ADVERTISEMENT

ಸಚಿನ್ ತೆಂಡೂಲ್ಕರ್‌ಗೆ ಕ್ರಿಕ್‌ಇನ್ಫೋ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2012, 19:30 IST
Last Updated 20 ಫೆಬ್ರುವರಿ 2012, 19:30 IST

ನವದೆಹಲಿ (ಪಿಟಿಐ): ಸಚಿನ್ ತೆಂಡೂಲ್ಕರ್ ಅವರು ವರ್ಷದ ಶ್ರೇಷ್ಠ ಟೆಸ್ಟ್ ಇನಿಂಗ್ಸ್‌ಗೆ `ಇಎಸ್‌ಪಿಎನ್ ಕ್ರಿಕ್‌ಇನ್ಫೋ~ ಪ್ರಶಸ್ತಿ ಪಡೆದಿದ್ದಾರೆ. ಪ್ರಶಸ್ತಿಗಾಗಿ ಕಣದಲ್ಲಿದ್ದ ರಾಹುಲ್ ದ್ರಾವಿಡ್ ಮತ್ತು ಆಸ್ಟ್ರೇಲಿಯಾದ ಮೈಕಲ್ ಕ್ಲಾರ್ಕ್ ಅವರನ್ನು ಹಿಂದಿಕ್ಕಿ ಸಚಿನ್ ಈ ಗೌರವಕ್ಕೆ ಪಾತ್ರರಾದರು.

2011 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೇಪ್‌ಟೌನ್‌ನಲ್ಲಿ ನಡೆದ ಟೆಸ್ಟ್‌ನಲ್ಲಿ ಗಳಿಸಿದ 146 ರನ್‌ಗಳ ಇನಿಂಗ್ಸ್ ಸಚಿನ್‌ಗೆ ಈ ಪ್ರಶಸ್ತಿ ತಂದುಕೊಟ್ಟಿದೆ. 11 ತೀರ್ಪುಗಾರರಲ್ಲಿ ಏಳು ಮಂದಿ ಸಚಿನ್ ಪರವಾಗಿ ಮತ ಚಲಾಯಿಸಿದ್ದಾರೆ. ಕ್ಲಾರ್ಕ್ ಅವರ 151 ರನ್‌ಗಳ   ಇನಿಂಗ್ಸ್‌ಗೆ ಎರಡನೇ ಸ್ಥಾನ ದೊರೆತಿದೆ. ಆಸೀಸ್ ಬ್ಯಾಟ್ಸ್‌ಮನ್ ಕೂಡಾ ಕೇಪ್‌ಟೌನ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ನಲ್ಲಿ ಈ ಸಾಧನೆ ತೋರಿದ್ದರು.
ಸಚಿನ್‌ಗೆ ದೊರೆತ ಎರಡನೇ `ಕ್ರಿಕ್‌ಇನ್ಫೋ~ ಪ್ರಶಸ್ತಿ ಇದು. 2009 ರಲ್ಲಿ ಅವರು ಏಕದಿನ ಕ್ರಿಕೆಟ್‌ನ ಶ್ರೇಷ್ಠ ಬ್ಯಾಟಿಂಗ್ ಪ್ರದರ್ಶನಕ್ಕೆ ನೀಡುವ ಪ್ರಶಸ್ತಿ ಪಡೆದಿದ್ದರು. ಆಸ್ಟ್ರೇಲಿಯಾ ವಿರುದ್ಧ ಹೈದರಾಬಾದ್‌ನಲ್ಲಿ ನಡೆದ ಪಂದ್ಯದಲ್ಲಿ ಗಳಿಸಿದ 175 ರನ್‌ಗಳು ಅವರಿಗೆ ಪ್ರಶಸ್ತಿ ತಂದುಕೊಟ್ಟಿತ್ತು.

ಟೆಸ್ಟ್ ಬೌಲಿಂಗ್‌ನಲ್ಲಿ ಶ್ರೇಷ್ಠ ಪ್ರದರ್ಶನಕ್ಕೆ ನೀಡುವ ಪ್ರಶಸ್ತಿ ನ್ಯೂಜಿಲೆಂಡ್‌ನ ಡಗ್ ಬ್ರೇಸ್‌ವೆಲ್ ಪಾಲಾಗಿದೆ. ಆಸೀಸ್ ವಿರುದ್ಧ ಹೋಬರ್ಟ್‌ನಲ್ಲಿ ನಡೆದ ಟೆಸ್ಟ್‌ನಲ್ಲಿ 40 ರನ್‌ಗಳಿಗೆ ಆರು ವಿಕೆಟ್ ಪಡೆದ ಸಾಧನೆಯಿಂದ ಅವರಿಗೆ ಈ ಪ್ರಶಸ್ತಿ ದೊರೆತಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.