ADVERTISEMENT

ಸಂಕ್ಷಿಪ್ತ ಕ್ರೀಡಾ ಸುದ್ದಿ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2013, 20:09 IST
Last Updated 5 ಆಗಸ್ಟ್ 2013, 20:09 IST

ಐವಾಸ್ ವಿಶ್ವ ಕ್ರೀಡಾಕೂಟಕ್ಕೆ ನಿರಂಜನ್
ಬೆಂಗಳೂರು:
ಕರ್ನಾಟಕದ ಪ್ಯಾರಾ ಈಜುಪಟು ಎಂ. ನಿರಂಜನ್ ದಕ್ಷಿಣ ಅಮೆರಿಕದಲ್ಲಿ ಮಂಗಳವಾರ ಆರಂಭವಾಗಲಿರುವ ಐವಾಸ್ ವಿಶ್ವ ಜೂನಿಯರ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

19 ವರ್ಷ ವಯಸ್ಸಿನ ನಿರಂಜನ್ (ಎಸ್-8) 100 ಮೀಟರ್ ಫ್ರೀಸ್ಟೈಲ್, 100ಮೀ. ಬಟರ್ ಫ್ಲೈ, 100ಮೀ. ಬ್ಯಾಕ್‌ಸ್ಟ್ರೋಕ್ ಹಾಗೂ 200 ಮೀ. ವೈಯಕ್ತಿಕ ಮೆಡ್ಲೆ ವಿಭಾಗಗಳಲ್ಲಿ ಪೈಪೋಟಿ ನಡೆಸಲಿದ್ದಾರೆ. ಬೆಳಗಾವಿಯ ಮೊಯಿನ್ ಹಾಗೂ ಮಹಾರಾಷ್ಟ್ರದ ಸ್ವಪ್ನಿಲ್ ಕೂಡಾ ಈ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಭಾರತದ ಇತರ ಸ್ಪರ್ಧಿಗಳು. ಈ ಕ್ರೀಡಾಕೂಟ ಆಗಸ್ಟ್ 14ರ ವರೆಗೆ ನಡೆಯಲಿದೆ.

100ಮೀ. ಬಟರ್ ಫ್ಲೈ ವಿಭಾಗದಲ್ಲಿ ವಿಶ್ವ ಪರ‍್ಯಾಂಕಿಂಗ್ ಟ್ಟಿಯಲ್ಲಿ 17ನೇ ಸ್ಥಾನದಲ್ಲಿರುವ ಬೆಂಗಳೂರಿನ ನಿರಂಜನ್ ಐವಾಸ್ ಕ್ರೀಡಾಕೂಟದಲ್ಲಿ ಕನಿಷ್ಠ ಎರಡು ಪದಕಗಳನ್ನಾದರೂ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಟೂರ್ನಿಗೆ ತೆರಳುವ ಮುನ್ನ `ಪ್ರಜಾವಾಣಿ' ಜೊತೆ ಮಾತನಾಡಿ, `ವಿಶ್ವ ಕ್ರೀಡಾಕೂಟದಲ್ಲಿ ಪದಕ ಗೆಲ್ಲಬೇಕೆನ್ನುವ ಕಾರಣಕ್ಕಾಗಿ ದಿನಕ್ಕೆ ಆರರಿಂದ ಎಂಟು ಗಂಟೆಗಳ ಕಾಲ ಅಭ್ಯಾಸ ನಡೆಸಿದ್ದೇನೆ. ಎರಡು ತಿಂಗಳ ಬಿಡುವಿನ ಬಳಿಕ ಅಂತರರಾಷ್ಟ್ರೀಯ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ಸಾಮರ್ಥ್ಯಕ್ಕೂ ಮೀರಿ ಪ್ರದರ್ಶನ ತೋರುತ್ತೇನೆ' ಎಂದು ನುಡಿದರು.

ಸೆಮಿಫೈನಲ್‌ಗೆ ಬೆಂಗಳೂರು ರೆಡ್ಸ್
ಬೆಂಗಳೂರು:
ಬೆಂಗಳೂರು ರೆಡ್ಸ್ ತಂಡ ರಾಜ್ಯ `ಸಿ' ಡಿವಿಷನ್ ಫುಟ್‌ಬಾಲ್ ಲೀಗ್ ಚಾಂಪಿಯನ್‌ಷಿಪ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದೆ.

  ಬೆಂಗಳೂರು ರೆಡ್ಸ್ ತಂಡ 3-0 ಗೋಲುಗಳಿಂದ ಬ್ಲಿಟ್ಜ್ ತಂಡವನ್ನು ಮಣಿಸಿತು.  ಇನ್ನೊಂದು ಪಂದ್ಯದಲ್ಲಿ ಸ್ಪೋರ್ಟಿಂಗ್ ಯೂತ್ಸ್ 1-3ರಲ್ಲಿ ಬೆಂಗಳೂರು ವಾರಿಯರ್ಸ್‌ ಕೈಯಲ್ಲಿ ಸೋಲು ಕಂಡಿತು.

ದೇವೇಂದ್ರಗೆ ಬಹುಮಾನ
ನವದೆಹಲಿ (ಪಿಟಿಐ
): ಫ್ರಾನ್ಸ್‌ನ ಲಿಯಾನ್‌ನಲ್ಲಿ ನಡೆದ ಆರನೇ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಬಂಗಾರದ ಸಾಧನೆ ತೋರಿದ್ದ ದೇವೇಂದ್ರ ಜಾಜಾರಿಯಾ ಅವರಿಗೆ ರೈಲ್ವೆ ಇಲಾಖೆ ಐದು ಲಕ್ಷ ರೂಪಾಯಿ ನಗದು ಬಹುಮಾನ ಘೋಷಿಸಿದೆ.

79ನೇ ರೈಲ್ವೆ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್ ಉದ್ಘಾಟನಾ ಸಮಾರಂಭದ ವೇಳೆ ಕೇಂದ್ರ ರೈಲ್ವೆ ಖಾತೆ ಸಚಿವ ಮಲ್ಲಿಕಾರ್ಜುನ ಖರ್ಗೆ ಸೋಮವಾರ ಇದನ್ನು ಪ್ರಕಟಿಸಿದ್ದಾರೆ.

ಹಾಕಿ: ಮಿಲಿಟರಿ ಶಾಲೆಗೆ ಜಯ
ಬೆಂಗಳೂರು:
ಗೋಲುಗಳ ಮಳೆ ಸುರಿಸಿದ ರಾಷ್ಟ್ರೀಯ ಮಿಲಿಟರಿ ಶಾಲೆ ತಂಡ ಸೋಮವಾರ ಇಲ್ಲಿ ಆರಂಭಗೊಂಡ ಜಿ.ಎಸ್.ರಾಂಧವಾ ಸ್ಮಾರಕ ಅಂತರ ಶಾಲಾ ಬಾಲಕರ ಹಾಕಿ ಟೂರ್ನಿಯ ಮೊದಲ ಲೀಗ್ ಪಂದ್ಯದಲ್ಲಿ 11-0 ರಲ್ಲಿ ನ್ಯೂ ಕೇಂಬ್ರಿಜ್ ಹೈಸ್ಕೂಲ್ ವಿರುದ್ಧ ಜಯಿಸಿತು.

ಅಕ್ಕಿತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ವಿಜಯಿ ತಂಡದ ವಿಶಾಲ್ ಸಿಂಗ್ (2, 16ನೇ ನಿ.), ಲವ್‌ಪ್ರೀತ್ (7, 12ನೇ ನಿ.), ಸುಮಿತ್ ಯಾದವ್ (8, 41, 48 ನೇ ನಿ.), ಹರಿ ಓಂ ಸಿಂಗ್ (28, 34, 45ನೇ ನಿ.) ಹಾಗೂ ಜಗ್‌ಪ್ರೀತ್ (49ನೇ ನಿ.) ಗೋಲು ತಂದಿತ್ತರು.
ಆಗಸ್ಟ್ 14 ರವರೆಗೂ ಟೂರ್ನಿ ನಡೆಯಲಿದ್ದು, ಒಟ್ಟು ಒಂಬತ್ತು ತಂಡಗಳು ಪೈಪೋಟಿ ನಡೆಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.