ADVERTISEMENT

ಸದ್ಯದಲ್ಲೇ ಭವಿಷ್ಯ ನಿರ್ಧರಿಸುವೆ: ಸ್ಟ್ರಾಸ್

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2011, 19:30 IST
Last Updated 27 ಮಾರ್ಚ್ 2011, 19:30 IST
ಸದ್ಯದಲ್ಲೇ ಭವಿಷ್ಯ ನಿರ್ಧರಿಸುವೆ: ಸ್ಟ್ರಾಸ್
ಸದ್ಯದಲ್ಲೇ ಭವಿಷ್ಯ ನಿರ್ಧರಿಸುವೆ: ಸ್ಟ್ರಾಸ್   

ಲಂಡನ್ (ಪಿಟಿಐ): ಇಂಗ್ಲೆಂಡ್ ಏಕದಿನ ಕ್ರಿಕೆಟ್ ತಂಡದ ನಾಯಕನಾಗಿ ಮುಂದುವರಿಯಬೇಕೇ ಎಂಬುದರ ಬಗ್ಗೆ ಸದ್ಯದಲ್ಲೇ ನಿರ್ಧರಿಸುವುದಾಗಿ ಆ್ಯಂಡ್ರ್ಯೂ ಸ್ಟ್ರಾಸ್ ಹೇಳಿದ್ದಾರೆ. ಶನಿವಾರ ನಡೆದ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಶ್ರೀಲಂಕಾ ಕೈಯಲ್ಲಿ 10 ವಿಕೆಟ್‌ಗಳ ಸೋಲು ಅನುಭವಿಸಿತ್ತು.

ಇದರಿಂದ ಸ್ಟ್ರಾಸ್ ಈ ತೀರ್ಮಾನ ಕೈಗೊಂಡಿದ್ದಾರೆ. ಇಂಗ್ಲೆಂಡ್ ಕ್ರಿಕೆಟ್‌ನ ಭವಿಷ್ಯದ ಬಗ್ಗೆ ನಿರ್ಧರಿಸಿಲು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಅಧಿಕಾರಿಗಳ ಜೊತೆ ಮಾತುಕತೆ ನಡೆಸುವುದಾಗಿಯೂ ಅವರು ನುಡಿದರು. ‘ಇಸಿಬಿ ಅಧಿಕಾರಿಗಳು ಹಾಗೂ ಆಯ್ಕೆಗಾರರ ಜೊತೆ ಸೇರಿಕೊಂಡು ಚರ್ಚೆ ನಡೆಸಬೇಕು. ಆ ಮೂಲಕ ಇಂಗ್ಲೆಂಡ್‌ನ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್‌ನ ಏಳಿಗೆಗೆ ಒಂದು ಯೋಜನೆ ರೂಪಿಸಬೇಕು. ನಾಯಕತ್ವದಲ್ಲಿ ಅಥವಾ ತಂಡದಲ್ಲಿ ಬದಲಾವಣೆ ಬೇಕೇ ಎಂಬುದರ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಬೇಕಾಗಿದೆ’ ಎಂದು ಸ್ಟ್ರಾಸ್ ತಿಳಿಸಿದರು.

ಇಂಗ್ಲೆಂಡ್ ತಂಡ ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳುವ ಮುನ್ನ ಆಸ್ಟ್ರೇಲಿಯಾದಲ್ಲಿ ಸುದೀರ್ಘ ಪ್ರವಾಸ ಕೈಗೊಂಡಿತ್ತು. ಆ ಬಳಿಕ ಆಟಗಾರರು ವಿಶ್ರಾಂತಿ ಇಲ್ಲದೆಯೇ ವಿಶ್ವಕಪ್‌ಗೆ ಆಗಮಿಸಿದ್ದರು. ಇದು ಕೂಡಾ ತಂಡದ ಪ್ರದರ್ಶನದ ಮೇಲೆ ಪರಿಣಾಮ ಬೀರಿತು ಎಂದು ಅವರು ಹೇಳಿದರು. ‘ಸೋಲಿಗೆ ತಂಡದ ಆಟಗಾರರನ್ನು ದೂರುತ್ತಿಲ್ಲ. ಅವರು ತಮಗೆ ಸಾಧ್ಯವಾದಷ್ಟು ಪ್ರಯತ್ನ ಮಾಡಿದರು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.