ADVERTISEMENT

ಸಂಕಷ್ಟದಲ್ಲಿದ್ದ ಶಾಂತಿ ಬಾಳಲ್ಲಿ ಹೊಂಗಿರಣ

ಬೆಂಗಳೂರಿನಲ್ಲಿ ಕ್ರೀಡಾ ಡಿಪ್ಲೊಮಾ ಕೋರ್ಸ್ ಮಾಡಲು ಅವಕಾಶ

​ಪ್ರಜಾವಾಣಿ ವಾರ್ತೆ
Published 13 ಜೂನ್ 2013, 19:59 IST
Last Updated 13 ಜೂನ್ 2013, 19:59 IST
ಸಂಕಷ್ಟದಲ್ಲಿದ್ದ ಶಾಂತಿ ಬಾಳಲ್ಲಿ ಹೊಂಗಿರಣ
ಸಂಕಷ್ಟದಲ್ಲಿದ್ದ ಶಾಂತಿ ಬಾಳಲ್ಲಿ ಹೊಂಗಿರಣ   

ನವದೆಹಲಿ (ಪಿಟಿಐ): ದೊಡ್ಡ ಸಾಧನೆ ಬಳಿಕವೂ ತಮಿಳುನಾಡಿನ ಅಥ್ಲೀಟ್ ಶಾಂತಿ ಸೌಂದರಾಜನ್ ಅವರ ಬಾಳಲ್ಲಿ ಕತ್ತಲು ಆವರಿಸಿತ್ತು. `ಮಹಿಳೆ ಅಲ್ಲ; ಪುರುಷ' ಎಂಬುದು ಲಿಂಗ ಪತ್ತೆ ಪರೀಕ್ಷೆಯಲ್ಲಿ ಸಾಬೀತಾದ ಕಾರಣ ಅವರು ಏಷ್ಯನ್ ಕ್ರೀಡಾಕೂಟದಲ್ಲಿ ಗೆದ್ದಿದ್ದ ಪದಕ ಹಿಂಪಡೆಯಲಾಗಿತ್ತು. ಕೆಲ ದಿನಗಳ ಬಳಿಕ ಅವರು ಇಟ್ಟಿಗೆ ತಯಾರಿಕಾ ಘಟಕದಲ್ಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದದ್ದು ಬೆಳಕಿಗೆ ಬಂದಿತ್ತು.

ಆದರೆ ಅವರ ಸಂಕಷ್ಟದ ಬದುಕಿಗೆ ಈಗ ಮುಕ್ತಿ ದೊರೆಯುವ ಸಮಯ ಬಂದಿದೆ. ಏಕೆಂದರೆ ಬೆಂಗಳೂರಿನ ಭಾರತ ಕ್ರೀಡಾ ಪ್ರಾಧಿಕಾರದಲ್ಲಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೋರ್ಟ್ಸ್‌ನಲ್ಲಿ (ಎನ್‌ಐಎಸ್) ಅಥ್ಲೆಟಿಕ್ಸ್ ವಿಭಾಗದಲ್ಲಿ ಡಿಪ್ಲೊಮಾ ಕೋರ್ಸ್ ಮಾಡಲು ಅವರಿಗೆ ಅವಕಾಶ ಮಾಡಿಕೊಡಲಾಗಿದೆ. ಈ ಕೋರ್ಸ್ ಮುಗಿದ ಮೇಲೆ ಅವರು ಕೋಚ್ ಆಗಿ ಕಾರ್ಯನಿರ್ವಹಿಸಲು ಅರ್ಹತೆ ಪಡೆಯುತ್ತಾರೆ.

ಈ ಕ್ರಮಕ್ಕೆ ಮುಂದಾಗಿರುವುದು ಭಾರತ ಕ್ರೀಡಾ ಪ್ರಾಧಿಕಾರ (ಎಸ್‌ಎಐ). ಈ ಸಂಬಂಧ ತಮಿಳುನಾಡು ಸರ್ಕಾರಕ್ಕೆ ಪತ್ರ ಬರೆದಿರುವ ಎಸ್‌ಎಐ, ಶಾಂತಿ ಅವರ ಖರ್ಚು ವೆಚ್ಚ ನೋಡಿಕೊಳ್ಳುವಂತೆ ಕೋರಿದೆ.

`ಅರ್ಹತೆ ಪಡೆದ ಕೋಚ್ ಆಗಿ ಕಾರ್ಯನಿರ್ವಹಿಸಲು ಶಾಂತಿ ಬೆಂಗಳೂರಿನ ಎನ್‌ಐಎಸ್‌ನಲ್ಲಿ ಡಿಪ್ಲೊಮಾ ಕೋರ್ಸ್ ಮಾಡಲಿದ್ದಾರೆ. ಪಟಿಯಾಲದಲ್ಲಿರುವ ಎನ್‌ಐಎಸ್‌ನಲ್ಲಿ ಅವರಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿತ್ತು. ಆದರೆ ಬೆಂಗಳೂರಿನಲ್ಲಿ ಈ ವ್ಯವಸ್ಥೆ ಮಾಡುವಂತೆ ಅವರು ನಮಗೆ ಮನವಿ ಮಾಡಿದ್ದರು. ಅವರ ನಿವಾಸವಿರುವ ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಗೆ ಬೆಂಗಳೂರು ಸನಿಹವಿದೆ' ಎಂದು ಎಸ್‌ಎಐ ಪ್ರಧಾನ ಮಹಾನಿರ್ದೇಶಕ ಜಿಜಿ ಥಾಮ್ಸನ್ ಹೇಳಿದ್ದಾರೆ.

2013-14ನೇ ಸಾಲಿನ ಕೋರ್ಸ್ ಜುಲೈ ಮೂರರಂದು ಆರಂಭವಾಗಲಿದೆ. ಹತ್ತು ತಿಂಗಳು ಅವರು ಬೆಂಗಳೂರಿನಲ್ಲಿರಬೇಕು. ಈ ಅವಧಿಯಲ್ಲಿ ಅವರಿಗೆ ಹಾಸ್ಟೆಲ್‌ನಿಂದ ಹೊರಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಿಕೊಡಲಾಗುವುದು ಎಂದೂ ಥಾಮ್ಸನ್ ತಿಳಿಸಿದ್ದಾರೆ.

ಶಾಂತಿ 2006ರ ದೋಹಾ ಏಷ್ಯನ್ ಕ್ರೀಡಾಕೂಟದಲ್ಲಿ ಮಹಿಳೆಯರ 800 ಮೀಟರ್ ಓಟದಲ್ಲಿ ಬೆಳ್ಳಿ ಪದಕ ಜಯಿಸಿದ್ದರು. ಅನುಮಾನದ ಕಾರಣ ಅವರನ್ನು ಲಿಂಗ ಪತ್ತೆ ಪರೀಕ್ಷೆಗೆ ಒಳಪಡಿಸಲಾಗಿತ್ತು. ಆ ಸಮಯದಲ್ಲಿ ಅವರು ಮಹಿಳೆ ಅಲ್ಲ; ಪುರುಷ ಎಂಬುದು ಗೊತ್ತಾಗಿತ್ತು. ಪದಕ ಹಿಂಪಡೆಯಲಾಗಿತ್ತು.

ಆ ನಂತರದ ದಿನಗಳಲ್ಲಿ ಶಾಂತಿ ಇಟ್ಟಿಗೆ ತಯಾರಿಕಾ ಘಟಕದಲ್ಲಿ 200 ರೂಪಾಯಿ ಸಂಬಳದ ದಿನಗೂಲಿ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಅದು ಬೆಳಕಿಗೆ ಬಂದಾಗ ಎನ್‌ಐಎಸ್‌ನಲ್ಲಿ ಅವಕಾಶ ಮಾಡಿಕೊಡುವುದಾಗಿ ಕೇಂದ್ರ ಕ್ರೀಡಾ ಸರ್ಕಾರ ಶಾಂತಿಗೆ ಭರವಸೆ ನೀಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT