ಬ್ಯಾಡ್ಮಿಂಟನ್: ಕ್ವಾರ್ಟರ್ ಫೈನಲ್‌ಗೆ ಸೈನಾ ನೆಹ್ವಾಲ್
ಬ್ಯಾಂಕಾಕ್ (ಪಿಟಿಐ): ಹಲವು ತಿಂಗಳ ಬಳಿಕ ಕಣಕ್ಕಿಳಿದಿರುವ ಸೈನಾ ನೆಹ್ವಾಲ್ ಉತ್ತಮ ಪ್ರದರ್ಶನದ ಮೂಲಕ ಮತ್ತೆ ಗಮನ ಸೆಳೆದಿದ್ದಾರೆ. ವಿಶ್ವ ಎರಡನೇ ಕ್ರಮಾಂಕದ ಆಟಗಾರ್ತಿ ಇಲ್ಲಿ ನಡೆಯುತ್ತಿರುವ ಥಾಯ್ಲೆಂಡ್ ಓಪನ್ ಗ್ರ್ಯಾನ್ ಪ್ರಿ ಗೋಲ್ಡ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಗುರುವಾರ ನಡೆದ ಪಂದ್ಯದಲ್ಲಿ ಸೈನಾ 21-12, 21-11ರಲ್ಲಿ ಇಂಡೊನೇಷ್ಯಾದ ಫೆಬಿ ಅಂಗುನಿ ಅವರನ್ನು ಪರಾಭವಗೊಳಿಸಿದ್ದಾರೆ. ಎರಡೂ ಗೇಮ್‌ಗಳಲ್ಲಿ ಭಾರತದ ಆಟಗಾರ್ತಿ ಸಂಪೂರ್ಣ ಪಾರಮ್ಯ ಮೆರೆದರು. ಆರಂಭದಿಂದಲೇ ಆಕ್ರಮಣಕಾರಿ ಆಟದ ಮೂಲಕ ಮೇಲುಗೈ ಸಾಧಿಸಿದರು. ಮೊದಲ ಗೇಮ್‌ನಲ್ಲಿ 7-0ರಲ್ಲಿ ಮುಂದಿದ್ದರು. ಎರಡನೇ ಗೇಮ್‌ನಲ್ಲಿ ಆರಂಭದಲ್ಲಿ ಹಿನ್ನಡೆ ಕಂಡರೂ ಬಳಿಕ 11-3ರಲ್ಲಿ ಮುನ್ನಡೆ ಸಾಧಿಸುವ ಮೂಲಕ ತಮ್ಮ ಸಾಮರ್ಥ್ಯ ತೋರಿಸಿದರು. ಈ ಹೋರಾಟ 31 ನಿಮಿಷ ನಡೆಯಿತು.
ಈ ಟೂರ್ನಿಯಲ್ಲಿ ಹೋದ ಬಾರಿ ಚಾಂಪಿಯನ್ ಆಗಿದ್ದ ಸೈನಾ ಎಂಟರ ಘಟ್ಟದ ಪಂದ್ಯದಲ್ಲಿ ಸಿಂಗಪುರದ ಜುವಾನ್ ಗು ಅವರ ಸವಾಲು ಎದುರಿಸಲಿದ್ದಾರೆ. ಜುವಾನ್ 21-13, 21-11ರಲ್ಲಿ ತಮ್ಮ ದೇಶದವರೇ ಆದ ಕ್ಸಿಯಾವು ಲಿಯಾಂಗ್ ಎದುರು ಗೆದ್ದು ಕ್ವಾರ್ಟರ್ ಫೈನಲ್ ತಲುಪಿದ್ದಾರೆ.
ಆದರೆ ಅರುಂಧತಿ ಪಂತ್ವಾನೆ ಸೋಲು ಕಂಡರು. ಅವರು ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 16-21, 13-21ರಲ್ಲಿ ಸ್ಥಳೀಯ ಆಟಗಾರ್ತಿ ಸಪ್ಸಿರೀ ತಾಯೆರಂಚಾಯಿ ಎದುರು ಪರಾಭವಗೊಂಡರು.
ಪುರುಷರ ವಿಭಾಗದ ಸಿಂಗಲ್ಸ್‌ನಲ್ಲಿ ಎಚ್.ಎಸ್.ಪ್ರಣಯ್ ಹಾಗೂ ಕೆ.ಶ್ರೀಕಾಂತ್ ಕೂಡ ಎಂಟರ ಘಟ್ಟ ಪ್ರವೇಶಿಸಿದ್ದಾರೆ. ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ ಪ್ರಣಯ್ 19-21, 21-13, 21-15ರಲ್ಲಿ ತಮ್ಮ ದೇಶದವರೇ ಆದ ಆನಂದ್ ಪವಾರ್ ಎದುರು ಗೆದ್ದರು.13ನೇ ಶ್ರೇಯಾಂಕದ ಶ್ರೀಕಾಂತ್ 21-19, 21-15ರಲ್ಲಿ ಕೊರಿಯಾದ ಜಾಂಗ್ ಸೂ ಎದುರು ಗೆಲುವು ಸಾಧಿಸಿದರು. ಆದರೆ ಸಾಯಿ ಪ್ರಣೀತ್ 18-21, 21-16, 19-21ರಲ್ಲಿ ಇಂಡೊನೇಷ್ಯಾದ ವಿಸ್ನು ಯೂಲಿ ಪ್ರಸೆತ್ಯೊ ಎದುರು ಪರಾಭವಗೊಂಡರು.
ಚೆಸ್: ಡ್ರಾ ಪಂದ್ಯದಲ್ಲಿ ವಿಷ್ಣು ಪ್ರಸನ್ನ
ಅಲ್ಬೇನಾ, ಬಲ್ಗೇರಿಯಾ (ಪಿಟಿಐ): ಭಾರತದ ವಿ. ವಿಷ್ಣು ಪ್ರಸನ್ನ ಅವರು ಇಲ್ಲಿ ನಡೆಯುತ್ತಿರುವ ಗ್ರ್ಯಾಂಡ್ ಯುರೋಪ್ ಅಲ್ಬೇನಾ ಅಂತರರಾಷ್ಟ್ರೀಯ ಚೆಸ್ ಟೂರ್ನಿಯಲ್ಲಿ ಅರ್ಜೆಂಟಿನಾದ ಸ್ಯಾಂಡ್ರೊ ಮರೆಕೊ ಎದುರು ಡ್ರಾ ಮಾಡಿಕೊಂಡರು. ಮೂಲಕ ಅವರು 4.5 ಪಾಯಿಂಟ್‌ಗಳೊಂದಿಗೆ ಜಂಟಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.
ಅಂತಿಮ ಸುತ್ತಿಗೆ ಇನ್ನೂ ನಾಲ್ಕು ಸುತ್ತುಗಳು ಬಾಕಿ ಇದ್ದು, ಇತರ ಏಳು ಆಟಗಾರರು ಸಹ 4.5 ಪಾಯಿಂಟ್‌ಗಳನ್ನು ಹೊಂದಿದ್ದಾರೆ.ಆದರೆ ಭಾರತದ ಮತ್ತೊಬ್ಬ ಆಟಗಾರ ಅಭಿಜಿತ್ ಗುಪ್ತಾ, ಬ್ರೆಜಿಲ್‌ನ ಜುನಿಒ ಬ್ರಿಟೊ ಮೊಲಿನಾ ವಿರುದ್ಧ ಪರಾಭಗೊಂಡಿದ್ದಾರೆ. ದಿನದ ಇತರ ಪಂದ್ಯಗಳಲ್ಲಿ ಅಶ್ವಿನ್ ಜಯರಾಮ್, ನಾಲ್ಕನೇ ಸುತ್ತಿನಲ್ಲಿ ಟರ್ಕಿಯ ಯಕುಪ್ ಇರ್ತುರಾನ್ ಅವರನ್ನು ಮಣಿಸಿದ್ದಾರೆ.
ಭಾರತದ ಆಟಗಾರರಾದ ಅನುರಾಗ ಮಹಮಲ್ ಬಲ್ಗೇರಿಯಾದ ಗ್ರಿಗೊರ್ ಗ್ರಿಗೋರೊವ್ ಜೊತೆಗೆ, ಸಾಗರ್ ಷಾ, ಇಸ್ರೇಲ್‌ನ ಡ್ಯಾನಿ ರಜ್ನಿಕೊವ್ ಅವರೊಂದಿಗೆ ಪಾಯಿಂಟ್ಸ್ ಹಂಚಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.