ADVERTISEMENT

ಸಂಸತ್ತಿನಲ್ಲಿ ಕ್ರೀಡಾ ಮಸೂದೆ ಚರ್ಚೆಗೆ ಸರ್ಕಾರದ ಒಲವು

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2011, 17:45 IST
Last Updated 22 ಫೆಬ್ರುವರಿ 2011, 17:45 IST

ನವದೆಹಲಿ (ಪಿಟಿಐ): ಉದ್ದೇಶಿತ ರಾಷ್ಟ್ರೀಯ ಕ್ರೀಡಾ ಮಸೂದೆ ಕುರಿತು ಸಂಸತ್ತಿನ ಚರ್ಚೆಗೆ ಅವಕಾಶ ಮಾಡಿಕೊಡಲು ಸರ್ಕಾರ ಒಲವು ಹೊಂದಿದೆ ಎಂದು ಕೇಂದ್ರ ಕ್ರೀಡಾ ಸಚಿವ ಅಜಯ ಮಾಕೇನ್ ತಿಳಿಸಿದ್ದಾರೆ.

ಎಲ್ಲ ಕ್ರೀಡಾ ಒಕ್ಕೂಟಗಳ ಚುನಾವಣೆ ಪಾರದರ್ಶಕ ಮತ್ತು ನಿಷ್ಪಕ್ಷಪಾತವಾಗಿ ನಡೆಯಬೇಕು. ಪದಾಧಿಕಾರಿಗಳಿಗೂ ವಯೋಮಿತಿ ಮತ್ತು ಅಧಿಕಾರದ ಅವಧಿಯನ್ನು ನಿಗದಿ ಮಾಡಬೇಕು ಎಂಬುದೂ ಸೇರಿದಂತೆ ಹಲವು ಸುಧಾರಣೆಗಳಿಗೆ ಉದ್ದೇಶಿತ ಮಸೂದೆಯಲ್ಲಿ ನಿಯಮಾವಳಿ ರೂಪಿಸಲಾಗಿದೆ ಎಂದು ಮಾಕೇನ್ ಹೇಳಿದ್ದಾರೆ.

‘ನೀತಿ-ನಿರ್ಧಾರಗಳನ್ನು ತೆಗೆದುಕೊಳ್ಳುವ ಕ್ರೀಡಾಪಟುಗಳ ಅಭಿಪ್ರಾಯವನ್ನೂ ಪಡೆಯುವುದು ಮಸೂದೆ ಕಡ್ಡಾಯಗೊಳಿಸಲಿದೆ. ಮಸೂದೆಯ ವಿವರಗಳನ್ನು ಈಗಾಗಲೇ ಕ್ರೀಡಾ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಹಾಕಲಾಗಿದೆ’ ಎಂದು ಮಾಕೇನ್ ಲೋಕಸಭೆಯಲ್ಲಿ ಮಂಗಳವಾರ ಪ್ರಕಟಿಸಿದರು.

‘ದೇಶದಲ್ಲಿ ಕ್ರೀಡೆಯ ಅಭಿವೃದ್ಧಿಗಾಗಿ ತರಲು ಉದ್ದೇಶಿಸಿರುವ ಈ ಮಸೂದೆ ಕುರಿತು ರಾಷ್ಟ್ರೀಯ ಚರ್ಚೆ ನಡೆಯಬೇಕು ಎಂಬ ಉದ್ದೇಶದಿಂದ ನಾನು ಸ್ವಯಂಪ್ರೇರಣೆಯಿಂದ ಈ ಹೇಳಿಕೆ ನೀಡುತ್ತಿದ್ದೇನೆ’ ಎಂದು ಅವರು ಹೇಳಿದರು. 13ನೇ ಒಲಿಂಪಿಕ್ ಕಾಂಗ್ರೆಸ್ ಪ್ರಸ್ತಾಪಿಸಿದ ಅತ್ಯುತ್ತಮ ಆಡಳಿತ ಸೂತ್ರಗಳ ಆಧಾರದ ಮೇಲೆ ನಿಯಮಾವಳಿ ರೂಪಿಸಲಾಗಿದೆ. ಕ್ರೀಡೆಯ ಹಿತದೃಷ್ಟಿಯಿಂದ ಸಂಸತ್ತಿನ ಸಹಕಾರ ಅಗತ್ಯ’ ಎಂದು ಅವರು ತಿಳಿಸಿದರು.

ಸಲಹೆ, ಸೂಚನೆ ನೀಡಲು ಕೋರಿಕೆ: ಉದ್ದೇಶಿತ ರಾಷ್ಟ್ರೀಯ ಕ್ರೀಡಾ ಮಸೂದೆಯ ಸಾಧಕ ಬಾದಕಗಳ ಕುರಿತು ಸಲಹೆ, ಸೂಚನೆ ನೀಡಬೇಕು ಎಂದು ಕೇಂದ್ರ ಕ್ರೀಡಾ ಸಚಿವ ಅಜಯ್ ಮಾಕೇನ್ ಹೇಳಿದ್ದಾರೆ. ಇದರಿಂದ ಈ ಮಸೂದೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಜಾರಿಗೆ ತರಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ಕ್ರೀಡಾ ಕ್ಷೇತ್ರದಲ್ಲಿ ಅಗತ್ಯ ಸುಧಾರಣೆ ತರುವುದು, ಮಹಿಳಾ ಅಥ್ಲೀಟ್‌ಗಳಿಗೆ ಆಗುವ ಲೈಂಗಿಕ ಕಿರುಕುಳ ತಪ್ಪಿಸುವುದು, ಮಕ್ಕಳನ್ನು ನಿಂದಿಸುವುದನ್ನು ನಿಯಂತ್ರಿಸುವುದು, ದೇಶಿಯ ಕ್ರೀಡೆಗಳಿಗೆ ಆದ್ಯತೆ ಒದಗಿಸುವುದು ಸೇರಿದಂತೆ ಇತರ ಅಭಿವೃದ್ಧಿ ಪರ ಯೋಜನೆಗಳು ಈ ಮಸೂದೆಯಲ್ಲಿವೆ. ಕ್ರೀಡಾಕೂಟಗಳನ್ನು ಆಯೋಜಿಸುವ, ಆಟಗಾರರು ಉದ್ದೀಪರ ಮದ್ದು ಸೇವನೆ ಮಾಡುವುದನ್ನು ತಡೆಯುವ ಕ್ರಮಗಳು ಈ ಮಸೂದೆಯಲ್ಲಿರುತ್ತದೆ ಎಂದು ಮಾಕೇನ್ ವಿವರಿಸಿದ್ದಾರೆ.

ವಿಶೇಷವಾಗಿ ಮಕ್ಕಳು ಮತ್ತು ಮಹಿಳೆಯರು ಅಥ್ಲೆಟಿಕ್ಸ್ ಕ್ರೀಡಾಕೂಟಗಳಲ್ಲಿ ತಮ್ಮ ಪಾಲ್ಗೊಳ್ಳುವಿಕೆಯನ್ನು ಸಾಧರ ಪಡಿಸಬೇಕು ಎನ್ನುವ ಮಹತ್ವದ ಉದ್ದೇಶವನ್ನು ಈ ಮಸೂದೆ ಹೊಂದಿದ್ದು, ವೇಗವಾಗಿ ಹಾಗೂ ಪರಿಣಾಮಕಾರಿಯಾಗಿ ಇದನ್ನು ಜಾರಿಗೆ ತರಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ. ಇದು ಕ್ರೀಡಾಕ್ಷೇತ್ರದಲ್ಲಿ ಮಹಿಳೆ ಮತ್ತು ಮಕ್ಕಳ ಮೇಲೆ ಆಗುವ ಶೋಷಣೆಯನ್ನು ತಪ್ಪಿಸಲು ನೆರವಾಗುತ್ತದೆ. ಆದ್ದರಿಂದ ಅಗತ್ಯ ಸಲಹೆ ಸೂಚನೆ ನೀಡಬೇಕು ಎಂದು ಮಾಕೇನ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.