ಮೀರ್‌ಪುರ (ಪಿಟಿಐ): ಮೊದಲ ಅಭ್ಯಾಸ ಪಂದ್ಯದಲ್ಲಿ ಸೋಲು ಮತ್ತು ಇತ್ತೀಚಿನ ಸರಣಿಗಳಲ್ಲಿ ನೀರಸ ಪ್ರದರ್ಶನ ತೋರಿ ಸಂಕಷ್ಟದಲ್ಲಿರುವ ಭಾರತ ತಂಡ ಬುಧವಾರ ನಡೆಯಲಿರುವ ಐಸಿಸಿ ಟ್ವೆಂಟಿ–20 ಚಾಂಪಿಯನ್‌ಷಿಪ್‌ನ ಎರಡನೇ ಮತ್ತು ಕೊನೆಯ ಅಭ್ಯಾಸ ಪಂದ್ಯದಲ್ಲಿ ಇಂಗ್ಲೆಂಡ್ ಸವಾಲನ್ನು ಎದುರಿಸಲಿದೆ.
ಮಾರ್ಚ್‌್ 21ರಂದು ನಡೆಯಲಿರುವ ಪ್ರಧಾನ ಹಂತದ ಮೊದಲ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಪಾಕಿಸ್ತಾನದ ಸವಾಲನ್ನು ಎದುರಿಸಲಿದೆ. ಆದ್ದರಿಂದ ಎರಡನೇ ಅಭ್ಯಾಸ ಪಂದ್ಯ ಭಾರತಕ್ಕೆ ಬಹುಮುಖ್ಯ ಎನಿಸಿದೆ. ಸೋಮವಾರ ನಡೆದ ಮೊದಲ ಅಭ್ಯಾಸ ಪಂದ್ಯದಲ್ಲಿ ದೋನಿ ಬಳಗ ಶ್ರೀಲಂಕಾದ ಎದುರು ನಿರಾಸೆ ಕಂಡಿತ್ತು.
ಯುವರಾಜ್ ಸಿಂಗ್ ಮತ್ತು ಸುರೇಶ್ ರೈನಾ ಅವರ ಮೇಲೆ ಭಾರತದ ಬ್ಯಾಟಿಂಗ್ ವಿಭಾಗ ಅವಲಂಬಿತವಾಗಿದೆ. ಈ ಇಬ್ಬರೂ ಬ್ಯಾಟ್ಸ್‌ಮನ್ ಗಳು ಲಂಕಾ ವಿರುದ್ಧ ಉತ್ತಮವಾಗಿ ರನ್ ಕಲೆ ಹಾಕಿದ್ದರು. ಆದರೆ, ಉಳಿದ ಬ್ಯಾಟ್ಸ್‌ಮನ್‌ಗಳು ವೈಫಲ್ಯ ಅನುಭವಿಸಿದ್ದ ಕಾರಣ ಭಾರತಕ್ಕೆ ನಿರಾಸೆ ಎದುರಾಗಿತ್ತು. ಲಂಕಾ ವಿರುದ್ಧ ಯುವರಾಜ್ 33 ಮತ್ತು ರೈನಾ 41 ರನ್ ಕಲೆ ಹಾಕಿದ್ದರು.
ಭಾರತ ತಂಡ ಬ್ಯಾಟಿಂಗ್ ಸಮಸ್ಯೆ ಎದುರಿಸುತ್ತಿದೆ. ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ರೋಹಿತ್ ಶರ್ಮ ಮತ್ತು ಶಿಖರ್ ಧವನ್ ಲಂಕಾ ವಿರುದ್ಧದ ಪಂದ್ಯದಲ್ಲಿ ಕ್ರಮವಾಗಿ 2 ಮತ್ತು 4 ರನ್‌ಗಳನ್ನಷ್ಟೆ ಗಳಿಸಿದ್ದು ಇದಕ್ಕೆ ಸಾಕ್ಷಿ.
ದೋನಿ ಪಡೆ ಬ್ಯಾಟಿಂಗ್‌ನಲ್ಲಿ ಸುಧಾರಣೆ ಕಂಡುಕೊಳ್ಳುವುದರ ಜೊತೆಗೆ ಬೌಲಿಂಗ್‌ನತ್ತವೂ ಗಮನ ಹರಿಸಬೇಕಿದೆ. ಆರ್. ಅಶ್ವಿನ್ ಮತ್ತು ರವೀಂದ್ರ ಜಡೇಜ ಸ್ಪಿನ್ ವಿಭಾಗವನ್ನು ಸಮರ್ಥವಾಗಿ ನಿಭಾಯಿಸಬೇಕಿದೆ. ವೇಗಿಗಳಾದ ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ ಮತ್ತು ವರುಣ್ ಆ್ಯರನ್ ಮೇಲೂ ಮಹತ್ವದ ಜವಾಬ್ದಾರಿಯಿದೆ. ಕೊನೆಯ ಓವರ್‌ಗಳಲ್ಲಿ ಎದುರಾಳಿ ತಂಡಕ್ಕೆ ಹೆಚ್ಚು ರನ್ ಬಿಟ್ಟುಕೊಡದಂತೆ ಎಚ್ಚರಿಕೆ ವಹಿಸುವುದು ಅಗತ್ಯ. ಲಂಕಾ ವಿರುದ್ಧ ಭುವನೇಶ್ವರ್ ಕೊನೆಯ ಓವರ್‌ನಲ್ಲಿ 17 ರನ್ ನೀಡಿದ್ದರು.
ಪುಟಿದೇಳುವ ವಿಶ್ವಾಸ: ಮಂಗಳವಾರ ನಡೆದ ಮೊದಲ ಅಭ್ಯಾಸ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಎದುರು ಸೋಲು ಕಂಡಿರುವ ಇಂಗ್ಲೆಂಡ್ ತಂಡ ಪುಟಿದೇಳುವ ವಿಶ್ವಾಸ ಹೊಂದಿದೆ.
ಇಂಗ್ಲೆಂಡ್ ನಾಯಕ ಸ್ಟುವರ್ಟ್ ಬ್ರಾಡ್ ಗಾಯದಿಂದ ಬಳಲುತ್ತಿ ದ್ದಾರೆ. ಲೂಕ್ ರೈಟ್, ರವಿ ಬೋಪಾರ ಮತ್ತು ಎಯೋನ್ ಮಾರ್ಗನ್ ಅವರಂಥ ಅನುಭವಿ ಆಟ ಗಾರರನ್ನು ಒಳಗೊಂಡಿರುವ ತಂಡ ಭಾರತಕ್ಕೆ ಪ್ರಬಲ ಎದುರಾಳಿ ಎನಿಸಿದೆ.
ತಂಡಗಳು ಇಂತಿವೆ
ಭಾರತ: ಮಹೇಂದ್ರ ಸಿಂಗ್ ದೋನಿ (ನಾಯಕ), ವರುಣ್ ಆ್ಯರನ್, ಸ್ಟುವರ್ಟ್ ಬಿನ್ನಿ, ಶಿಖರ್ ಧವನ್, ರವೀಂದ್ರ ಜಡೇಜ, ವಿರಾಟ್ ಕೊಹ್ಲಿ ಭುವನೇಶ್ವರ್ ಕುಮಾರ್, ಅಮಿತ್ ಮಿಶ್ರಾ, ಅಜಿಂಕ್ಯ ರಹಾನೆ, ರವಿಚಂದ್ರನ್ ಅಶ್ವಿನ್, ಸುರೇಶ್ ರೈನಾ, ಮೊಹಮ್ಮದ್ ಶಮಿ, ಮೋಹಿತ್ ಶರ್ಮ, ರೋಹಿತ್ ಶರ್ಮ ಮತ್ತು ಯುವರಾಜ್ ಸಿಂಗ್.
ಇಂಗ್ಲೆಂಡ್: ಸ್ಟುವರ್ಟ್ ಬ್ರಾಡ್ (ನಾಯಕ), ರವಿ ಬೋಪಾರ, ಟಿಮ್ ಬ್ರೆಸ್ನಿನ್, ಜಾಸ್ ಬಟ್ಲರ್, ಜಾಡ್ ಡೇರ್ನ್‌ಬಾಚ್, ಅಲೆಕ್ಸ್ ಹೇಲ್ಸ್, ಕ್ರಿಸ್ ಜೋರ್ಡಾನ್, ಮೈಕಲ್ ಲುಂಬ್, ಮೋಯಿನ್ ಅಲಿ, ಎಯೋನ್ ಮಾರ್ಗನ್, ಸ್ಟೀಫನ್ ಪೆರ್ರಿ, ಜೊಯಿ ರೂಟ್, ಬೆನ್ ಸ್ಟೋಕ್ಸ್, ಜೇಮ್ಸ್ ಟ್ರೆಡ್‌ವೆಲ್ ಮತ್ತು ಲೂಕ್ ರೈಟ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.