ADVERTISEMENT

ಸನ್‌ರೈಸರ್ಸ್‌ಗೆ `ಸೂಪರ್' ಗೆಲುವು

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2013, 20:35 IST
Last Updated 7 ಏಪ್ರಿಲ್ 2013, 20:35 IST
ಸನ್‌ರೈಸರ್ಸ್‌ಗೆ `ಸೂಪರ್' ಗೆಲುವು
ಸನ್‌ರೈಸರ್ಸ್‌ಗೆ `ಸೂಪರ್' ಗೆಲುವು   

ಹೈದರಾಬಾದ್: `ಸೂಪರ್ ಓವರ್'ನಲ್ಲಿ ಫಲಿತಾಂಶ ನಿರ್ಣಯವಾದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವನ್ನು ಮಣಿಸಿದ ಸನ್‌ರೈಸರ್ಸ್ ಹೈದರಾಬಾದ್ ಐಪಿಎಲ್ ಟ್ವೆಂಟಿ-20 ಟೂರ್ನಿಯಲ್ಲಿ ಸತತ ಎರಡನೇ ಗೆಲುವು ಪಡೆಯಿತು.

ಉಪ್ಪಳದಲ್ಲಿರುವ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಪಂದ್ಯ `ಟೈ'ನಲ್ಲಿ ಅಂತ್ಯಕಂಡಿತು. ಇದರಿಂದ ವಿಜೇತರನ್ನು ನಿರ್ಣಯಿಸಲು `ಸೂಪರ್ ಓವರ್'ನ ಮೊರೆ ಹೋಗಲಾಯಿತು.

ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ ಎಂಟು ವಿಕೆಟ್ ಕಳೆದುಕೊಂಡು 130 ರನ್ ಗಳಿಸಿತು. ನಾಯಕ ವಿರಾಟ್ ಕೊಹ್ಲಿ (46; 44 ಎಸೆತ, 5 ಬೌಂಡರಿ, 1 ಸಿಕ್ಸರ್) ಹಾಗೂ ಮೊಸೆಸ್ ಹೆನ್ರಿಕ್ಸ್ (44) ಮಾತ್ರ ಉತ್ತಮ ಪ್ರದರ್ಶನ ನೀಡಿದರು.

ಅಷ್ಟೇನು ಸವಾಲು ಅಲ್ಲದ ಗುರಿ ಬೆನ್ನಟ್ಟಿದ ಸನ್‌ರೈಸರ್ಸ್ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 130 ರನ್ ಪೇರಿಸಿದ ಕಾರಣ ಪಂದ್ಯ `ಟೈ'ನಲ್ಲಿ ಕೊನೆಗೊಂಡಿತು. ಅಂತಿಮ ಓವರ್‌ನಲ್ಲಿ ಏಳು ರನ್‌ಗಳು ಬೇಕಿದ್ದವು. ಆದರೆ ವಿನಯ್ ಕುಮಾರ್ ಎಸೆದ ಓವರ್‌ನಲ್ಲಿ ಸನ್‌ರೈಸರ್ಸ್ ಆರು ರನ್ ಮಾತ್ರ ಗಳಿಸಿತು.

`ಸೂಪರ್ ಓವರ್'ನಲ್ಲಿ ಸನ್‌ರೈಸರ್ಸ್ ಪರ ಕೆಮರೂನ್ ವೈಟ್ ಮತ್ತು ತಿಸಾರ ಪೆರೇರಾ ಬ್ಯಾಟ್ ಮಾಡಿದರು. ಆರ್‌ಸಿಬಿ ಪರ ಬೌಲ್ ಮಾಡಿದ್ದು ವಿನಯ್ ಕುಮಾರ್. ವೈಟ್ ಸಿಡಿಸಿದ ಎರಡು ಸಿಕ್ಸರ್‌ಗಳ ನೆರವಿನಿಂದ ಸನ್‌ರೈಸರ್ಸ್ 20 ರನ್ ಕಲೆಹಾಕಿತು. ಇದರಲ್ಲಿ 17 ರನ್‌ಗಳು ವೈಟ್ ಬ್ಯಾಟ್‌ನಿಂದ ಬಂದವು.

ಆರ್‌ಸಿಬಿ ಪರ ಆಡಿದ ಕ್ರಿಸ್ ಗೇಲ್ ಮತ್ತು ವಿರಾಟ್ ಕೊಹ್ಲಿ 15 ರನ್ ಗಳಿಸಲಷ್ಟೇ ಯಶಸ್ವಿಯಾದರು. `ಸೂಪರ್ ಓವರ್'ನಲ್ಲಿ ಸನ್‌ರೈಸರ್ಸ್ ಪರ ಬೌಲ್ ಮಾಡಿದ ಡೇಲ್ ಸ್ಟೇಯ್ನ ತಂಡದ ಗೆಲುವಿನ ರೂವಾರಿ ಎನಿಸಿದರು.

ಬ್ಯಾಟಿಂಗ್ ವೈಫಲ್ಯ: ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಲು ಮುಂದಾದ ಚಾಲೆಂಜರ್ಸ್ ಯೋಜನೆಯೇ ಕೈಕೊಟ್ಟಿತು. 4 ಓವರ್ ಮುಗಿಯುವಷ್ಟರಲ್ಲಿ ಆರಂಭಿಕ ಬ್ಯಾಟ್ಸ್ ಮನ್‌ಗಳಾದ ಗೇಲ್ ಹಾಗೂ ತಿಲಕರತ್ನೆ ದಿಲ್ಶಾನ್ ಪೆವಿಲಿಯನ್ ಸೇರಿದರು.

ಕಾಕಿನಾಡದ 19 ವರ್ಷ ವಯಸ್ಸಿನ ಬೌಲರ್ ಹುನುಮ ಅವರನ್ನು ಅರ್ಥ ಮಾಡಿಕೊಳ್ಳಲು ವೆಸ್ಟ್ ಇಂಡೀಸ್‌ನ ಗೇಲ್‌ಗೆ ಸಾಧ್ಯವಾಗಲಿಲ್ಲ. ಅವರು ಹಾಕಿದ ಮೊದಲ ಎಸೆತದಲ್ಲಿಯೇ ವಿಕೆಟ್ ಒಪ್ಪಿಸಿದರು. ಮುಂಬೈ ಇಂಡಿಯನ್ಸ್ ಎದುರು ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ತಮ್ಮ ಮೊದಲ ಪಂದ್ಯದಲ್ಲಿ ಆರ್‌ಸಿಬಿಗೆ ಗೆಲುವಿಗೆ ಕಾರಣರಾಗಿದ್ದ ಗೇಲ್ ಅವರ ಪತನ ತಂಡವನ್ನು ಸಂಕಷ್ಟದಲ್ಲಿ ಸಿಲುಕಿಸಿತು. ಅವರ ಮೇಲೆ ಈ ತಂಡದವರು ಎಷ್ಟು ಅವಲಂಬಿತವಾಗಿದ್ದಾರೆ ಎಂಬುದು ಇದಕ್ಕೆ ಸಾಕ್ಷಿ.

ಈ ವಿಕೆಟ್ ಪತನ ಸನ್‌ರೈಸರ್ಸ್ ತಂಡದ ವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿತು. ನಾಲ್ಕನೇ ಓವರ್‌ನಲ್ಲಿ ವೇಗಿ ಇಶಾಂತ್ ಶರ್ಮ ಮತ್ತೊಬ್ಬ ಆರಂಭಿಕ ಬ್ಯಾಟ್ಸ್‌ಮನ್ ದಿಲ್ಶಾನ್ ಅವರನ್ನು ಬೌಲ್ಡ್ ಮಾಡಿದರು. ಹಾಗಾಗಿ ರಾಯಲ್ ಚಾಲೆಂಜರ್ಸ್ ಒತ್ತಡಕ್ಕೆ ಸಿಲುಕಿತು.

ಈ ಹಂತದಲ್ಲಿ ನಾಯಕ ಕೊಹ್ಲಿ ಆಕರ್ಷಕ ಬೌಂಡರಿಗಳ ಮೂಲಕ ತಂಡಕ್ಕೆ ಆಸರೆಯಾದರು. ಅವರಿಗೆ ಮೊಯಿಸೆಸ್ ಹೆನ್ರಿಕ್ಸ್ ಉತ್ತಮ ಬೆಂಬಲ ನೀಡಿದರು. 40 ಎಸೆತಗಳನ್ನು ಎದುರಿಸಿದ ಅವರು 5 ಬೌಂಡರಿಗಳ ಸಮೇತ 44 ರನ್ ಗಳಿಸಿದರು. ಹಾಗಾಗಿ ಕೊನೆಯಲ್ಲಿ ತಂಡ 130 ರನ್‌ಗಳ ಗಡಿ ಮುಟ್ಟಲು ಸಾಧ್ಯವಾಯಿತು. ಕ್ರಿಸ್ಟಿಯಾನ್ ಬದಲಿಗೆ ಹೆನ್ರಿಕ್ಸ್ ಈ ಪಂದ್ಯದಲ್ಲಿ ಸ್ಥಾನ ಪಡೆದಿದ್ದರು.

ಇಬ್ಬರಿಬ್ಬರನ್ನು ಹೊರತುಪಡಿಸಿದರೆ ಉಳಿದ ಯಾವುದೇ ಬ್ಯಾಟ್ಸ್‌ಮನ್ ಎರಡಂಕಿ ಮೊತ್ತ ಮುಟ್ಟಲಿಲ್ಲ. ಕರುಣ್ ನಾಯರ್, ಮಯಾಂಕ್ ಅಗರವಾಲ್ ಮತ್ತೆ ವಿಫಲವಾದರು.

ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 130
ಕ್ರಿಸ್ ಗೇಲ್ ಸಿ ಪಾರ್ಥಿವ್  ಬಿ ಹನುಮ ವಿಹಾರಿ  01
ತಿಲಕರತ್ನೆ ದಿಲ್ಶಾನ್ ಬಿ ಇಶಾಂತ್ ಶರ್ಮ  05
ವಿರಾಟ್ ಕೊಹ್ಲಿ ಸಿ ಅಂಡ್ ಬಿ ಆಶೀಶ್ ರೆಡ್ಡಿ  46
ಕರುಣ್ ನಾಯರ್ ಎಲ್‌ಬಿಡಬ್ಲ್ಯು ಬಿ ಮಿಶ್ರಾ  09
ಮೊಸೆಸ್ ಹೆನ್ರಿಕ್ಸ್ ಸಿ ವೈಟ್ ಬಿ ಇಶಾಂತ್ ಶರ್ಮ  44
ಮಯಾಂಕ್ ಅಗರವಾಲ್ ಸಿ ಅಂಕಿತ್ ಬಿ ಸ್ಟೇಯ್ನ  07
ಅರುಣ್ ಕಾರ್ತಿಕ್ ಸಿ ಆಶೀಶ್ ಬಿ ತಿಸ್ಸಾರ ಪೆರೇರಾ  00
ಆರ್.ವಿನಯ್ ಕುಮಾರ್ ಸಿ ಸಂಗಕ್ಕಾರ ಬಿ ಇಶಾಂತ್ ಶರ್ಮ  07
ಮುರಳಿ ಕಾರ್ತಿಕ್ ಔಟಾಗದೆ  02
ಜಯದೇವ್ ಉನದ್ಕತ್ ಔಟಾಗದೆ  01
ಇತರೆ (ಲೆಗ್‌ಬೈ-1, ವೈಡ್-7)  08
ವಿಕೆಟ್ ಪತನ: 1-8 (ಗೇಲ್; 1.1); 2-22 (ದಿಲ್ಶಾನ್; 3.4); 3-42 (ನಾಯರ್; 7.1); 4-85 (ಕೊಹ್ಲಿ; 13.6); 5-108 (ಮಯಾಂಕ್; 16.6); 6-114 (ಅರುಣ್; 17.6); 7-125 (ಹೆನ್ರಿಕ್ಸ್; 19.1); 8-127 (ವಿನಯ್; 19.3)
ಬೌಲಿಂಗ್: ಡೇಲ್ ಸ್ಟೇಯ್ನ 4-0-37-1 (ವೈಡ್-2), ಹನುಮ ವಿಹಾರಿ 1-0-5-1, ಇಶಾಂತ್ ಶರ್ಮ 4-0-27-3, ಅಂಕಿತ್ ಶರ್ಮ 2-0-17-0, ತಿಸ್ಸಾರ ಪೆರೇರಾ 4-0-21-1, ಅಮಿತ್ ಮಿಶ್ರಾ 4-0-15-1, ಆಶೀಶ್ ರೆಡ್ಡಿ 1-0-7-1
ಸನ್‌ರೈಸರ್ಸ್ ಹೈದರಾಬಾದ್: 20 ಓವರ್‌ಗಳಲ್ಲಿ 7 ವಿಕೆಟ್‌ಗೆ 130
ಅಕ್ಷತ್ ರೆಡ್ಡಿ ಬಿ ಮುತ್ತಯ್ಯ ಮುರಳೀಧರನ್  23
ಪಾರ್ಥಿಲ್ ಪಟೇಲ್ ಸಿ ಅರುಣ್ ಬಿ ಹೆನ್ರಿಕ್ಸ್  02
ಕೆಮರೂನ್ ವೈಟ್ ಸಿ ಮುರಳೀಧರನ್ ಬಿ ಹೆನ್ರಿಕ್ಸ್  05
ಹನುಮ ವಿಹಾರಿ ಔಟಾಗದೆ  44
ಕುಮಾರ ಸಂಗಕ್ಕಾರ ಸಿ ಅರುಣ್ ಬಿ ಉನದ್ಕತ್  16
ತಿಸ್ಸಾರ ಪೆರೇರಾ ಸಿ ಹೆನ್ರಿಕ್ಸ್ ಬಿ ಉನದ್ಕತ್  07
ಅಮಿತ್ ಮಿಶ್ರಾ ರನೌಟ್  00
ಆಶೀಶ್ ರೆಡ್ಡಿ ಸಿ ಕೊಹ್ಲಿ ಬಿ ವಿನಯ್ ಕುಮಾರ್  14
ಡೇಲ್ ಸ್ಟೇಯ್ನ ಔಟಾಗದೆ  03
ಇತರೆ: (ಬೈ-1, ಲೆಗ್‌ಬೈ-9, ವೈಡ್-6)  16
ವಿಕೆಟ್ ಪತನ: 1-4 (ಪಾರ್ಥಿವ್; 1.1), 2-20 (ವೈಟ್; 3.3), 3-48 (ರೆಡ್ಡಿ; 8.2), 4-81 (ಸಂಗಕ್ಕಾರ; 13.4), 5-98 (ಪೆರೇರಾ; 15.5), 6-101 (ಮಿಶ್ರಾ; 16.1), 7-124 (ಆಶೀಶ್; 19.1)
ಬೌಲಿಂಗ್: ಜಯದೇವ್ ಉನದ್ಕತ್ 4-0-24-2, ಮೊಸೆಸ್ ಹೆನ್ರಿಕ್ಸ್ 3-0-14-2, ಮುರಳಿ ಕಾರ್ತಿಕ್ 4-0-27-0, ಆರ್. ವಿನಯ್ ಕುಮಾರ್ 4-0-27-1, ಮುತ್ತಯ್ಯ ಮುರಳೀಧರನ್ 4-0-18-1, ತಿಲಕರತ್ನೆ ದಿಲ್ಶಾನ್ 1-0-10-0
ಫಲಿತಾಂಶ: ಪಂದ್ಯ `ಟೈ', ಸೂಪರ್ ಓವರ್‌ನಲ್ಲಿ ಸನ್‌ರೈಸರ್ಸ್‌ಗೆ ಗೆಲುವು, ಪಂದ್ಯಶ್ರೇಷ್ಠ: ಹನುಮ ವಿಹಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT