘಾತ ನೀಡಿದರು.

ಮಂಜುನಾಥ್, ಮಮತಾಗೆ ಪ್ರಶಸ್ತಿ:
ಎಸ್‌ಓಎಮ್‌ನ ಪಿ.ಎಲ್.ಮಂಜುನಾಥ್ ಮತ್ತು ಐಟಿಯ ಮಮತಾ ಕ್ರಮವಾಗಿ ವೆಟರನ್ಸ್ ಪುರುಷ ಮತ್ತು ಮಹಿಳೆಯರ ವಿಭಾಗಗಳ ಪ್ರಶಸ್ತಿ ಗಳಿಸಿದರು.

ವೆಟರನ್ಸ್ ಪುರುಷರ ಫೈನಲ್‌ನಲ್ಲಿ ಮಂಜುನಾಥ್ 10-12, 11-4, 11-4, 11-6ರಿಂದ ಬೆಂಗಳೂರಿನ ಎಸ್. ಎಸ್. ಸಂದೀಪ್ ವಿರುದ್ಧ ಜಯಿಸಿದರು. ಸೆಮಿಫೈನಲ್‌ನಲ್ಲಿ ಮಂಜುನಾಥ್ 11-4, 4-11, 11-3, 11-9ರಿಂದ ಹೊರೈಜನ್ ಕ್ಲಬ್‌ನ ಯು. ಹರ್ಷ ವಿರುದ್ಧ; ಸಂದೀಪ್ 11-4, 11-3, 11-3ರಿಂದ ಎಂಟಿಟಿಎದ ಜಯಪ್ರಕಾಶ್ ವಿರುದ್ಧ ಗೆದ್ದರು.

ವೆಟರನ್ಸ್ ಮಹಿಳೆಯರ ಫೈನಲ್‌ನಲ್ಲಿ ಮಮತಾ 11-7, 11-5, 11-7ರಿಂದ ಬಿಎನ್‌ಎಂಟಿಟಿಎದ ಲಲಿತಾ ಕುಮಾರ್ ವಿರುದ್ಧ ಜಯಿಸಿದರು. ನಾಲ್ಕರ ಘಟ್ಟದಲ್ಲಿ ಮಮತಾ 11-8, 11-2, 11-6ರಿಂದ ಶೋಭಾ ಯಶವಂತ್ ವಿರುದ್ಧ; ಲಲಿತಾಕುಮಾರ್ 11-6, 11-2, 11-4ರಿಂದ ಪುಷ್ಪಾ ಅಂತರಮ್ ವಿರುದ್ಧ ಗೆದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.