ADVERTISEMENT

ಸದ್ಯದಲ್ಲಿಯೇ ನಿರ್ಧಾರ: ಶುಕ್ಲಾ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2011, 19:30 IST
Last Updated 9 ಅಕ್ಟೋಬರ್ 2011, 19:30 IST

ನವದೆಹಲಿ (ಪಿಟಿಐ): ಮುಂದಿನ ಐಪಿಎಲ್ ಟೂರ್ನಿಯಲ್ಲಿ ಪಾಕಿಸ್ತಾನದ ಕ್ರಿಕೆಟ್ ತಂಡದ ಆಟಗಾರರು ಭಾಗವಹಿಸಲು ಅವಕಾಶ ನೀಡುವ ಕುರಿತು ಅಕ್ಟೋಬರ್ 14ರಂದು ನಡೆಯಲಿರುವ ಆಡಳಿತ ಸಲಹಾ ಸಮಿತಿ ಸಭೆಯಲ್ಲಿ ಚರ್ಚೆಗೆ ಎತ್ತಿಕೊಳ್ಳಲಾಗುವುದು ಎಂದು ಐಪಿಎಲ್ ಮುಖ್ಯಸ್ಥ ರಾಜೀವ ಶುಕ್ಲಾ ತಿಳಿಸಿದ್ದಾರೆ.

2008ರಲ್ಲಿ ಮುಂಬೈ ಮೇಲೆ ಭಯೋತ್ಪಾದಕರ ದಾಳಿ ನಡೆದ ನಂತರ ಪಾಕಿಸ್ತಾನಿ ಆಟಗಾರರನ್ನು ಐಪಿಎಲ್‌ನಲ್ಲಿ ಆಡುವುದನ್ನು ನಿಷೇಧಿಸಲಾಗಿತ್ತು. ಈ ಕುರಿತು ಸುದ್ದಿ ಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಪ್ರತಿಕ್ರಿಯಿಸಿರುವ ಶುಕ್ಲಾ,
 
`ಇಂತಹ ನಿರ್ಧಾರವನ್ನು ಆಡಳಿತ ಸಲಹಾ ಸಮಿತಿ ತೆಗೆದುಕೊಳ್ಳಬೇಕು. ಜೊತೆಗೆ ಐಪಿಎಲ್‌ನ ಈ ನಿರ್ಣಯದ ಬಗ್ಗೆ ಸಮಿತಿಯೂ ಕೂಲಂಕಷವಾಗಿ ಗಮನಿಸಬೇಕು. ಪಾಕಿಸ್ತಾನದ ರೆಫರಿಗಳು, ತರಬೇತುದಾರರು ಐಪಿಎಲ್‌ನ ಕೆಲವು  ಫ್ರ್ಯಾಂಚೈಸಿಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಆದ್ದರಿಂದ ಇದೂ ಇಡೀ ಪಾಕ್ ತಂಡ ಅಥವಾ ದೇಶವನ್ನು ಐಪಿಎಲ್‌ನಿಂದ ನಿಷೇಧಿಸಿದಂತಲ್ಲ. ಆದ್ದರಿಂದ ಯಾರನ್ನೂ ನಿಷೇಧಿಸುವ ಪ್ರಶ್ನೆಯೇ ಇಲ್ಲ~ ಎಂದರು.

`ಏನೇ ಆಗಲಿ ಪಾಕ್ ಆಟಗಾರರ ಕುರಿತು ಐಪಿಎಲ್ ಫ್ರ್ಯಾಂಚೈಸಿ ಮಾಲೀಕರೇ ನಿರ್ಧಾರ ತೆಗೆದುಕೊಳ್ಳಬೇಕು. ಆದರೆ ನಿರ್ಧಾರ ಕೈಗೊಳ್ಳುವ ಮುನ್ನ ವಿವೇಚನೆ ಅಗತ್ಯ~ ಎಂದು ಹೇಳಿದರು.

`ವಿಶ್ವಕಪ್ ಟೂರ್ನಿಯಲ್ಲಿ ಭಾರತ ಮತ್ತು ಪಾಕ್ ನಡುವೆ ಮೊಹಾಲಿಯಲ್ಲಿ ಸೆಮಿಫೈನಲ್ ಪಂದ್ಯ ನಡೆದಾಗ ಉಭಯ ದೇಶಗಳ ಪ್ರಧಾನಮಂತ್ರಿಗಳು ಅಲ್ಲಿ ಭೇಟಿಯಾಗಿದ್ದರು. ಎರಡು ದೇಶಗಳ ಕ್ರಿಕೆಟ್ ಟೂರ್ನಿಯ ಆಯೋಜನೆ ಕುರಿತು ಸಕಾರಾತ್ಮಕ ಪ್ರತಿಕ್ರಿಯೆಯನ್ನು ಇಬ್ಬರೂ ವ್ಯಕ್ತಪಡಿಸಿದ್ದರು. ಪಾಕ್‌ನ ವಿದೇಶಾಂಗ ಸಚಿವೆ ಭಾರತಕ್ಕೆ ಭೇಟಿಯಿತ್ತ ಸಂದರ್ಭದಲ್ಲಿಯೂ ಈ ಕುರಿತು ನನ್ನೊಂದಿಗೆ ಸಮಾಲೋಚನೆ ನಡೆಸಿದ್ದರು~ ಎಂದು ಹೇಳಿದರು.

`ಉಭಯ ತಂಡಗಳ ನಡುವೆ ಕ್ರಿಕೆಟ್ ಟೂರ್ನಿ ಆಯೋಜಿಸಲು ವೇಳಾಪಟ್ಟಿಯಲ್ಲಿ ಅವಕಾಶ ಮತ್ತು ಅಂತಹ ವಾತಾವರಣ ನಿರ್ಮಾಣವೂ ಅಗತ್ಯವಿದೆ. ಭದ್ರತೆಯ ಸಮಸ್ಯೆ ಪರಿಹಾರವಾಗಬೇಕು. ನಂತರವಷ್ಟೇ ಬಿಸಿಸಿಐ ಮತ್ತು ಪಿಸಿಐ ನಡುವಣ ಸ್ನೇಹದ ಅಭಿವೃದ್ಧಿಯಾಗುತ್ತದೆ~ ಎಂದು ಅಭಿಪ್ರಾಯಪಟ್ಟರು.

`ತಟಸ್ಥ ಸ್ಥಳಗಳಲ್ಲಿ ಉಭಯ ತಂಡಗಳು ಕ್ರಿಕೆಟ್ ಆಡುವುದರಲ್ಲಿ ನನಗೆ ಸಹಮತವಿಲ್ಲ. ಎರಡೂ ತಂಡಗಳು ತಮ್ಮ ತಮ್ಮ ನೆಲದಲ್ಲಿಯೇ ಟೂರ್ನಿಯನ್ನು ಆಯೋಜಿಸಬೇಕು. ಈ ಬಗ್ಗೆ ಕಾರ್ಯಪ್ರವೃತ್ತರಾಬೇಕಾದ ಅವಶ್ಯಕತೆ ಇದೆ~ ಎಂದು ಶುಕ್ಲಾ ಹೇಳಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.