ADVERTISEMENT

ಸಂಕ್ಷಿಪ್ತ ಕ್ರೀಡಾ ಸುದ್ದಿ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2013, 19:30 IST
Last Updated 3 ಡಿಸೆಂಬರ್ 2013, 19:30 IST

ಸೇತುರಾಮನ್‌ಗೆ ಪ್ರಶಸ್ತಿ
ಹೈದರಾಬಾದ್‌ (ಪಿಟಿಐ):
ಎಸ್‌.ಪಿ. ಸೇತುರಾಮನ್‌ ಅವರು  ಇಲ್ಲಿ ಕೊನೆ ಗೊಂಡ ಹೈದರಾಬಾದ್‌ ಇಂಟರ್‌ ನ್ಯಾಷನಲ್‌ ಗ್ರ್ಯಾಂಡ್‌ಮಾಸ್ಟರ್ಸ್‌ ಚೆಸ್‌ ಟೂರ್ನಿ ಯಲ್ಲಿ ಚಾಂಪಿಯನ್‌ ಆದರು. ಚೆನ್ನೈ ಮೂಲದ ಗ್ರ್ಯಾಂಡ್‌ ಮಾಸ್ಟರ್‌ ಮಂಗಳವಾರ ನಡೆದ 11ನೇ ಹಾಗೂ ಅಂತಿಮ ಸುತ್ತಿನ ಆಟದಲ್ಲಿ ಜಾರ್ಜಿಯದ ಮೆರಾಬ್‌ ಗಗುನಾಶ್ವಿಲಿ ಜೊತೆ ಡ್ರಾ ಮಾಡಿಕೊಂಡರು.

ಈ ಮೂಲಕ ಒಟ್ಟು 8.5 ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನ ದಲ್ಲಿ ಕಾಣಿಸಿಕೊಂಡರು. ಅಗ್ರಶ್ರೇ ಯಾಂಕದ ಆಟಗಾರ ರಷ್ಯಾದ ಇವಾನ್‌ ಪೊಪೊವ್‌ ಕೂಡಾ ಇಷ್ಟೇ ಪಾಯಿಂಟ್‌ ಕಲೆಹಾಕಿದ್ದರು. ಆದರೆ ‘ಟೈ ಬ್ರೇಕ್‌’ ಸ್ಕೋರ್‌ನಲ್ಲಿ ಇವಾನ್‌ ಅವರನ್ನು ಹಿಂದಿಕ್ಕಿದ ಸೇತುರಾಮನ್‌ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಇವಾನ್‌ ಅಂತಿಮ ಸುತ್ತಿನ ಪಂದ್ಯದಲ್ಲಿ ಜಾರ್ಜಿಯದ ಲೆವಾನ್‌ ಪಂತ್ಸುಲಾಯ್‌ ವಿರುದ್ಧ ಗೆದ್ದರು.

ಭಾರತದ ವಿದಿತ್‌ ಸಂತೋಷ್‌ ಗುಜರಾತಿ ಮತ್ತು ರಷ್ಯಾದ ಮಜರೋವ್‌ ಮಿಖಾಯಿಲ್‌ ತಲಾ ಎಂಟು ಪಾಯಿಂಟ್‌ ಕಲೆಹಾಕಿದರು. ಆದರೆ ‘ಟೈ ಬ್ರೇಕ್‌’ ಸ್ಕೋರ್‌ನಲ್ಲಿ ಮಜರೋವ್‌ ಅವರನ್ನು ಹಿಂದಿಕ್ಕಿದ ವಿದಿತ್‌ ‘ಎರಡನೇ ರನ್ನರ್‌ ಅಪ್‌’ ಪ್ರಶಸ್ತಿ ಪಡೆದರು. ಸೇತುರಾಮನ್‌ ಬಹುಮಾನ ರೂಪದಲ್ಲಿ ₨ 2 ಲಕ್ಷ ಮೊತ್ತ  ತಮ್ಮದಾಗಿಸಿಕೊಂಡರೆ, ಪೊಪೊವ್‌ ₨ 1.5 ಲಕ್ಷ ಪಡೆದರು.

ಆಂಧ್ರ ಪ್ರದೇಶದ ಯುವ ಸ್ಪರ್ಧಿ ಎಸ್‌. ರವಿ ತೇಜ ಅಂತಿಮ ಸುತ್ತಿನಲ್ಲಿ ವಿಷ್ಣು ಪ್ರಸನ್ನ ಅವರನ್ನು ಮಣಿ ಸಿದರಲ್ಲದೆ, ‘ಇಂಟರ್‌ನ್ಯಾಷನಲ್‌ ಮಾಸ್ಟರ್‌’ ಗೌರವ ತಮ್ಮದಾಗಿಸಿ ಕೊಂಡರು. 

ಆಟಗಾರ್ತಿಯ ಹೇಳಿಕೆ ದಾಖಲಿಸಲು ಆದೇಶ
ಇಂದೋರ್ (ಪಿಟಿಐ):
ಮಹಿಳಾ ಕ್ರಿಕೆಟ್‌ ತಂಡದ ಆಟಗಾರ್ತಿ ಮೇಲೆ ನಡೆದಿದೆ ಎನ್ನಲಾದ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸೆಂಬರ್ 5 ರಂದು ಸ್ಥಳೀಯ ನ್ಯಾಯಾಲಯದಲ್ಲಿ ಆಟಗಾರ್ತಿಯ ಹೇಳಿಕೆ ದಾಖಲಿಸುವಂತೆ ಕೋರ್ಟ್ ಆದೇಶ ನೀಡಿದೆ.

ಮಧ್ಯ ಪ್ರದೇಶ ಕ್ರಿಕೆಟ್ ಸಂಸ್ಥೆ ಜಂಟಿ ಕಾರ್ಯದರ್ಶಿ ಅಲ್ಫೇಶ್ ಷಾ ತನ್ನನ್ನು ಹೋಳ್ಕರ್ ಕ್ರೀಡಾಂಗಣ ದ ಲ್ಲಿರುವ  ಕೊಠಡಿಗೆ ಕರೆದು ಕಿರುಕುಳ ನೀಡಿದ್ದಾರೆ ಎಂದು ಹತ್ತೊಂಬತ್ತು ವರ್ಷದೊಳಗಿನ ತಂಡದ ಆಟಗಾರ್ತಿ ಇತ್ತೀಚೆಗೆ ಆರೊಪಿಸಿದ್ದರು.

ಆರ್ಚರಿ: ಡಿಸೆಂಬರ್‌ 4ರಂದು ಆಯ್ಕೆ ಟ್ರಯಲ್ಸ್‌
ಬೆಂಗಳೂರು:
ಜಮ್‌ಷೆಡ್‌ಪುರದಲ್ಲಿ ಡಿಸೆಂಬರ್‌ 22ರಿಂದ 26ರವರೆಗೆ ನಡೆಯಲಿರುವ 34ನೇ ರಾಷ್ಟ್ರೀಯ ಸೀನಿಯರ್‌ ರಿಕರ್ವ್‌ ಹಾಗೂ ಕಾಂಪೌಂಡ್‌ ಆರ್ಚರಿ ಚಾಂಪಿಯನ್‌ಷಿಪ್‌ಗೆ ರಾಜ್ಯ ತಂಡಗಳನ್ನು ಆಯ್ಕೆ ಮಾಡಲು ಕರ್ನಾಟಕ ಅಮೆಚೂರ್‌ ಆರ್ಚರಿ ಸಂಸ್ಥೆ ಆಶ್ರಯದಲ್ಲಿ ಡಿ. 8ರಂದು ಆಯ್ಕೆ ಟ್ರಯಲ್ಸ್ ನಡೆಯಲಿದೆ.

ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಆಯ್ಕೆ ಟ್ರಯಲ್ಸ್‌ನಲ್ಲಿ ಪುರುಷ ಹಾಗೂ ಮಹಿಳಾ ತಂಡಗಳನ್ನು ಆಯ್ಕೆ ಮಾಡಲಾಗುವುದು ಎಂದು ಸಂಸ್ಥೆಯ ಗೌರವ ಕಾರ್ಯದರ್ಶಿ ಅನಂತರಾಜು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರವೇಶ ಪತ್ರ ಕಳುಹಿಸಲು ಡಿ.7 ಕೊನೆಯ ದಿನಾಂಕ. ಹೆಚ್ಚಿನ ಮಾಹಿತಿಗೆ ಅನಂತರಾಜು, ಗೌರವ ಕಾರ್ಯದರ್ಶಿ, ಕರ್ನಾಟಕ ಅಮೆಚೂರ್‌ ಆರ್ಚರಿ ಸಂಸ್ಥೆ, ಕರ್ನಾಟಕ ಒಲಿಂಪಿಕ್‌ ಸಂಸ್ಥೆ, ಕೊಠಡಿ ಸಂಖ್ಯೆ 3, ಕರ್ನಾಟಕ ಕ್ರೀಡಾ ಪ್ರಾಧಿಕಾರ ಕಟ್ಟಡ, ಕಂಠೀರವ ಕ್ರೀಡಾಂಗಣ ಸಂಕೀರ್ಣ, ಕಸ್ತೂರ್‌ಬಾ ರಸ್ತೆ, ಬೆಂಗಳೂರು–560001 ಅಥವಾ ದೂರವಾಣಿ ಸಂಖ್ಯೆ: 080–22275656.

ವಿಶೇಷ ಒಲಿಂಪಿಕ್ಸ್: ಭಾರತದ ಸ್ಪರ್ಧಿಗಳಿಗೆ 46 ಪದಕ
ನವದೆಹಲಿ (ಪಿಟಿಐ):
ಭಾರತದ ಸ್ಪರ್ಧಿಗಳು ಆಸ್ಟ್ರೇಲಿಯಾದ ನ್ಯೂ ಕ್ಯಾಸಲ್‌ನಲ್ಲಿ ನಡೆಯುತ್ತಿರುವ ವಿಶೇಷ ಒಲಿಂಪಿಕ್ಸ್ ಏಷಿಯಾ ಪೆಸಿಫಿಕ್‌ ಕ್ರೀಡಾಕೂಟದಲ್ಲಿ 11 ಚಿನ್ನ ಸಹಿತ 46 ಪದಕಗಳನ್ನು ಪಡೆದುಕೊಂಡಿದ್ದಾರೆ. ಭಾರತದ ಸ್ಪರ್ಧಿಗಳು ಅಥ್ಲೆಟಿಕ್ಸ್‌ನಲ್ಲಿ 12, ಈಜು ಸ್ಪರ್ಧೆಗಳಲ್ಲಿ 15 ಹಾಗೂ ಬ್ಯಾಡ್ಮಿಂಟನ್‌ನಲ್ಲಿ 19 ಪದಕಗಳನ್ನು ತಮ್ಮದಾಗಿಸಿಕೊಂಡರು. ಇದರಲ್ಲಿ 19 ಬೆಳ್ಳಿ ಹಾಗೂ 16 ಕಂಚಿನ ಪದಕಗಳೂ ಸೇರಿವೆ. ಈ ಕೂಟ ಡಿಸೆಂಬರ್‌ 7ರ ವರೆಗೆ  ನಡೆಯಲಿದೆ.

ಟ್ವೆಂಟಿ–20 ವಿಶ್ವಕಪ್‌:  ಬಾಂಗ್ಲಾದಲ್ಲಿ ಐಸಿಸಿ ಪರಿಶೀಲನೆ
ಢಾಕಾ (ಎಎಫ್‌ಪಿ):
ಅಂತರರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ (ಐಸಿಸಿ) ಬಾಂಗ್ಲಾದೇಶದಲ್ಲಿ ನಡೆಯು ತ್ತಿರುವ ರಾಜಕೀಯ ಪ್ರೇರಿತ ಗಲಭೆಯ ಮೇಲೆ ನಿಗಾ ಇಟ್ಟಿದೆ. ಮುಂದಿನ ವರ್ಷದ ಆರಂಭದಲ್ಲಿ ಬಾಂಗ್ಲಾದಲ್ಲಿ ಟಿ20 ವಿಶ್ವಕಪ್‌ ಟೂರ್ನಿ ನಡೆಯಲಿದ್ದು, ಈ ಗಲಭೆ ಟೂರ್ನಿಯ ಮೇಲೆ ಪರಿಣಾಮ ಬೀರಲಿದೆಯೇ ಎಂಬುದನ್ನು ಐಸಿಸಿ ಪರಿಶೀಲಿಸುತ್ತಿದೆ.

ಐಸಿಸಿ ಅಧಿಕಾರಿ ಕ್ರಿಸ್ ಟೆಟ್ಲೀ ನೇತೃತ್ವದ ತಂಡ ಟೂರ್ನಿಯ ಪಂದ್ಯಗಳು ನಡೆಯಲಿರುವ ಢಾಕಾ ಮತ್ತು ಫತುಲ್ಹಾ ದಲ್ಲಿನ ಕ್ರೀಡಾಂಗಣಗಳಿಗೆ ಭೇಟಿ ನೀಡಿ ಅಂತಿಮ ಹಂತದ ಸಿದ್ಧತೆಯನ್ನು ಪರಿಶೀಲಿಸಿದ್ದು, ಈ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT