ADVERTISEMENT

ಸಮರ್ಥ್, ಲಿಯಾನ್ ಖಾನ್ ಶತಕ ವೈಭವ

ಶಫಿ ದಾರಾಷ ಕ್ರಿಕೆಟ್: ಅಧ್ಯಕ್ಷರ ಇಲೆವೆನ್ ಸವಾಲಿನ ಮೊತ್ತ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2013, 19:59 IST
Last Updated 4 ಆಗಸ್ಟ್ 2013, 19:59 IST

ಬೆಂಗಳೂರು: ಭರವಸೆಯ ಬ್ಯಾಟ್ಸ್ ಮನ್‌ಗಳಾದ ಅರ್. ಸಮರ್ಥ್ ಮತ್ತು ಲಿಯಾನ್ ಖಾನ್ ಅವರ ಶತಕದ ಅಬ್ಬರದ ಬಲದಿಂದ ಕೆಎಸ್‌ಸಿಎ ಅಧ್ಯಕ್ಷರ ಇಲೆವೆನ್ ತಂಡ ಶಫಿ  ದಾರಾಷ ಕ್ರಿಕೆಟ್ ಟೂರ್ನಿಯ ಹರಿಯಾಣ ಎದುರಿನ ಸೆಮಿಫೈನಲ್ ಪಂದ್ಯದಲ್ಲಿ ಮೊದಲ ದಿನ ಸವಾಲಿನ ಮೊತ್ತ ಕಲೆ ಹಾಕಿದೆ.

ಆಲೂರು ಮೂರನೇ ಕ್ರೀಡಾಂಗಣದಲ್ಲಿ ಭಾನುವಾರ ಆರಂಭ ವಾದ ನಾಲ್ಕು ದಿನಗಳ ಪಂದ್ಯದಲ್ಲಿ ಟಾಸ್ ಗೆದ್ದ ಕುನಾಲ್ ಕಪೂರ್ ಸಾರಥ್ಯದ ಅಧ್ಯಕ್ಷರ ಇಲೆವೆನ್ ತಂಡ ಮೊದಲ ದಿನದಾಟದ ಅಂತ್ಯಕ್ಕೆ 98 ಓವರ್‌ಗಳಲ್ಲಿ ಎರಡು ವಿಕೆಟ್ ಕಳೆದು ಕೊಂಡು 444 ರನ್ ಕಲೆ ಹಾಕಿ ಬೃಹತ್ ಮೊತ್ತದತ್ತ ಪೇರಿಸಿದೆ.

ಲೀಗ್ ಪಂದ್ಯಗಳಲ್ಲಿಯೂ ಉತ್ತಮ ಪ್ರದರ್ಶನ ತೋರಿದ ಸಮರ್ಥ್ (171, 228ಎಸೆತ, 27 ಬೌಂಡರಿ) ಹಾಗೂ ಲಿಯಾನ್ (141, 237ಎಸೆತ, 16 ಬೌಂಡರಿ) ಅವರ ಬ್ಯಾಟಿಂಗ್ ಮುಂದೆ ಹರಿಯಾಣದ ಬೌಲರ್‌ಗಳು ಸುಸ್ತಾದರು. ಈ ಜೋಡಿಯನ್ನು ಕಟ್ಟಿ ಹಾಕಲು ಪಟ್ಟ ಪಡಿಪಾಟಲು ಅಷ್ಟಿಷ್ಟಲ್ಲ. ಲಿಯಾನ್ ಐದೂವರೆ ಗಂಟೆಗೂ ಹೆಚ್ಚು ಕಾಲ ಕ್ರಿಸ್‌ನಲ್ಲಿದ್ದರು.

ಆರಂಭಿಕ ಈ ಜೋಡಿ ಮೊದಲ ವಿಕೆಟ್ ಜೊತೆಯಾಟದಲ್ಲಿ 69.2 ಓವರ್‌ಗಳಲ್ಲಿ 285 ರನ್‌ಗಳನ್ನು ಕಲೆ ಹಾಕಿತು. ನಂತರ ಬಂದ ಕುನಾಲ್ (ಬ್ಯಾಟಿಂಗ್ 84, 94ಎಸೆತ, 12ಬೌಂಡರಿ) ಕೂಡಾ ಅಬ್ಬರಿಸಿದರು.

ಮನೀಷ್ ಶತಕ: ಆಲೂರು ಎರಡನೇ ಕ್ರೀಡಾಂಗಣದಲ್ಲಿ ನಡೆದ ಇನ್ನೊಂದು ಸೆಮಿಫೈನಲ್ ಪಂದ್ಯದಲ್ಲಿ ಕೆಎಸ್‌ಸಿಎ ಇಲೆವೆನ್ ತಂಡದ ಮನೀಷ್ ಪಾಂಡೆ (105, 12ಬೌಂಡರಿ, 3 ಸಿಕ್ಸರ್) ಶತಕ ಗಳಿಸಿದ್ದರಿಂದ ಈ ತಂಡ ಮೊದಲ ಇನಿಂಗ್ಸ್‌ನಲ್ಲಿ 86.2 ಓವರ್‌ಗಳಲ್ಲಿ 341 ರನ್ ಗಳಿಸಿತು. ಏಳು ವಿಕೆಟ್ ಉರುಳಿಸಿದ ಕಾರ್ಯದರ್ಶಿ ತಂಡದ ಜೆ. ನಿಶ್ಚಲ್ ಪ್ರಭಾವಿ ಎನಿಸಿದರು.

ಕಾರ್ಯದರ್ಶಿ ಇಲೆವೆನ್ ಎದುರಿನ ಪಂದ್ಯದಲ್ಲಿ ಮನೀಷ್ ಅಬ್ಬರದ ಜೊತೆಗೆ ಗಣೇಶ್ ಸತೀಶ್ ಸಹ ಮಿಂಚಿದರು. ಬಲಗೈ ಬ್ಯಾಟ್ಸ್‌ಮನ್ ಗಣೇಶ್ (82, 10 ಬೌಂಡರಿ, 2 ಸಿಕ್ಸರ್) ಮತ್ತು ಅಮಿತ್ ವರ್ಮ (71, 8ಬೌಂಡರಿ, 2 ಸಿಕ್ಸರ್) ಸಿಡಿಸಿದರೆ, ವೇಗದ ಬೌಲರ್ ಎಸ್.ಎಲ್. ಅಕ್ಷಯ್ ಮೂರು ಬೌಂಡರಿ ಹಾಗೂ ಎರಡು ಸಿಕ್ಸರ್ ಸೇರಿದಂತೆ 41 ರನ್‌ಗಳನ್ನು ಕಲೆ ಹಾಕಿದರು.

ಸಂಕ್ಷಿಪ್ತ ಸ್ಕೋರು: ಕೆಎಸ್‌ಸಿಎ ಇಲೆವೆನ್ 86.2 ಓವರ್‌ಗಳಲ್ಲಿ 341. (ಮನೀಷ್ ಪಾಂಡೆ 105, ಗಣೇಶ್ ಸತೀಶ್ 82, ಅಮಿತ್ ವರ್ಮಾ 71, ಎಸ್.ಎಲ್. ಅಕ್ಷಯ್ 41; ಜೆ.ಸುಚಿತ್ 93ಕ್ಕೆ7, ಕೆ. ಹೊಯ್ಸಳ 81ಕ್ಕೆ2. ಕೆಎಸ್‌ಸಿಎ ಕಾರ್ಯದರ್ಶಿ ಇಲೆವೆನ್ 9 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 52. (ಮಯಂಕ್ ಅಗರ್‌ವಾಲ್ ಬ್ಯಾಟಿಂಗ್ 17, ಕರುಣ್ ನಾಯರ್ ಬ್ಯಾಟಿಂಗ್ 23).

ಕೆಎಸ್‌ಸಿಎ ಅಧ್ಯಕ್ಷರ ಇಲೆವೆನ್ 98 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 444. (ಆರ್. ಸಮರ್ಥ್, ಲಿಯಾನ್ ಖಾನ್  141, ಕುನಾಲ್ ಕಪೂರ್ ಬ್ಯಾಟಿಂಗ್ 84; ಜಯಂತ್ ಯಾದವ್ 82ಕ್ಕೆ1) ಹರಿಯಾಣ ಕ್ರಿಕೆಟ್ ಸಂಸ್ಥೆ ಎದುರಿನ ಪಂದ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.